ಹಾರುತಿದೆ ಹಾರುತಿದೆ ಜೀವನ -ಗಾಳಿಪಟ
ಹಾರುತಿದೆ ಹಾರುತಿದೆ ಜೀವನ -ಗಾಳಿಪಟ
ಬಾನಲಿ ಮೇಲ ಮೇಲಕೇರುತಿಹುದು
ಬಣ್ಣದ ಗಾಳಿಪಟ
ಜೀವನದಲಿ ಸಾಧನೆಯ ಪಥವ ತೋರಲು,
ಪಟವು ಗಾಳಿಗೆ ಸಿಲುಕಿ ಅತ್ತಿಂದಿತ್ತ ಇತ್ತಿಂದತ್ತ ಚಲಿಸುತಿದೆ
ಬದುಕಿನ ನೆಲೆಯ ಸುಖ ದುಃಖಗಳ ತಿಳಿಸುತಿದೆ.
ಒಮ್ಮೆಲೆ ಮೇಲಕೆ ಒಮ್ಮೆಲೆ ಕೆಳಕೆ ಹಾರುತಲಿಹುದು
ಸಿರಿತನ ಬಡತನವ ತೋರಿಸಲು
ಯಾವುದು ಇಲ್ಲಿ ಶಾಶ್ವತವಲ್ಲ ಎನ್ನುವುದನು ಸಾರುತಿದೆ.
ಗಾಳಿಪಟದ ದಾರವ ಹಿಡಿದು ಎಳೆಯುವಂತೆ
ಸೂತ್ರಧಾರನು ಆಡಿಸುತಿಹನು ನಮ್ಮಯ ಜೀವನವ
ಗಾಳಿಯು ಹೆಚ್ಚಲು ಬೀಗುತ ಪಟವು ಬಹು ಎತ್ತರಕೆ ಹಾರುವುದು
ನಾನೇ ದೊಡ್ಡವ ಎನ್ನುವ ಅಹಂ ಭಾವನೆಯ ತೋರುವುದು
ಮೇಲಕೆ ಏರಿದ ಪಟವದು ಹರಿದು ನೆಲಕಚ್ಚುವುದು
ಯಾವುದೂ ಶಾಶ್ವತವಲ್ಲ ಎಂಬ ಸತ್ಯವ ಇದು ತಿಳಿಸುವುದು.
ಜೀವನ ನಶ್ವರ ಎಂಬ ಅರಿವನು ಮೂಡಿಸುವುದು.
