ತಿಥಿ
ತಿಥಿ


ತಿಥಿ ಕಾಗೆ ರೂಪವ ಧರಿಸಿ ಪಿಂಡಕ್ಕೆ ಬಾಯ್ಬಿಟ್ಟು ಮತ್ತೆ ಬರಬೇಡ
ಸತ್ತವನೇ ಎಂದೆಂದಿಗೂ ಒಮ್ಮೆಗೆ ಹೊರಟುಬಿಡು
ಹಿಂತಿರುಗಿ ನೋಡದಿರು ಕಡಿದುಬಿಡು ಸಂಬಂಧ
ಎಂದೆಂದಿಗೂ ನೀರ ನೀಡದವರು ಹಸಿವು ನೀಗದವರು
ಕಡೆಗಾಲ ಬಂದಾಗ ಕಡೆಗಣಿಸಿದವರು
ಎಲ್ಲ ಮರೆತವರು ಮನವ ಮುರಿದವರು
ಬದುಕಲೇ ನರಕವನು ತೋರಿದವರು
ಎಲ್ಲೋ ಇದ್ದವರು ಮನವ ತೊರೆದವರು
ಸತ್ತ ನಂತರ ಮುತ್ತಿ ಶವಕೆ ಉಪಚರಿಸುವರು
ಸತ್ತವನ ನಾಕಕ್ಕೆ ನೂಕಲೆಣಿಸುವ ಕಾರ್ಯ
ಮತ್ತವನು ಇಹದಲ್ಲಿ ಇಲ್ಲವಾಗಿಪ ಕಾರ್ಯ
ಬೂತವಾಗಿಪ ಭೀತಿಯಲಿ ಮಾಡುವ ಕಾರ್ಯ
ಹೆಸರು ನಿನ್ನದು ಹೇಳಿ ಹೊಟ್ಟೆ ಹೊರೆಯುವ ಕಾರ್ಯ
ಸತ್ತವನೇ ನಿನಗೇಕೆ ಸುಮ್ಮನೆ ಹೊರಟು ಬಿಡು
ಬಂಧನವು ಇನ್ನಿಲ್ಲ ಸಂಬಂಧ ನಿನಗಿಲ್ಲ
ಪಯಣವದು ಅನಂತ ಕಳಿಸಿದೆಡೆ ತೊಲಗಿ ಬಿಡು