STORYMIRROR

Nandini Krishna

Inspirational

4.4  

Nandini Krishna

Inspirational

ಸೊಳ್ಳೆ ಬ್ಯಾಟ್

ಸೊಳ್ಳೆ ಬ್ಯಾಟ್

2 mins
208

ಸೊಳ್ಳೆ ಬ್ಯಾಟ್

ಒಂದು ಚಿಕ್ಕ ಪಟ್ಟಣದಲ್ಲಿ BA ಮುಗಿಸಿ ಕೆಲಸವಿಲ್ಲದೆ ಕಾಲ ಕಳೆಯುತ್ತಿದ್ದ ರಾಕೇಶ್‌ಗೆ ದಿನ-ರಾತ್ರಿ ಒಂದೇ. ಮೊಬೈಲ್ ರೀಲ್ಸ್, ಕ್ರಿಕೆಟ್, ಸುಮ್ಮನೆ ಮನೆಯಲ್ಲೇ ಕೂತುಬಿಡುವುದು—ಅದೇ ಅವನ ದಿನಚರಿ.

ಮಗನ ಸ್ಥಿತಿ ನೋಡಿ ತಂದೆ-ತಾಯಿಗೆ ಬೇಸರ. ಕೆಲಸದ ಮಾತು ಬಂದರೆ ರಾಕೇಶ್ ಕೋಪ ಮಾಡಿಕೊಂಡು ಎರಡು-ಮೂರು ದಿನ ಮಾತಾಡದೆ, ಊಟ ಮಾಡದೆ ಕೊಠಡಿಯಲ್ಲಿ ಕೂತುಬಿಡುತ್ತಿದ್ದ. ಕೊನೆಗೆ ತಾಯಿ ಸಮಾಧಾನ ಮಾಡಿ ಮನೆಗೆ ಮತ್ತೆ ಶಾಂತಿ ತರುತ್ತಿದ್ದಳು. ಇದು ಮನೆದಲ್ಲಿ ಆಗಾಗ ಮರುಕಳಿಸುವ ದೃಶ್ಯ.

ಒಮ್ಮೆ ಊಟದ ವೇಳೆ ಸೊಳ್ಳೆ-ನೊಣಗಳ ಕಾಟ ನೋಡಿ ರಾಕೇಶ್ ಸೊಳ್ಳೆ ಬ್ಯಾಟ್ ಹಿಡಿದು ಅವುಗಳನ್ನು ಹೊಡೆದು, “ಅಮ್ಮ, ಈಗ ನೆಮ್ಮದಿಯಾಗಿ ಊಟ ಮಾಡು” ಎಂದು ಹೆಮ್ಮೆಯಿಂದ ಹೇಳಿದ.

ಅಮ್ಮ ನಗುತ್ತಾ, “ಅವು ಕೂಡ ಬದುಕಲು ಆಹಾರ ಹುಡುಕುತ್ತಿವೆ” ಎಂದಳು.

ಅಷ್ಟರಲ್ಲಿ ಅಪ್ಪನ ಮಾತು ಚುಚ್ಚಿತು—
“ಅವು ತಮ್ಮ ಊಟವನ್ನು ತಾವೇ ದುಡಿದುಕೊಳ್ಳುತ್ತವೆ… ನಿನ್ನ ಹಾಗೆ ಬಿಟ್ಟಿ ಊಟ ಮಾಡುವುದಿಲ್ಲ.”

ಆ ಮಾತು ರಾಕೇಶ್ ಮನಸ್ಸಿಗೆ ಬಿತ್ತು.

ಅಪ್ಪ ಬೇಸರದಲ್ಲಿ ಮತ್ತೊಂದು ಮಾತು ಹೇಳಿದರು—
“ಇಷ್ಟು ಹೊತ್ತು ಸೊಳ್ಳೆ ಬ್ಯಾಟ್ ಹಿಡಿದು ಸ್ಟಂಟ್ ಮಾಡುತ್ತಿದ್ದೀಯಲ್ಲ… ಅದರಿಂದಲೇ ದುಡ್ಡು ಸಂಪಾದಿಸು!”

ತಮಾಷೆಗೆ ಹೇಳಿದ ಮಾತೇ ರಾಕೇಶ್ ಬದುಕಿನ ತಿರುವಾಯಿತು.

ಮರುದಿನ ಸೊಳ್ಳೆ ಬ್ಯಾಟ್ ಹಿಡಿದು ಹೊರಟ. ಸಂತೆಯಲ್ಲಿ ಕಬ್ಬಿನ ಹಾಲಿನ ಅಂಗಡಿ ಬಳಿ ಕುಳಿತಿದ್ದಾಗ ಸೊಳ್ಳೆ-ನೊಣಗಳನ್ನು ಬ್ಯಾಟ್‌ನಿಂದ ಹೊಡೆದು ಅಂಗಡಿಗಾರನ ಗಮನ ಸೆಳೆದ. ಖುಷಿಯಾಗಿ ಅವನು ಕಬ್ಬಿನ ಹಾಲು ಕೊಟ್ಟು, ಸಂಜೆವರೆಗೂ ಸಹಾಯ ಮಾಡಿದರೆ ₹500 ಕೊಡುತ್ತೇನೆ ಎಂದ.

ಆ ದಿನದ ಶ್ರಮಕ್ಕೆ ಅವನು ₹1000 ಕೊಟ್ಟ.
“₹500 ಸಂಬಳ… ಉಳಿದ ₹500 ನನ್ನ ಬಂಡವಾಳ. ಇದರಿಂದ ಏನಾದರೂ ಶುರುಮಾಡು,” ಎಂದ.

ಆ ಹಣದಿಂದ ರಾಕೇಶ್ ತೆಗೆದುಕೊಂಡ ಮೊದಲ ನಿರ್ಧಾರ—
ಸೊಳ್ಳೆ ಬ್ಯಾಟ್ ಮಾರಾಟ.

ಪೇಟೆಯಿಂದ ಆರು ಬ್ಯಾಟ್ ತಂದು ವ್ಯಾಪಾರ ಶುರುಮಾಡಿದ. ಮೊದಲಿಗೆ ಜನ ನಕ್ಕರು. ಕೆಲವರು ಹೀಯಾಳಿಸಿದರು. ಆದರೆ ಒಂದು ಹಳ್ಳಿಯಲ್ಲಿ ವಿದ್ಯುತ್ ಕೊರತೆ, ಸೊಳ್ಳೆ ಕಾಟ ಜಾಸ್ತಿ ಎಂದು ತಿಳಿದು ಅಲ್ಲಿ ಬ್ಯಾಟ್ ಮಾರಾಟ ಹಿಟ್ ಆಯ್ತು.

ಚಿಕ್ಕ ವ್ಯಾಪಾರ ದೊಡ್ಡ ಅವಕಾಶ ಆಯ್ತು.

ಬ್ಯಾಟ್ ಅಂಗಡಿ ಮಾಲೀಕನೇ ಅವನಿಗೆ ಕೆಲಸ ಕೊಟ್ಟು, ಹಳ್ಳಿಹಳ್ಳಿಗೆ ಮಾರಾಟಕ್ಕೆ ಕಳುಹಿಸಿದ. ದಿನಕ್ಕೆ ₹1000 ಸಂಬಳ. ರೀಲ್ಸ್ ನೋಡುತ್ತಿದ್ದ ರಾಕೇಶ್ ಈಗ ವ್ಯಾಪಾರದ ಕಲೆ ಕಲಿಯುತ್ತಿದ್ದ.

ಒಂದು ವರ್ಷದೊಳಗೆ ಅವನು ಸಂಪೂರ್ಣ ಬದಲಾಗಿದ್ದ.

ಆಮೇಲೆ ಪಾತ್ರೆ ಅಂಗಡಿಯಲ್ಲಿ ಕೆಲಸ ಮಾಡುವಾಗ ಒಂದು ಧಾರಾವಾಹಿ ನಟ ಅಂಗಡಿಗೆ ಬಂದ. ರಾಕೇಶ್ ವಿಡಿಯೋ ಮಾಡಿ ವಾಟ್ಸಾಪ್ ಮತ್ತು ಇನ್ಸ್ಟಾಗ್ರಾಂನಲ್ಲಿ ಹಾಕಿದ. ಅದೃಷ್ಟವಶಾತ್ ಅದು ವೈರಲ್ ಆಯ್ತು.

ಅಂಗಡಿಯ ವ್ಯಾಪಾರ ಹೆಚ್ಚಿತು. ನಟರ ಪರಿಚಯ ಬೆಳೆದಿತು. ಮಾಲೀಕರು promotional ideas ಬಳಸಲು ಶುರುಮಾಡಿದರು. ರಾಕೇಶ್‌ಗೆ influencer ಆಗುವ ದಾರಿ ಅಲ್ಲಿ ತೆರೆದಿತು.

ಸೀರೆ ಅಂಗಡಿಗಳು, ಬೇರೆ ಅಂಗಡಿಗಳು ಕೂಡ ಅವನನ್ನೇ ಸಂಪರ್ಕಿಸಲು ಶುರುಮಾಡಿದವು. ನಟ-ನಟಿಯರನ್ನು ಕರೆಸಿ promotions ಮಾಡಿಸುತ್ತಿದ್ದ ರಾಕೇಶ್, ತಿಳಿಯದೆ ದೊಡ್ಡ influencer ಆಗಿಬಿಟ್ಟ.

ಇವನ ಕಥೆ ಕೇಳಿ ಕೆಲವರು ಸಿನಿಮಾ ಮಾಡೋಣ ಎಂದಾಗ ರಾಕೇಶ್ ಒಂದೇ ಮಾತು ಹೇಳಿದ—

“ನನ್ನ ಸಿನಿಮಾಗೆ ‘ಸೊಳ್ಳೆ ಬ್ಯಾಟ್’ ಅಂತಲೇ ಟೈಟಲ್ ಇರಬೇಕು!”

ಏಕೆಂದರೆ…
ಒಂದು ಸೊಳ್ಳೆ ಬ್ಯಾಟ್ ಅವನ ಬದುಕನ್ನೇ ಬದಲಿಸಿತ್ತು.

ಯಶಸ್ಸು ಕಂಡ ನಂತರ ರಾಕೇಶ್‌ಗೆ ಒಂದು ವಿಚಾರ ಮಾತ್ರ ಮನಸಿನಿಂದ ಹೋಗಲಿಲ್ಲ—ತನ್ನ ಮೊದಲ ವ್ಯಾಪಾರ ಶುರು ಮಾಡಲು ₹500 ಬಂಡವಾಳ ಕೊಟ್ಟ ಆ ಕಬ್ಬಿನ ಹಾಲಿನ ಅಂಗಡಿಯ ವ್ಯಕ್ತಿ.

ಅವರನ್ನು ಹುಡುಕಲು ಹಲವು ಬಾರಿ ಪ್ರಯತ್ನಿಸಿದರೂ, ದುರದೃಷ್ಟವಶಾತ್ ಇನ್ನೂ ಪತ್ತೆಯಾಗಿಲ್ಲ. ಇಂದಿಗೂ ಅವರನ್ನು ಹುಡುಕುತ್ತಲೇ ಇದ್ದಾನೆ.

ಆ ಒಂದು ಸಹಾಯ ತನ್ನ ಬದುಕು ಬದಲಿಸಿತು ಎಂಬ ಕೃತಜ್ಞತೆಯಿಂದ, ಕೆಲಸಕ್ಕಾಗಿ ತನ್ನನ್ನು ಸಂಪರ್ಕಿಸುವ ಯುವಕರಲ್ಲಿ ಯಾರು ಯಾವ ಕೌಶಲ್ಯ ಹೊಂದಿದ್ದಾರೆ ಎಂದು ತಿಳಿದು , ತನ್ನ ಪರಿಚಯದವರ  ಮೂಲಕ, ಅವರಿಗೆ ಉದ್ಯೋಗ ಅಥವಾ ಅವಕಾಶ ಸಿಗುವಂತೆ ನೆರವಾಗುವುದು ಈಗ ರಾಕೇಶ್ ತನ್ನ ಜವಾಬ್ದಾರಿ ಎಂದು ಮಾಡುತ್ತಾನೆ.

ಒಮ್ಮೆ ಯಾರೋ ತನ್ನ ಕೈ ಹಿಡಿದಿದ್ದರು; ಇಂದು ಅವನು ಮತ್ತೊಬ್ಬರ ಕೈ ಹಿಡಿಯುವವನಾಗಿದ್ದಾನೆ.

ಅಂದಹಾಗೆ, ನಾವು ಬಳಸುವ ಈ ಸೊಳ್ಳೆ ಬ್ಯಾಟ್ ಅನ್ನು ತೈವಾನದ Tsao-I Shih ಅವರು 1995–96ರಲ್ಲಿ ಕಂಡುಹಿಡಿದಿದ್ದರು.

ಕೆಲವೊಮ್ಮೆ ಬದುಕು ಬದಲಿಸಲು ದೊಡ್ಡ ಅವಕಾಶ ಬೇಕಾಗುವುದಿಲ್ಲ… ಒಂದು ಸೊಳ್ಳೆ ಬ್ಯಾಟ್ ಸಾಕು.


Rate this content
Log in

Similar kannada story from Inspirational