ಇಳೆಯ ಸಂಭ್ರಮ
ಇಳೆಯ ಸಂಭ್ರಮ
ಮುಂಜಾನೆಯ ಮಂಜಿನ ತೆರೆ
ಸರಿಸುತ ಮೂಡಿದ ಮೂಡಣದಿ
ಹಗಲಿನ ಹೊದಿಕೆ ಹೊದ್ದು ನಿದ್ರೆಗೆ
ಜಾರಿದ ಚಂದಿರನು ಪಡುವಣದಿ!!
ಹಚ್ಚ ಹಸಿರಿನಿಂದ ಕಾಡು ಕರೆದಿದೆ
ಅಂಬರದ ಚಲಿಸುವ ಮೋಡಗಳನು
ಭೂಮಿಯ ಒಡಲು ತೆರೆದು ಕೂಗಿದೆ
ಸುರಿಯುವ ಮುಂಗಾರು ಮಳೆಯನು!!
ಮಳೆಯೇ ತಿಳಿಸು ಬಾ ನಿನ್ನ ಮಾಯವ
ಮೇಲೆ ಚಲಿಸುವ ಆ ಮೋಡಗಳಿಗೆ
ಭೂಮಿಯೇ ತಿಳಿಸು ಬಾ ನಿನ್ನ ಹಿರಿಮೆಯ
ಏನೂ ಅರಿಯದ ಈ ಮನುಜರಿಗೆ!!
ಚಿಗುರಿದ ಹಸಿರೆಲೆಗಳ ಮೇಲೆ
ದೇವರು ಬರೆದ ಒಲವಿನ ಓಲೆ
ಹೊಂಗೆ ಮರದ ತಂಗಾಳಿಯಂತೆ
ಗರಿಗೆದರಿದ ಹೂಗಳ ಭಾವದಲೆ!!
ಮೆಲ್ಲ ಬಂದ ಮುಂಗಾರು ಮಳೆ
ಮನತಣಿದು ಸಂಭ್ರಮಿಸಿದೆ ಇಳೆ
ಮಳೆಬಿಲ್ಲಿನ ಮೈ ಪುಳಕವ ತಂದ
ವರುಣನು ಕರುಣೆಯ ತೋರಿದ!!
