STORYMIRROR

Bhavana.k Bhat

Others

4  

Bhavana.k Bhat

Others

ಸಹವಾಸ ದೋಷ

ಸಹವಾಸ ದೋಷ

3 mins
8

7 ವರ್ಷದ ಒಂದು ಮಗುವಿನ ಕಥೆ. ಅವನ ಹೆಸರು ರಾಜು.ಅವನಿಗೆ ತನ್ನ ಅಮ್ಮನ ಮೇಲೆ ತುಂಬಾ ಪ್ರೀತಿ ಇತ್ತು. ಎಲ್ಲಿಗೆ ಹೋಗಬೇಕಾದರೂ ಮನೆಗೆ ಅತಿಥಿಗಳ ಮನೆಗೆ ಆಗಲಿ, ಮದುವೆಗೆ ಆಗಲಿ ಅಥವಾ ಹಬ್ಬಕ್ಕೆ ಆಗಲಿ—ಅವನು ಅಮ್ಮ ಇಲ್ಲದೆ ಹೋಗುವುದೇ ಇಲ್ಲ. ಬೇರೇ ಮಕ್ಕಳ ಜೊತೆ ಆಟ ಆಡಲು ಹೋದರೂ, ಸ್ವಲ್ಪ ಸಮಯಕ್ಕೊಮ್ಮೆ ಓಡಿ ಬಂದು ಅಮ್ಮ ಏನು ಮಾಡುತ್ತಿದ್ದಾರೆ ಎಂದು ನೋಡುತ್ತಿದ್ದನು. ಒಂದು ದಿನ ದೇವಸ್ಥಾನದಲ್ಲಿ ಪೂಜೆ ಆದ ನಂತರ ಪ್ರಸಾದ ಹಂಚಲಾಗುತ್ತಿತ್ತು. ಆಗ ರಾಜು ಕೇಳಿದನು, “ನನಗೆ ಹೂಮಾಲೆ ಕೊಡಬಹುದಾ?” ಅಲ್ಲಿದ್ದ ಒಬ್ಬರು ನಗುತ್ತಾ ಕೇಳಿದರು, “ನೀನು ಹುಡುಗ ಅಲ್ವಾ, ನಿನಗೆ ಹೂಮಾಲೆ ಏಕೆ?” ರಾಜು ಮುಗ್ದವಾಗಿ ಹೇಳಿದನು, “ನನ್ನ ಅಮ್ಮಗಾಗಿ.” ಅವನು ಹೂಮಾಲೆ ತೆಗೆದುಕೊಂಡು ಅಮ್ಮನ ಬಳಿಗೆ ಹೋಗಿ ಅವರನ್ನು ಕುಳಿತುಕೊಳ್ಳಲು ಹೇಳಿದನು. ನಂತರ ತುಂಬಾ ಪ್ರೀತಿಯಿಂದ ಆ ಹೂಮಾಲೆಯನ್ನು ಅಮ್ಮನ ಕೂದಲಲ್ಲಿ ಅಲಂಕರಿಸಿದನು. ಅಲ್ಲಿದ್ದ ಮಹಿಳೆಯರು ಅದನ್ನು ನೋಡಿ ಭಾವುಕರಾದರು. ಅವರು “ಎಷ್ಟು ಪ್ರೀತಿಯ ಮಗುವು ತನ್ನ ಅಮ್ಮನನ್ನು ಎಷ್ಟು ಪ್ರೀತಿಸುತ್ತಾನೆ"ಅವರಲ್ಲಿ ಕೆಲವರು, ಯಾವ ಪ್ರಸಾದವಾದರೂ ಮೊದಲು ಅಮ್ಮನಿ ಗೆ ಕೊಡುತ್ತಾನೆ, ನಂತರ ತಾನೇ ತಿನ್ನುತ್ತಾನೆ.” ಅದನ್ನು ಕೇಳಿ ಅಮ್ಮನ ಮನಸ್ಸು ಸಂತೋಷದಿಂದ ತುಂಬಿಬಿಡುತ್ತಿತ್ತು. ರಾಜು ದೊಡ್ಡ ಸಂಯುಕ್ತ ಕುಟುಂಬದಲ್ಲಿ ವಾಸಿಸುತ್ತಿದ್ದನು. ಮನೆಯಲ್ಲಿಅಜ್ಜ -ಅಜ್ಜಿ ಅಜ್ಜನ ಇಬ್ಬರು ಸಹೋದರರು, ಅವರ ಪತ್ನಿಯರು ಮತ್ತು ಮಕ್ಕಳು ಎಲ್ಲರೂ ಒಂದೇ ಮನೆಯಲ್ಲಿದ್ದರು.ಅಜ್ಜನ ಕೊನೆ ತಮ್ಮನ ಮಕ್ಕಳಲ್ಲಿ ಒಬ್ಬ ಕಾಲೇಜಿನಲ್ಲಿದ್ದರೆ, ಮತ್ತೊಬ್ಬ ಶಾಲೆ ಓದುತಿದ್ದ.ಮನೆಯಲ್ಲಿದ್ದ ಆ ಇಬ್ಬರು ಹುಡುಗರಿಗೆ ರಾಜು ತನ್ನ ತಾಯಿಯನ್ನು ಇಷ್ಟೊಂದು ಪ್ರೀತಿಸುವುದು ಇಷ್ಟವಾಗುತ್ತಿರಲಿಲ್ಲ. ಅವರು ರಾಜುವನ್ನು ನೋಡಿ “ಅಯ್ಯೋ ನೋಡಿ! ಅಮ್ಮನ ಬಾಲ ಬಂತು ”ಕೆಲವೊಮ್ಮೆ ಇನ್ನೂ ಹಾಸ್ಯ ಮಾಡುತ್ತಾ, “ನೋಡಿ ನೋಡಿ, ಅಮ್ಮನ ಹೆಸರನ್ನು ಜಪ ಮಾಡುವ ಸಂನ್ಯಾಸಿ ಬಂದಿದ್ದಾನೆ!” ಎಂದು ನಗುತ್ತಿದ್ದರು. ರಾಜುವಿನ ಅಜ್ಜ ಕೆಲವೊಮ್ಮೆ ರಾಜುವನ್ನು ಕೇಳುತ್ತಿದ್ದರು “ಏನೋ ರಾಜು, ಇವತ್ತು ಎಷ್ಟು ಬಾರಿ ಅಮ್ಮನ ಜಪ ಮಾಡಿದ್ದೀಯ? ನಿನ್ನ ಅಮ್ಮ ನಿನಗೆ ಯಾವಾದರೂ ವರ ಕೊಟ್ಟಳಾ?” ಮತ್ತೆ ಎಲ್ಲರೂ ನಗುತ್ತಾ ಹೇಳುತ್ತಿದ್ದರು— “ಒಂದು ವೇಳೆ ‘ನಿನಗೆ ಯಾವ ವರ ಬೇಕು?’ ಎಂದು, ಕೇಳಿದರೆ ನೀನು ‘ನನಗೆ ಸ್ವಾತಂತ್ರ್ಯದ ವರ ಬೇಕು’ ಎಂದು ಹೇಳು!”ಅಂತ ಹೇಳಿ ಎಲ್ಲರೂ ರಾಜುವನ್ನು ಚುಡಾಯಿಸಿ ವ್ಯಂಗ್ಯವಾಗಿ ನಗುತ್ತಿದ್ದರು.ಆ ಹುಡುಗರಲ್ಲಿ,ಚಿಕ್ಕವನು ತನ್ನ ಅಮ್ಮನ ಜೊತೆ ಹೆಚ್ಚು ಇರುತ್ತಿದ್ದರೂ, ದೊಡ್ಡ ಹುಡುಗ ಅಮ್ಮನನ್ನು ಅಮ್ಮ ಎಂದು ಕರೆಯುತ್ತಿದ್ದರೂ ಅವರೊಂದಿಗೆ ಹೆಚ್ಚಿನ ಒಡನಾಟ ಇರಲಿಲ್ಲ. ಆ ಕಾರಣದಿಂದ ಅವನು ರಾಜುವಿಗೂ ಕೂಡ “ತಾಯಿಯಿಂದ ಸ್ವಲ್ಪ ದೂರವಿರು” ಎಂದು ಹೇಳುತ್ತಿದ್ದನು. ಆ ಮನೆಯಲ್ಲಿ ಒಂದು ವಿಚಿತ್ರ ಪದ್ಧತಿ ಇತ್ತು. ಗಂಡು ಮಗು ಹುಟ್ಟಿದರೆ ತಾಯಿ ಹಾಲು ಕುಡಿಯುವಷ್ಟು ಕಾಲ ಮಾತ್ರ ಅಮ್ಮನ ಜೊತೆ ಇರುತ್ತಿತ್ತು. ನಂತರ ಅವನನ್ನು ಅಜ್ಜಿಯ ಬಳಿ ಇರುತಿತ್ತು ಮತ್ತು ಅಮ್ಮ ಮನೆ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕಾಗುತ್ತಿತ್ತು.ಮಗು ತೀರ ಹಠ ಹಿಡಿದಲ್ಲಿ ಮಾತ್ರ ಸಲ್ಪ ಹೊತ್ತು ಮಗುವನ್ನು ಅಮ್ಮನಲ್ಲಿ ಕೊಡುತಿದ್ದರು.ಅಮ್ಮನಿಂದ ಮಗುವನ್ನು ದೂರವಾಗಿಸಲು ಇದೊಂದು ವಿಧಾನವಾಗಿತ್ತು. ನಿಧಾನವಾಗಿ ಮಗುವಿಗೆ ತನ್ನ ಅಮ್ಮನನ್ನು “ಅಮ್ಮ” ಎಂದು ಕರೆಯುವುದನ್ನು ಬಿಟ್ಟು ಅಜ್ಜಿಯನ್ನೇ “ಅಮ್ಮ” ಎಂದು ಕರೆಯಲು ಕಲಿಸಲಾಗುತ್ತಿತ್ತು, ಮತ್ತು ತನ್ನ ನಿಜವಾದ ಅಮ್ಮನನ್ನು ಬೇರೆ ರೀತಿ ಅಂದರೆ ಅತ್ತೆಮ್ಮ, ಅತ್ತಿಗೆ, ಮಾಮಿ ಎಂದು ಕರೆಯಲು ಕಲಿ ಸಲಾಗುತ್ತಿತ್ತು ರಾಜುವಿನ ಅಮ್ಮ ಈ ಪದ್ಧತಿಯನ್ನು ಒಪ್ಪಿಕೊಳ್ಳಲಿಲ್ಲ ಇದು ಮನೆಯವರಿಗೆ ಇಷ್ಟವಾಗಲಿಲ್ಲ. ಅವರು ನಿಧಾನವಾಗಿ ರಾಜುವಿಗೆ ಅಮ್ಮ ಬಗ್ಗೆ ಕೆಟ್ಟ ಮಾತುಗಳನ್ನು ಹೇಳಲು ಶುರುಮಾಡಿದರು. ಕಾಲ ಕಳೆಯುತ್ತಾ ಹೋಯಿತು. ರಾಜು ದೊಡ್ಡವನಾಗತೊಡಗಿದನು. ಮನೆಯವರ ಮಾತುಗಳನ್ನು ದಿನವೂ ಕೇಳುತ್ತಾ ಕೇಳುತ್ತಾ ಅವನ ಮನಸ್ಸು ಕೂಡ ಬದಲಾಗತೊಡಗಿತು. ಇನ್ನು ಅವನಿಗೆ ತನ್ನ ಅಮ್ಮ ತುಂಬಾ ಕಠಿಣವಾಗಿದ್ದಾರೆ ಎಂದು ಅನಿಸತೊಡಗಿತು. ಅಮ್ಮ ಮೊಬೈಲ್ ಕೊಡಲ್ಲ, ಹೊರಗೆ ಹೋಗಲು ಬಿಡಲ್ಲ, ಸದಾ ಓದಿಕೊಳ್ಳು ಎಂದು ಹೇಳುತ್ತಾರೆ ಎಂದು ಅವನಿಗೆ ತೋಚಿತು. ಮನೆಯಲ್ಲಿದ್ದ ಇಬ್ಬರು ಹುಡುಗರು ಅವನಿಗೆ ಆಗಾಗ ಹೇಳುತ್ತಿದ್ದರು, “ನಿನ್ನ ಅಮ್ಮ ನಿನ್ನನ್ನು ಓದಿನ ಹೊರತು ಇನ್ನೇನೂ ಮಾಡಲು ಬಿಡಲ್ಲ. ಓದಿದರೆ ಮಾತ್ರ ಜೀವನ ಸಾಗುವುದಿಲ್ಲ. ಓದಿಲ್ಲದೆ ಕೂಡ ಜೀವನ ಸಾಗಬಹುದು.”ಎನ್ನುತಿದ್ದರು.ರಾಜುವಿನ ತಂದೆ ಸಹ ಅವರ ಮಾತನ್ನು ಸಮರ್ಥಿಸುತ್ತಿದ್ದ ಕಾರಣ ಮಾತುಗಳು ನಿಧಾನವಾಗಿ ರಾಜುವಿನ ಮನಸ್ಸಿನಲ್ಲಿ ಕುಳಿತುಬಿಟ್ಟವು. ಒಮ್ಮೆ ತನ್ನ ಅಮ್ಮನನ್ನು ತುಂಬಾ ಪ್ರೀತಿಸುತ್ತಿದ್ದ ಆ ಮಗು ಈಗ ಅವರೊಂದಿಗೆ ಜಗಳ ಮಾಡತೊಡಗಿತು. ಓದಿನ ಮೇಲೂ ಅವನ ಆಸಕ್ತಿ ಕಡಿಮೆಯಾಯಿತು. ಅಮ್ಮ ಅವನಿಗೆ ಹಲವಾರು ಬಾರಿ ತಿಳಿಸಲು ಪ್ರಯತ್ನಿಸಿದರು, ಆದರೆ ಅವನು ಕೇಳಲಿಲ್ಲ. ಕಾಲ ಕಳೆದಂತೆ ರಾಜು 13 ವರ್ಷದವನಾದನು. ಈಗ ಅವನು ಸಂಪೂರ್ಣ ಬದಲಾಗಿದ್ದನು. ಓದಿನಲ್ಲಿ ಮನಸ್ಸಿಲ್ಲದ ಕಾರಣ ಪರೀಕ್ಷೆಗಳಲ್ಲಿ ತುಂಬಾ ಕಡಿಮೆ ಅಂಕಗಳನ್ನು ತರುತ್ತಿದ್ದನು, ಕೆಲವೊಮ್ಮೆ ಅನುತ್ತೀರ್ಣನಾಗುತ್ತಿದ್ದನು. ಶಿಕ್ಷಕರೂ ಅವನನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು, ಆದರೆ ಅವರ ಮಾತನ್ನೂ ಅವನು ಕೇಳಲಿಲ್ಲ.ಅವನ ಅಜ್ಜಿ -ತಾತ ಅಮ್ಮನ ಕಡೆ ಕೆಲ ಸಂಬಂಧಿಕರು ಬುದ್ದಿ ಹೇಳಿದರೂ ಅವರಲ್ಲಿ ಒಪ್ಪಿ ಕೊಂಡರೂ ಬದಲಾಗಲಿಲ್ಲ. ಇದನ್ನೆಲ್ಲಾ ನೋಡಿ ಅಮ್ಮನ ಹೃದಯ ತುಂಬಾ ನೋವಿನಿಂದ ತುಂಬಿತು. ಒಮ್ಮೆ ತನ್ನ ಅಮ್ಮಗಾಗಿ ಹೂಮಾಲೆ ತರುತ್ತಿದ್ದ ಮಗು ಇಂದು ಅವರಿಂದ ಎಷ್ಟು ದೂರ ಹೋಗಿದೆ ಎಂಬುದು ಅವರನ್ನು ಕಾಡುತ್ತಿತ್ತು. ಆದರೂ ಅಮ್ಮನ ಮನಸ್ಸಿನಲ್ಲಿ ಇನ್ನೂ ಆಸೆಯಿದೆ, ಒಂದು ದಿನ ಅವನು ತನ್ನ ಅಮ್ಮ ಹೇಳಿದ ಮಾತುಗಳು ಅವನ ಒಳ್ಳೆಯದಕ್ಕಾಗಿ ಆಗಿದ್ದವು ಎಂದು ಅರ್ಥಮಾಡಿಕೊಳ್ಳಬಹುದು ಎಂದು.


Rate this content
Log in