ತಣ್ಣಗಾದ ಕಾಫಿ "
ತಣ್ಣಗಾದ ಕಾಫಿ "
ಚಳಿಗಾಲದ ಒಂದು ಸಂಜೆ. ಮನೆಮಾಡಿನ ಮೇಲೆ ಹಿಮದಂತೆ ತಣ್ಣನೆಯ ಗಾಳಿ ಹರಿಯುತ್ತಿತ್ತು. ಅಡುಗೆಮನೆಯಿಂದ ಬಿಸಿ ಕಾಫಿಯ ಸುವಾಸನೆ ಹರಡುತ್ತಿತ್ತು. ಸೊಸೆ ಎಂದಿನಂತೆ ಎಲ್ಲರಿಗೂ ಕಾಫಿ ಹಾಗೂ ಅವಲಕ್ಕಿ ಒಗ್ಗರಣೆ ತಯಾರಿಸಿ, ಪ್ರತಿಯೊಬ್ಬರಿಗೂ ಅವರವರ ಸ್ಥಳಕ್ಕೆ ಹೋಗಿ ನೀಡುತ್ತಿದ್ದಳು.
ಮಾವನ ಬಳಿ ಹೋಗಿ,
“ಮಾವ, ಕಾಫಿ ಇಟ್ಟಿದ್ದೀನಿ” ಎಂದು ಹೇಳಿ, ಬಿಸಿ ಬಿಸಿ ಕಪ್ ಇಟ್ಟು ತನ್ನ ಕೆಲಸಕ್ಕೆ ಹೋದಳು.
ಅದು ಅವಳ ದಿನನಿತ್ಯದ ಪರಿಪಾಠ. ಮನೆಯಲ್ಲಿ ಬೇರೆ ಯಾರಾದರೂ ಕಾಫಿ ಮಾಡಿದರೆ ತಮಗೆ ಮಾತ್ರ ಮಾಡಿಕೊಂಡು ಕುಡಿಯುವುದು ಸಹಜವಾಗಿದ್ದರೂ, ಅವಳು ಮಾತ್ರ ಎಲ್ಲರಿಗೂ ಹಂಚುವುದು ತನ್ನ ಕರ್ತವ್ಯವೆಂದು ಭಾವಿಸುತ್ತಿದ್ದಳು.
ಸುಮಾರು ಒಂದು ಗಂಟೆಯ ನಂತರ, ಮಾವ ಕಪ್ ಹಿಡಿದು ಬಂದರು.
“ಇದು ಏನ್ ತಣ್ಣಗಾದ ಕಾಫಿ ಕೊಟ್ಟಿದ್ದೀಯ? ಕುಡಿಯೋಕೆ ಆಗಲ್ಲ!” ಎಂದು ಗರಂ ಆಗಿ ಬೈಯಲಾರಂಭಿಸಿದರು.
ಸೊಸೆ ಶಾಂತವಾಗಿ ಉತ್ತರಿಸಿದಳು –
“ಮಾವ, ನೀವು ಕೂತಿದ್ದಾಗಲೇ ಹೇಳಿ ಇಟ್ಟಿದ್ದೆ. ಕುಡಿಯದೇ ಹೋಗಿದ್ದೀರಿ. ಈಗ ತಣ್ಣಗಾದರೆ ನಾನು ಏನು ಮಾಡಲಿ?”
ಆ ಮಾತು ಕೇಳುತ್ತಿದ್ದಂತೆಯೇ ಮಾವ ತಾರಕ ಸ್ವರದಲ್ಲಿ,
“ನನಗೆಲ್ಲ ಗೊತ್ತು! ಬೇಕಂತಲೇ ಹೀಗೆ ತಣ್ಣಗಾಗಿಸೋದು. ಕುಡಿಬಾರ್ದು ಅಂತ ಕಲಗಚ್ಚು ಕೊಟ್ಟಿದೀಯ!” ಎಂದು ನಿಂದಿಸಿ, ಅವಳ ಹೆತ್ತವರ ಬಗ್ಗೆ ಅವಾಚ್ಯವಾಗಿ ಮಾತನಾಡಲು ಆರಂಭಿಸಿದರು.
ಮನೆಯೊಳಗಿಂದ ಅತ್ತೆ ಸಹ ಮಾತು ಸೇರಿಸಿದರು —
“ಹಿರಿಯರು ಕುಡಿಯುವವರೆಗೆ ಗಮನ ಇಡಬೇಕು ಅಲ್ವಾ? ಅಷ್ಟು ಜವಾಬ್ದಾರಿ ಇಲ್ಲವಾ?”ಎಂದು
ಮಾವ ಮುಂದುವರಿದು “ಬೇಕಂತಲೇ ತಣ್ಣಗಾಗಿಸೋದು. ಗೌರವ ಇಲ್ಲ!” ಎಂದು ನಿಂದಿಸಿದರು.
ಅವಳ ಹೆತ್ತವರನ್ನೂ ಉಲ್ಲೇಖಿಸಿ ಮತ್ತಷ್ಟು ಅವಾಚ್ಯವಾಗಿ ಮಾತನಾಡಿದರು.
ಆ ಮಾತು ಕೇಳಿ ಸೊಸೆಯ ಕಣ್ಣಲ್ಲಿ ನೀರು ತುಂಬಿತು. ಆದರೆ ಮನೆಯಲ್ಲಿ ಯಾರಿಗೂ ಅದು ಕಾಣಿಸಲಿಲ್ಲ… ಅಥವಾ ಕಾಣಿಸಿದರೂ ಗಮನಿಸಲಿಲ್ಲ.
ಅವಳು ನಿಧಾನವಾಗಿ ಹೇಳಿದಳು, “ಮಾವ, ನಾನು ಏನೇ ಮಾಡಿದ್ರೂ ತಪ್ಪೇ. ಬಿಸಿ ಕೊಟ್ಟರೆ ‘ಎಷ್ಟು ಬಿಸಿ ಕೊಟ್ಟಿದಾಳೆ’ ಅಂತೀರ. ತಣ್ಣಗಾದ್ರೆ ‘ಕಲಗಚ್ಚು’ ಅಂತೀರ. ಹದವಾಗಿದ್ರೆ ‘ಇದು ಬಿಸಿಯೂ ಅಲ್ಲ, ತಣ್ಣಗೂ ಅಲ್ಲ’ ಅಂತೀರ. ಹೇಗಿದ್ದರೂ ನಿಮಗೆ ದೂರು ಮುಗಿಯೋದಿಲ್ಲ. ಮೊಸರಲ್ಲೂ ಕಲ್ಲು ಹುಡುಕೋದೇ ನಿಮ್ಮ ಕೆಲಸ.”ಎಂದಾಗ....
ಕೋಪ ಮತ್ತಷ್ಟು ಏರಿತು ಈಗ ಮನೆಯ ಉಳಿದ ಸದಸ್ಯರು ಕೂಡ ಮಾವನ ಪರ ನಿಂತು ಸೊಸೆಯನ್ನು
ಅವಳ ಮನೆಯವರನ್ನು ತೆಗಳಿದರು.ಸೊಸೆ ಅಷ್ಟು ನನ್ನಿಂದ ತೊಂದ್ರೆ ಆದ್ರೆ ಬೇಡ ನಂಗೆ ಏನೂ ಮಾಡಕ್ಕೆ ಬರಲ್ಲ ಬರೋರು ಇದ್ದಾರಲ್ಲ ಅವರತ್ರಾನೇ ಹೇಳಿ,ಇಲ್ವಾ ನೀವ್ ನೀವೇ ಮಾಡ್ಕೊಳ್ಳಿ ಎಂದಾಗ ಮಾವನನ್ನು ಬಿಟ್ಟು ಉಳಿದವರೆಲ್ಲ ತಮ್ಮ ತಮ್ಮ ಕೆಲಸಕ್ಕೆ ಹೋದರು. ಮಾವ ಮಾತ್ರ ನಿಲ್ಲಿಸಲಿಲ್ಲ. ಸೊಸೆ ಮಾವ ತಪ್ಪಾಯಿತು ನಂಗೆ ಮಾಡಕ್ಕೆ ಬರಲ್ಲ ಇನ್ನು ನಿಮಗೆ ಹೇಗೆ ಬೇಕೋ ಹಾಗೆ... ಎಂದು ಮಾತು ಮುಗಿಸುವ ಮೊದಲೇ ದರ್ಪದಿಂದ ಹಾಗ್ ಬಾ ದಾರಿಗೆ ನಾನ್ ಹೇಗ್ ಹೇಳ್ತಿನೋ ಹಾಗೆ ಕೇಳ್ಕೊಡು ಬಿದ್ದಿರ್ಬೇಕು ಎಂದಾಗ,
ಸೊಸೆ ಮಾವ ನಿಮಗೆ ಹೇಗೆ ಬೇಕೋ ಹಾಗೆ ಮಾಡ್ಕೊಡ್ತೀನಿ ಸುಮ್ನೆ ಜಗಳ ಬೇಡಾಂತ ಹೇಳೋಕ್ಕೆ ಹೊರಟಿದ್ದ ಸೊಸೆ, ಮಾವನ ದರ್ಪ ಕಂಡು,ಹೇಗೆ ಬೇಕೋ ಹಾಗೆ ನೀವೇ ಮಾಡ್ಕೋಳ್ಳಿ ಇನ್ನೂ ಕೇಳ್ಕೊಂಡು ಬಿದ್ದಿರೋಕೆ...
ಆ ಸ್ಥಿತಿ ನಂಗೆ ಬಂದಿಲ್ಲ ಅಗತ್ಯನೂ ಇಲ್ಲ.ನಾನು ಎಲ್ಲ
ಬಿಟ್ಟು ಇಲ್ಲಿಂದ ಹೋದ್ರೆ ಖಂಡಿತ ಇಲ್ಲಿಗಿಂತ ಚೆನ್ನಾಗೇ ಇರ್ತೀನಿ ನಿಮ್ಮಿಂದಾನೇ ನನ್ನ ಜೀವ್ನ ನಡೀತಿದೆ ಅನ್ಕೊಂಡಿದ್ರೇ,ಭ್ರಮೆಯಿಂದ ಹೊರಗ್ ಬನ್ನಿ ಪ್ರಪಂಚವಿಶಾಲವಾಗಿದೆ.
"A cup of coffee may turn cold,But words can wound the heart for long.Respect keeps a family warm,Without it, every home feels cold."
ಮಾವನಿಗೆ ಸೊಸೆ ಹೇಳಿದ ಮಾತಿನ ಅರ್ಥ ತಿಳಿಯಲಿಲ್ಲ. ಒಳಗೆ ಅತ್ತೆ ತನ್ನ ವಾರಗಿತ್ತಿಯಲ್ಲಿ ಅವ್ಳು ಇಂಗ್ಲಿಷ್ನಲ್ಲಿ ಏನ್ ಹೇಳಿದ್ದುಂತ ಕೇಳಿದಾಗ,
ವಾರಗಿತ್ತಿ ಗೊತ್ತಿಲ್ಲಕ್ಕ ನಂಗೆಲ್ಲಿ ಅರ್ಥ ಆಗುತ್ತೆ ಅದು ಅಂದಿದ್ದರು ಆಗ ಅತ್ತೆ ಇಂಗ್ಲಿಷ್ ಬರುತ್ತೇಂತ ಇಷ್ಟು ಅಹಂಕಾರ ಮುಂಡೇದುಕ್ಕೆ ಎಂದು ಹೋಗಿದ್ದರು. ಸೊಸೆ ಯನ್ನು ಕಾಲು ಕಸದಂತೆ ಭಾವಿಸುವ ಮನೆಯವರಿಗೆ ಅವಳ ಬೆಲೆ ಗೊತ್ತಿರಲಿಲ್ಲ.
" ಆ ದಿನ ಕಾಫಿ ಮಾತ್ರ ತಣ್ಣಗಾಗಿರಲಿಲ್ಲ…
ಮನೆಯೊಳಗಿನ ಸಂಬಂಧಗಳೂ ಕೂಡ ತಣ್ಣಗಾಗಿದ್ದವು."
