ನೆನಪಿನಂಗಳದಿಂದ....
ನೆನಪಿನಂಗಳದಿಂದ....
ನೆನಪಿನಂಗಳದಲ್ಲಿದೆ ಸಾವಿರಾರು ನೆನಪುಗಳು
ಮರಳಿ ಬರಲಾರವು ಕಳೆದು ಹೋದ ದಿನಗಳು
ಆ ಕ್ಷಣಗಳಲ್ಲಿ ಸವಿದ ನೆನಪುಗಳು ಎಂದೂ ಅಮರ
ಹೃದಯದಿ ಸಿಹಿ ಕಹಿ ನೆನಪುಗಳು ಮಾಡುತಿವೆ ಸಮರ!!
ಸಿಹಿ ನೆನಪುಗಳ ಮೆರವಣಿಗೆಯಲಿದೆ ಖುಷಿಯ ಭಾವ
ಕಣ್ಣೀರ ಧಾರೆಯಲಿದೆ ಕಹಿ ನೆನಪುಗಳದೇ ಸಂಗಮ
ಕಹಿ ನೆನಪುಗಳಲಿ ಬಂಧಿಯಾಗಿ ನರಳಾಡುತಿದೆ ಜೀವ
ನಮ್ಮ ಈ ಜೀವನವೇ ಸಿಹಿ ಕಹಿ ನೆನಪುಗಳ ಸಮಾಗಮ
ಕಹಿ ಘಟನೆಗಳ ಮರೆತರೇನೇ ಬಾಳಲಿ ನೆಮ್ಮದಿಯು
ಕಹಿಯು ಕಲಿಸಿದ ಜೀವನ ಪಾಠದಿ ಬಾಳಲಿ ಸಿಹಿಯು
ಸವಿ ನೆನಪುಗಳು ತುಟಿಯಂಚಿನಲಿ ನಗು ತರಿಸುವುದು
ಕಳೆದ ಸಿಹಿ ಘಳಿಗೆಯ ನೆನೆದರೆ ಮನ ಹಗುರಾಗುವುದು
ನಾಲ್ಕು ದಿನಗಳ ಬಾಳಲಿ ಕಹಿಯ ನೆನೆದು ಅಳುವುದೇಕೆ?
ನೋವ ಮರೆತು ಖುಷಿಯಾಗಿ ನಕ್ಕರೇನೇ ಬಾಳು ಸ್ವರ್ಗ
ಮನವು ಸಿಹಿಗಿಂತ ಜಾಸ್ತಿ ಕಹಿಗಳನ್ನೇ ನೆನಪಿಸುವುದೇಕೆ?
ಚಂಚಲ ಮನಕೆ ಭಗವಂತನ ಸ್ಮರಣೆಯೊಂದೇ ಮಾರ್ಗ!!
