ಯುಗಾಂತರ
ಯುಗಾಂತರ
ಕ್ಷಣ ಕ್ಷಣಗಳುರುಳಿದರೆ ಸಾಕು
ಯುಗದಿಂದ ಯುಗದತ್ತ ನಿತ್ಯ ಎಲ್ಲರ ಪಯಣ
ಯುಗಾಂತರವ ಬಲ್ಲೆ ಏನು ದೊರೆಯೇ...?
ನಿನ್ನೆಯಂತೆ ಇಂದಿಲ್ಲ, ಇಂದಿನಂತೆ ನಾಳೆ.....
ಹೇಗೋ ತಿಳಿದಿಲ್ಲ
ನಿನ್ನೆ ಮೊಗ್ಗಾಗಿ ಅರಳಿದ ಚಿಗುರು
ಇಂದು ಹೂವಾಗಿ ಬಾಗಿ
ನಾಳೆ ಯಾವ ದೇವರ ಗುಡಿ ಸೇರಿವುದೋ
ಯಾರ ಮುಡಿ ಏರುವುದೋ
ಯಾರ ಕಾಲಡಿಗೆ ಬಿದ್ದು ಅಂತ್ಯ ಕಾಣುವುದೋ
ಬಲ್ಲವರು ಯಾರು?
ನಿನ್ನೆ ಇರದ ಕೃತಕತೆಯನಿಂದು
ಜೀವನದಿ ಅಳವಡಿಸಿಕೊಂಡು
ಕೃತಕ ನಗೆಯ ತೆರೆಮರೆಯ ಮುಸಿಕೊನೊಳತ್ತರೆ
ಅದು ತಿಳಿಯದೇ ಕವಿಯ ಕಲ್ಪನೆಗೆ?
ನಿನ್ನೆ ಹುಟ್ಟಿದ ಶಿಶು
ಇಂದೆಲ್ಲರೊಡನೆ ಬೆರೆವಾಗ
ನಾಳೆ ತನ್ನ ತನವನೇ ಮರೆತು
ಮಾನವೀಯತೆಯ ತೊರೆದು
ಅಟ್ಟಹಾಸದಿ ನರ್ತಿಪುದು ಎಂಬ ಸಣ್ಣ
ಕುರುಹು ಏನಾದರೂ ಇತ್ತೇ ಆ ಮಗುವಿನ ವರ್ತನೆಯಲಿ?
ಕೆಟ್ಟ ಹಾದಿಗೆ ಮಗುವು ಅಡಿಯನಿಟ್ಟಾಗಲೇ ತಾನೇ
ಸಂತಸದ ಸುವರ್ಣ ಯುಗವು ಕಳೆದು
ಕೊಲೆ ಸುಲಿಗೆಯ ಯುಗಕೆ ಆದಿಯಲ್ಲವೇ ದೊರೆಯೆ...?
ಆಕಾಶದಿಂದ ಬಿದ್ದ ಹನಿಯು ಇಂಗಿ ಹೋಗುವ ಮೊದಲೇ
ಉತ್ತರವ ಹೇಳು
ನಗುವ ಹೆಣ್ಣ ಕಣ್ಣಲ್ಲಿ ಅಳುವೆಂಬ ನೀರ ಧುನಿ ದುಮುಕುವಾ ಮೊದಲು
ನಮ್ಮಾತ್ಮ ಬಿಂಬಿಸುವ ಕನ್ನಡಿ
ಒಡದು ಹೋಗುವ ಮೊದಲು
ಯುಗ ಯುಗಾಂತರದ ಮರ್ಮವನು ದೊರೆ ನೀನು ತಿಳಿಯಬೇಕು
ತಿಳಿದು ಜಗಕೆ ಸಾರಿ ಹೇಳ ಬೇಕು
ಹೊಸ ಯುಗಕೆ ದಾರಿದೀಪ ನೀನಾಗ ಬೇಕು ದೊರೆಯೇ....
