ಹುಚ್ಚು ಮನಸು
ಹುಚ್ಚು ಮನಸು
ಹೊರಗೆ ಸುರಿಯುತ್ತಿರುವ
ಜಡಿಮಳೆಯ ಅಬ್ಬರಕೆ
ನಾ ಕಿಟಕಿ ಬಾಗಿಲು ಹಾಕಲಾರೆ
ಹೊರಗೆ ಅಂಗಳದಲ್ಲಿ
ನಾ ನೆಟ್ಟಿರುವ ಗಿಡಗಳೆಲ್ಲಾ
ಒದ್ದೆಯಾಗಿ ಅಕ್ಕಯ್ಯ
ನಮಗೂ ಚಳಿ ಚಳಿ
ಎಂದು ಕರೆದು ಹೇಳಿದಂಗಾಯಿತು!!
ಯಾಕೊ ಮುಗ್ದ ಮನ
ಅಯ್ಯೋ! ಪಾಪ
ಹೌದಲ್ಲಾ ಗಿಡಗಳೆಲ್ಲ
ನೆನೆದು ತೊಪ್ಪಯಾಗುತಿವೆ
ಛೆ! ನಾನೇನು ಮಾಡಲಿ ಈಗ?
ಕೈ ಕೈ ಹಿಸುಕಿಕೊಂಡು
ನನ್ನ ಕಾಲುಗಳು
ಅತ್ತಲಿಂದ ಇತ್ತ ಕಡೆ
ಇತ್ತಲಿಂದ ಅತ್ತ ಕಡೆ
ಓಡಾಡುತಿದ್ದವು!!
ಆಗ ಮೆಲ್ಲಗೆ ಉಸುರಿತು
ಅಲ್ಲಿ ಅರಳಿದ ಗುಲಾಬಿ
ಹೇ.., ಅಕ್ಕಯ್ಯ ಮಳೆರಾಯ
ಕಚಗುಳಿ ಇಟ್ಟು ನಗಿಸುತ್ತಿದ್ದಾನೆ
ಬೇಗ ಬಾ ನೋಡು ಹೊರಗೆ
ನಮ್ಮಂತೆಯೇ ನೀನೂ ನಗುವೆ
ಯಾಕೆ ನೀನು ಒಬ್ಬಳೇ
ಒಳಗೆ ಸೇರಿ ಕುಳಿತಿರುವೆ?
ಅಬ್ಬಾ! ಭೇಷ್
ನಾನಿಲ್ಲಿ ನಿಮ್ಮಬಗ್ಗೆ
ಏನೇನೊ ಚಿಂತೆ
ಮಾಡುತ್ತಿರುವಾಗ
ಮಳೆರಾಯನೊಂದಿಗೆ
ನಿಮ್ಮಗಳ ಚಕ್ಕಂದ ಬೇರೆ
ನೆಗಡಿ ಆಗಲ್ವೇನ್ರೆ?
ಹುಷಾರಾಗಿರೋ!!
ಡಬ್ ಎನ್ನುವ ಸದ್ದಿಗೆ
ಕಲ್ಪನೆಯ ಲೋಕದಲ್ಲಿ
ತೆಲಾಡುತ್ತಿರುವ ನನ್ನ ಮನಸು
ಎಡವುತ್ತ ಬಿತ್ತು
ಆಗಲೇ ನಾ ವಾಸ್ತವಕೆ ಬಂದು
ನನ್ನನ್ನೇ ನಾನು ಬೈಯುತಲಿದ್ದೆ!!
ಅಯ್ಯೋ! ನನ್ನ ಬುದ್ಧಿಗಿಷ್ಟು
ನಾನೇನೇನು ಯೋಚನೆ
ಮಾಡುತ್ತಿದ್ದೆನೋ ಏನೋ
ಹುಚ್ಚು ಮನಸು
ಒಬ್ಬಳೇ ನಗುತ್ತ ಖುಷಿಯಲ್ಲಿ
ಗಮನವಿಟ್ಟೆ ಹಾಗೇ
ರಾಶಿ ರಾಶಿ ಬಿದ್ದಿರುವ
ಮನೆ ಕೆಲಸದ ಕಡೆಗೆ!!
