ದೀಪದ ಎಣ್ಣೆ ಮತ್ತು ಬತ್ತಿಗಳ ಒಡನಾಟ
ದೀಪದ ಎಣ್ಣೆ ಮತ್ತು ಬತ್ತಿಗಳ ಒಡನಾಟ


ಎಣ್ಣೆಯಿಲ್ಲದೆ ಬರೀ ಬತ್ತಿಗೆ ಬೆಂಕಿ ತಾಗಿಸಲು
ಬತ್ತಿ ಭಸ್ಮವಾಗಿ ಬೆಳಕು ಒಡನೆ ಮಾಯವಾಯಿತು;
ಬತ್ತಿಯಿಲ್ಲದೆ ಬರೀ ಎಣ್ಣೆಗೆ ಬೆಂಕಿ ತಾಗಿಸಲು
ಎಣ್ಣೆಗೆ ಬೆಂಕಿ ತಾಗದಾಗಿ ಬೆಳಕು ಕಾಣದಾಯಿತು;
ತಾನೇ ಉರಿದು ಬೆಳಕ ಚೆಲ್ಲಿದರೂ
ಬೆಳಕು ಬಹು ಕಾಲ ಇರಲೆಂದೆಣಿಸಿದ ಬತ್ತಿ
ಬೆಳಕು ಕೊಡುವ ಶಕ್ತಿಯಿರುವ ಎಣ್ಣೆಯೊಳು ತಾ ಮಿಂದು
ಎರಡೂ ಜೊತೆಗೂಡಿ ಬೆಳಕ ಚೆಲ್ಲುತಲಿದ್ದವು;
ಅವುಗಳ ಒಡನಾಟ ಹೀಗೆ ಸಾಗುತಲಿರಲು ಬತ್ತಿ ಎಣ್ಣೆಗೆ ಕೇಳಿತು:
"ನಾನಿಲ್ಲದಿದ್ದರೆ ನೀ ಹೇಗೆ ಬೆಳಕ ಕೊಡಬಲ್ಲೆ?"
ಎಣ್ಣೆ ಬತ್ತಿಗೆ ಮರು ಪ್ರಶ್ನೆ ಹಾಕಿತು"
"ನಾನಿಲ್ಲದಿದ್ದರೆ ಕ್ಷಣಮಾತ್ರದಲ್ಲಿ ನೀನು ಭಸ್ಮವಾಗುತ್ತಿದ್ದೆಯಲ್ಲ?"
ಎಣ್ಣೆ, ಬತ್ತಿಯ ನಡುವೆ ಯಾರು ಹೆಚ್ಚು ಎಂಬ ವಾದ ಜರುಗಿರಲು
ಇಬ್ಬರೂ ಬೆಂಕಿಯ ಬಳಿ ಹೋಗಿ ಕೇಳಲು ಬೆಂಕಿ ಉತ್ತರಿಸಿತು:
"ಜಗತ್ತಿಗೆ ಬೆಳಕ ನೀಡುವಲ್ಲಿ ಯಾರೂ ಹೆಚ್ಚು, ಕಡಿಮೆಯೆಂಬುದಿಲ್ಲ,
ಅಂಧಕಾರವ ನೀಗಿ ಬೆಳಕು ಹರಿಯಬೇಕಾದರೆ ಎಲ್ಲರೂ ಕೂಡಿ
ಒಬ್ಬರಿಗೊಬ್ಬರು ನಿಸ್ವಾರ್ಥದಿಂದ ಸಹಕರಿಸುತ್ತ
ತಮಗೆ ಏನು ಸಾಧ್ಯವೋ ಅದನ್ನ ಆಡದೆ ಮಾಡಿ ಮುಗಿಸಬೇಕು,
ಬೆಂಕಿಯಾಗಿ ನಾನು ಕೊಂಚ ಪ್ರಮಾಣದಲ್ಲಿ ಬೆಳಕ ನೀಡುವೆಯಾದರೂ
ನಿಮ್ಮಿಬ್ಬರ ಗುಣಗಳು ನನ್ನಲ್ಲಿಲ್ಲವಾಗಿ
ನಿಮ್ಮಿಬ್ಬರಿಗೂ ಅಗತ್ಯವಾದ ಸಹಕಾರ ನೀಡುವ ಮೂಲಕ
ನನ್ನ ಪಾತ್ರವನ್ನ ನಿರ್ವಹಿಸುತ್ತಿದ್ದೇನಷ್ಟೆ, ಹಾಗೆಯೇ,
ನಮ್ಮೆಲ್ಲರಿಗೂ ವಾಯುವಿನ ಸಹಕಾರವೂ ದೊಡ್ಡದಲ್ಲವೇ?
ನಿಮ್ಮಿಬ್ಬರನೂ ಹೊತ್ತುಕೊಂಡು ಆಶ್ರಯ ನೀಡುವಲ್ಲಿ
ಹಣತೆಯ ಪಾತ್ರವೂ ದೊಡ್ಡದಲ್ಲವೇ?"
ಬೆಂಕಿಯ ಮಾತು ಕೇಳಿ ಎಣ್ಣೆ ಬತ್ತಿಗಳೀರ್ವರೂ
ತಮ್ಮ ಇರುವಿಕೆಯ ಸತ್ಯದ ಅರಿವು ಪಡೆದು ಧನ್ಯವೆನಿಸಿದವು;
ಸಹಾಯ ಮಾಡಿದೆನೆಂಬ ಅಹಂಕಾರವಾಗಲೀ,
ಇನ್ನೊಬ್ಬರ ಸಹಾಯ ಪಡೆಯಬೇಕೆಂಬ
ಹಿಂಜರಿಕೆಯಾಗಲೀ, ಕೀಳರಿಮೆಯಾಗಲೀ ಇರದೆ,
ನಮ್ಮೆಲ್ಲರ ಅಸ್ತಿತ್ವದಲ್ಲಿ ಒಂದೇ ಸಾಮ್ಯತೆಯಿದ್ದು,
ಒಟ್ಟಾಗಿ ಬದುಕುವ ಕಲೆಯನ್ನ ಕಲಿಯುತ್ತ ಸದಾ
ಮುನ್ನಡೆಯುವುದೇ ನಮ್ಮಇರುವಿಕೆಯ ಮಹತ್ವ ಎಂದುಕೊಂಡವು.