ಕರ್ಷಯತಿ ಇತಿ ಕೃಷ್ಣ:
ಕರ್ಷಯತಿ ಇತಿ ಕೃಷ್ಣ:
ಆಕರ್ಷಿಸುವವನೆ ಕೃಷ್ಣ
ಕೇಳುತ್ತಲೇ ಬೆಳೆದೆ ಬಾಲ್ಯದಿ
ನಿನ್ನಯ ಕಥೆಗಳ ಮೋದದಿ
ಅಮ್ಮ ವರ್ಣಿಸಿರೆ ನಿನ್ನ ತುಂಟಾಟ
ಗುಳುಂ ಒಳಹೋಗುತ್ತಿತ್ತು ಊಟ
ಹುಟ್ಟಿದೆ ನೀ ಕಗ್ಗತ್ತಲ ಸೆರೆಮನೆಯಲ್ಲಿ ಬೆಳೆದೆ ಗೋಪಾಲನಾಗಿ ಗೋಕುಲದಲ್ಲಿ
ಒಂದೇ ಎರಡೇ ನಿನ್ನ ಬಾಲ್ಯ ಕಥಾವಳಿ
ಪಡೆದರು ಸತ್ತ ಅಸುರರು ಕಾರುಣ್ಯದ ಬಳುವಳಿ
ಬೆಳೆದಂತೆಲ್ಲ ತೋರಿದೆ ನಿನ್ನ ಧರ್ಮರಕ್ಷಾ ಕಾರ್ಯ
ಕಳೆದುಕೊಳ್ಳದೇ ಸದಾಕಾಲವೂ ನಿನ್ನ ಮಾಧುರ್ಯ
ಅನವರತವೂ ನೀನಾಗಿದ್ದೆಯೋ ಹಸನ್ಮುಖಿ
ನೋಡುವವರ ಕಣ್ಣಿಗಂತೂ ನೀ ಸದಾ ಸುಖಿ
ಒಳಹೊಕ್ಕು ಕಂಡವರ್ಯಾರಿಲ್ಲ ನಿನ್ನಂತರಂಗ
ತಪ್ಪರ್ಥೈಸಿದರೆಲ್ಲ ನೀ ಆಡಿಸಿದ ಬಹಿರಂಗ
ನೋಡುವವರಿಗೆ ನೀ ಆಗಿದ್ದೆ ಪುಟ್ಟ ಬಾಲಕ
ನಿನ್ನ ಚತುರಮತಿಯದೋ!! ಅದೆಂಥ ಕೌತುಕ
ನೊಂದವರ ಕಣ್ಣೀರ ಒರೆಸಿದ ಕೃಪಾಸಿಂಧು
ಗೀತೆಯ ರೂಪದಿ ಇಂದಿಗೂ ನೀ ಎಲ್ಲರ ಬಂಧು
ಕಾಲಪುರುಷನಾಗಿ ತೆಗೆದುಕೊಳ್ಳುವೆ ಆಪೋಶನ
ಸದಾ ನಿನ್ನ ಸೇವೆಯಲ್ಲೇ ನಿರತ ಆ ಸುದರ್ಶನ
ಶತ್ರು ಮಿತ್ರರಿಗುಂಟು ನಿನ್ನಲ್ಲಿ ಸಮಾನ ಆಕರ್ಷಣೆ
ನಿಜ ಭಕ್ತರು ಮಾಡುವರು ಎಲ್ಲದರ ಕೃಷ್ಣಾರ್ಪಣೆ
ನೆಲೆಸಿರು ಎಂದಿಗೂ ಎನ್ನ ಹೃದಯಕಮಲದಿ
ಬೆಳಗುತಿರಲಿ ಜ್ಞಾನದ ಜ್ಯೋತಿ ನಿರಂತರದಿ
ನನ್ನದೆಂಬುದು ಇಲ್ಲಿ ಏನೂ ಯಾವುದೂ ಇಲ್ಲ
ಕಡೆಗಾದರೂ ಅರಿವಾಗಿದೆ ನೀನೇ ನನ್ನಿಹಪರವೆಲ್ಲ
ಹುಟ್ಟಿನಿಂದ ಅವತಾರದ ಕೊನೆ
ಗಳಿಗೆ ವರೆಗೆ
ನಿನ್ನ ಜೀವನವೇ ಆದರ್ಶ ಎನ್ನಯ ಈ ಬಾಳಿಗೆ
ಬಂದದ್ದು ಬಂದಂತೆ ಇದ್ದದ್ದು ಇದ್ದಂತೆ ಸ್ವೀಕರಿಸಿ
ನೀ ಕರೆದಾಗ ಓಡೋಡಿ ಬರುವೆ ಪಾದಗಳ ಅರಸಿ
🙏🙏🙏🙏🙏🙏🙏🙏🙏🙏🙏🙏🙏🙏🙏
