ಅಪ್ಪ ನೆಟ್ಟ ಮರ
ಅಪ್ಪ ನೆಟ್ಟ ಮರ
ಎಂದೋ ಅಪ್ಪ ನೆಟ್ಟ ಆಲದ ಮರ
ಅಡ್ಡ ಕೊಂಬೆಗಳೆಷ್ಟೋ
ಹಬ್ಬಿದ ಬೀಳಲುಗಳೆಷ್ಟೋ
ಅದಕ್ಕೀಗ ಎಪ್ಪತ್ತು ವರ್ಷ
ಪೂರ್ಣ ವಸಂತ !
ಅಂದು ಗಿಡ ನೆಟ್ಟು ಮೆಟ್ಟಿ
ಮುರಿಯದ ಹಾಗೆ
ಕಾದಿದ್ದ ಬೇಲಿ ಕಟ್ಟಿ
ನೀರೆರೆದು ಬೆಳೆಸಿದ್ದ ಕಟ್ಟೆ ಕಟ್ಟಿ
ನೆರಳಿತ್ತು ಬೆಳೆದಂತೆ ಹಸಿರೆತ್ತಿ ಹಿಡಿದಂತೆ
ಏರಿ ಆಕಾಶದತ್ತ ಮುಖ ಮಾಡಿ
ತಂಗಾಳಿ ಸೂಸ
ುತ್ತಿತ್ತು ದಾರಿಗರ ಪಯಣಕೆ
ಮರದ ಎಲೆಯ ಗೊಂಚಲಿಗೆ ಎಲ್ಲಿಂದಲೋ ಬಂದ
ಹಕ್ಕಿ ಬಳಗ ಗೂಡು ಕಟ್ಟಿ ತುಂಬಿ ಚಿಲಿಪಿಲಿ ಸದ್ದು
ಮನ ಮುದ್ದು ಆಪ್ಯಾಯಮಾನ
ಹಸಿರೆಲೆಯು ಕಳೆದಂತೆ ಹೊಸ ಚಿಗುರು ಬಂದಂತೆ
ಹತ್ತು ಹಲ ಜೀವಿಗಳ ನಿತ್ಯೋತ್ಸವ !
ಅಪ್ಪ ನೆಟ್ಟ ಮರವು ಉಳಿದೀತು ಎಷ್ಟು ದಿನ ?
ಮರವು ಧರೆಗೆರಗಿ ಹಳತಾಗಿ ಹುಡಿಯಾಗಿ
ಮಣ್ಣಾಗಿ ನೆನಪಾಗಿ ಅಳಿಸಿದಕ್ಷರದಂತೆ ಮಸುಕು ಮಸುಕಾಗಿ .