ಮದುವೆಯೇ ಇಲ್ಲದೆ ತಾಯಿಯಾದವಳು
ಮದುವೆಯೇ ಇಲ್ಲದೆ ತಾಯಿಯಾದವಳು
ದುರ್ಗಿ ಎಂಬ ಪದ ಕಿವಿಯಲ್ಲಿ ಬಿದ್ದೊಡನೆ, ಹಣೆಗೆ ಕೆಂಪು ತಿಲಕವಿಟ್ಟ, ಕೆಂಪು ನಾಲಿಗೆ ಹೊರ ಚಾಚಿದ, ಕೂದಲು ಹರಡಿರುವ, ಕೆಂಪು ಸೀರೆಯನ್ನುಟ್ಟ, ಕೈಗಳಲ್ಲಿ ಆಯುಧ ಹಿಡಿದ ಮೂರ್ತಿ ಕಣ್ಣ ಮುಂದೆ ಬರುವುದು ಸಹಜ. ಹಾಗಾದರೆ ದುರ್ಗಿ ಎಂದೆನಿಸಲು, ದುಷ್ಟನೊಬ್ಬನನ್ನು ಎದುರಿಸಲೇಬೇಕೆ? ಅಥವ ದುಷ್ಟನನ್ನು ಹುಡುಕಿ ಅವನಿಗೊಂದು ಗತಿ ಕಾಣಿಸಿದ ನಂತರ ದುರ್ಗಿ ಎನಿಸಿಕೊಳ್ಳಬೇಕೆ? ಇಲ್ಲ ಹಾಗಲ್ಲ. ನಮ್ಮಲ್ಲಿರುವ ಕೆಲವು ಮೂಢ ನಂಬಿಕೆಗಳು, ಅನಗತ್ಯ ವಿಷಯಗಳಲ್ಲಿ ತುಂಬಿರುವ ಅರಿಷಡ್ವರ್ಗಗಳ ಸೆಣೆಸಾಟ, ವಾಸ್ತವಕ್ಕೆ ದೂರ ಸರಿದು ಬಾಳುತ್ತಿರುವ ಸ್ವೇಚ್ಛಾಚಾರದ ಬದುಕು, ಇವುಗಳೆಲ್ಲವನ್ನು ಸರಿಯಾದ ಪ್ರಮಾಣದಲ್ಲಿ ತೂಗಿ, ಅಹಂ ಅನ್ನು ಮರ್ದಿಸಿದಾಗ ನಾವೆಲ್ಲರೂ ದುರ್ಗಿಯ ಅವತಾರವೆತ್ತಿದಂತೆ.
ಇಂದ್ರಜಿತ್ ಮತ್ತು ಪದ್ಮ ದಂಪತಿಯ ಮಗಳು ನಂದಿನಿ. ಇಂದ್ರಜಿತ್ ಒಬ್ಬ ವ್ಯಾಪಾರಿಯಾಗಿದ್ದು, ಪದ್ಮರವರು ಅಪ್ಪಟ ಗೃಹಿಣಿ. ಎಂಜಿನೀರಿಂಗ್ ಕೊನೆ ವರ್ಷದಲ್ಲಿ ಓದುತ್ತಿದ್ದಳು ನಂದಿನಿ. ಮನೆಯಲ್ಲಿ ಕುಂದು ಕೊರತೆಗಳೇನೂ ಇರಲಿಲ್ಲ. ಆದರೂ ಮಗಳ ಯಾವ ಚಟುವಟಿಕೆಯಲ್ಲೂ ಇಂದ್ರಜಿತ್ ಹಾಜರಿ ಇರಲಿಲ್ಲ ಅಷ್ಟೆ. ಮೊದಲೆ ವ್ಯಾಪಾರಿಯಾಗಿದ್ದರಿಂದ ಸಮಯದ ಅಭಾವ ಇರುತ್ತಿತ್ತು. ಸಮಯ ಸಿಕ್ಕಾಗ ಮಗಳ ಜೊತೆ ಕಾಲ ಕಳೆಯುತ್ತಿದ್ದರು. ಹಸಿದಾಗ ಅನ್ನ ಸಿಕ್ಕರೆ ಸಿಗುವ ಖುಷಿ, ಹಸಿದು ಸಮಯ ಮೀರಿದಾಗ ಸಿಕ್ಕರೆ, ನಿರ್ಭಾವ ಹೊಮ್ಮುತ್ತವಷ್ಟೆ. ಮಕ್ಕಳಲ್ಲೂ ಹೀಗೆ, ಅವರ ಬೇಕುಗಳಿಗೆ ನಾವಿಲ್ಲದೆ ಹೋದಾಗ, ಅದು ಅವರಿಗೆ ಅಭ್ಯಾಸವಾಗಿರಲು, ನಮಗೆ ಬೇಕಾದಾಗ ಹೋದರೆ ಯಾವ ಭಾವನೆಯೂ ದೊರೆವುದಿಲ್ಲ.
ನಮ್ಮ ನಂದಿನಿ, ಕಾಲ ಕ್ರಮೇಣ ಅಮ್ಮನ ಆಗು ಹೋಗುಗಳ ತಿಳಿಯುತ್ತ ಬೆಳೆದಳು. ಅಪ್ಪ ಅಮ್ಮ ಜೊತೆಗಿದ್ದರೂ, ಸಮಯದ ಅಭಾವವೋ, ಒಟ್ಟಿಗೆ ಮೂವರು ಕಾಲ ಕಳೆಯುವ ಕ್ಷಣಗಳು ಕಡಿಮೆ ಇದ್ದವು. ಹೇಗೊ ತೊಂದರೆಯಿಲ್ಲದಂತೆ ಜೀವನ ನಡೆಯುತ್ತಿತ್ತು.
ನಂದಿನಿಯ ಪದವಿ ಮುಗಿವ ಹಂತಕ್ಕೆ ಬರಲು, ವರನ ಅನ್ವೇಷಣೆ ಶುರುವಾಯಿತು. ಸುಮಂತ್ ಒಳ್ಳೆಯ ಹುಡುಗನೆಂದು ಹಿರಿಯರು ನಿಶ್ಚಯಿಸಿದ್ದರಿಂದ ಮದುವೆಗೆ ಒಪ್ಪಿದಳು ನಂದಿನಿ. ಹುಡುಗನ ಮನೆಯವರು ಆಗರ್ಭ ಶ್ರೀಮಂತರು, ಮಗಳು ಅಲ್ಲಿ ಚೆನ್ನಾಗಿರುವಳೆಂದು ನಿರ್ಧರಿಸಿದ್ದರು. ನಿಶ್ಚಿತಾರ್ಥದ ದಿನ, ತಾನು ಹೇಳಿದ ಗುಲಾಬಿ ಹಾರ ತರಿಸಲಿಲ್ಲವೆಂದು ಜಗಳ ತೆಗೆದ ಸುಮಂತ್ ನ ತಾಯಿ, ನಂದಿನಿಯ ತಂದೆಯ ಯೋಗ್ಯತೆಯ ಬಗ್ಗೆ ಎಲ್ಲಾ ಮಾತಾಡಿದರು. ಎಷ್ಟೇ ಆದರೂ ಮಗಳನ್ನು ಕೊಡುವ ಮನೆಯೆಂದು ಸಹಿಸಿಕೊಂಡರು ಇಂದ್ರಜಿತ್ ಮತ್ತು ಪದ್ಮರವರು. ಮದುವೆಗೆ ಮೂರು ತಿಂಗಳಿತ್ತಾದರೂ, ಸಣ್ಣ ಪುಟ್ಟ ವಿಷಯಗಳೂ ಜಗಳದಲ್ಲೇ ಅಂತ್ಯವಾಗುತ್ತಿತ್ತು. ದಿನೇ ದಿನೇ ಅಪ್ಪ ಅಮ್ಮನ ಅಸಹಾಯಕತೆಯನ್ನು ಕಂಡ ನಂದಿನಿ ಇದು ಮುಂದುವರೆದರೆ ಸರಿಯಿರುವುದಿಲ್ಲ ಎಂದು ಭಾವಿಸಿದಳು. ತನ್ನಮ್ಮನ ಬಳಿ ಹೇಳಿದರೂ, ಪದ್ಮರವರು ಮಾತ್ರ ಮದುವೆ ನಿಲ್ಲಿಸೊಲ್ಲವೆಂದು ಹೇಳಿದರು. ನಂದಿನಿ ಸುಮ್ಮನಾಗಿದ್ದಳು.
ಸುಮಂತ್ ಹಾಗು ನಂದಿನಿ ಪರಸ್ಪರ ಒಬ್ಬರನ್ನು ಅರ್ಥ ಮಾಡಿಕೊಳ್ಳಲು ಆಚೆ ಭೇಟಿ ಮಾಡುವುದು ಶುರುವಾಗಿತ್ತು. ಇತ್ತ ಸುಮಂತ್ ನ ತಾಯಿಗೆ ಯಾವ ಹುಚ್ಚು ಅಂಟಿತ್ತೋ ,ಯಾರು ಕಿವಿ ಊದಿದರೋ, ಮದುವೆಯನ್ನು ಮುರಿದರು. ಕಾರಣ ಕೇಳಿದರೆ, ನಿಮ್ಮ ಮಗಳು ಶೀಲವಂತೆಯಲ್ಲ ಎಂದರು. ಗಂಡು ಹೆತ್ತವರು ಹೇಳುವ ಸರ್ವೇ ಸಾಮಾನ್ಯ ಕಾರಣ ಇದು. ಅಲ್ಲಿಯವರೆಗೂ ತಾಳ್ಮೆ, ಸಹನೆಯಿಂದಿದ್ದ ಪದ್ಮ ಮತ್ತು ಇಂದ್ರಜಿತ್, ತಮ್ಮ ಗುಣವಂತ ಮಗಳ ಬಗ್ಗೆ ಈ ಮಾತು ಕೇಳಿ ಕೆಂಡಾಮಂಡಲವಾದರು. ತಮ್ಮ ಮನೆಗೆ ಬೆಳಕಾಗಿದ್ದ ಮಗಳ ಬಗ್ಗೆ ಮಾತಾಡಿದ್ದರಿಂದ, ಮುಂದೆ ಮದುವೆಯಾದ ಮೇಲೆ ಹೇಗೆಲ್ಲ ತೊಂದರೆ ಕೊಡಬಹುದೆಂದು ಯೋಚಿಸಿ ಮದುವೆ ಮುರಿದರು. ಸದ್ಯ ಅಲ್ಪದ್ದರಲ್ಲೇ ಕಂಟಕ ಮುಗಿಯಿತೆಂದು ಸಮಾಧಾನ ಪಟ್ಟರು.
ಒಳ್ಳೆಯ ಕೆಲಸ ಸಿಕ್ಕಿ, ಕೈ ತುಂಬ ಸಂಪಾದಿಸುತ್ತಿದ್ದಳು ನಂದಿನಿ. ಸಂತೋಷವಿದ್ದರೂ, ಮನಃಪೂರ್ವಕವಾಗಿ ನಗುತ್ತಿರಲಿಲ್ಲ, ಘಾಸಿಯಾದ ಮನಸ್ಸು. ಆಫೀಸಿನ ಗೆಳತಿಯೊಬ್ಬಳು ಇವಳ ನೋವಿಗೆ ಸಾಂತ್ವನ ಹೇಳುತ್ತಿದ್ದಳು. ಮನಃ ಪರಿವರ್ತನೆಗೆಂದು, ಆಚೆಗೆ ಹೋಗುವುದು ಎಲ್ಲ ನಡೆದಿತ್ತು. ಒಂದು ದಿನ ಅನಾಥಾಶ್ರಮಕ್ಕೆ ಇಬ್ಬರೂ ಹೋಗಿ ಬಂದರು. ಅಲ್ಲಿನ ಆ ಮಕ್ಕಳ ಆಟ, ಚಟುವಟಿಕೆ, ಘಾಸಿಯಾಗಿದ್ದ ಮನಕ್ಕೆ ಮುಲಾಮಾಗಿತ್ತು. ಎಲ್ಲವನ್ನ ತನ್ನ ಪೋಷಕರಲ್ಲಿ ಹೇಳಿಕೊಂಡು ಖುಷಿಯಾಗಿದ್ದಳು. ಆದಷ್ಟು ಬೇಗ ಇನ್ನೊಬ್ಬನ್ನ ನೋಡಿ ಮದುವೆ ಮಾಡಬೇಕೆಂದುಕೊಳ್ಳುವಷ್ಟರಲ್ಲಿ ನಂದಿನಿ, ತಾನು ಮದುವೆಯಾಗುವುದಿಲ್ಲವೆಂದು, ಅನಾಥ ಮಗುವನ್ನು ದತ್ತು ಪಡೆದು ಸಾಕಬೇಕೆಂದು ನಿರ್ಧರಿಸಿರುವುದಾಗಿ ಹೇಳಿದಳು. ಆಕಾಶವೆ ಕಳಚಿ ಬಿದ್ದಂತಾಯಿತು ತಂದೆ ತಾಯಿಗೆ. ಒಂದು ತಿಂಗಳ ಮಟ್ಟಿಗೆ ಅಪ್ಪ ಮಗಳ ಮಾತುಕತೆ ನಿಂತು ಹೋಯಿತು. ಒಂದು ದಿನ ಬುದ್ಧಿವಾದ ಹೇಳಲು ಇಂದ್ರಜಿತ್ರವರು ಬಂದಾಗ...
ಶಾಂತ ಮೂರ್ತಿಯಂತೆ, ದೇವಿ ದುರ್ಗೆಯ ಇನ್ನೊಂದು ರೂಪವಾದ ಸಂತಾನ ಲಕ್ಮಿಯ ರೂಪದಂತೆ ಕಾಣುತ್ತಿದ್ದ ಅವಳ ಮುಖ ಭಾವ ಕಂಡು ಬೆರಗಾಗಿದ್ದರು ತಂದೆ. "ಅಪ್ಪ, ನನ್ನನ್ನು ಯಾರೋ ಏನೋ ಅಂದರು ಎಂದು ನಿಮಗೆ ಇಷ್ಟು ನೋವಿರುವಾಗ, ಯಾರದ್ದೋ ತಪ್ಪಿನಿಂದ ಹುಟ್ಟಿದ ಆ ಮಕ್ಕಳು, ಒಳ್ಳೆಯ ಜೀವನಕ್ಕಾಗಿ ಹೋರಾಡುವ ಮಕ್ಕಳು, ತಾವು ಮಾಡದ ತಪ್ಪಿಗೆ ನೋವನ್ನನ್ನುಭವಿಸುತ್ತಿದ್ದಾರೆ, ಇಂಥ ಮಕ್ಕಳಿಗೆ ಯಾರು ಜೊತೆಯಿರುತ್ತಾರೆ? ಕಳೆ ಗಿಡಗಳಂತೆ ಬೆಳೆದು, ಸಾಯುತ್ತಾರೆ, ನನ್ನ ಜೀವನಕ್ಕೆ ನೀವು ಕಾರಣ, ನೀವು ಹೇಳಿದಂತೆ ನಾನು ಮದುವೆಯಾಗುತ್ತೇನೆ, ಆದರೆ ನನ್ನ ನಿರ್ಧಾರಕ್ಕೆ ಜೊತೆಯಾಗಿ ನಿಲ್ಲುವ ಗಂಡು ದೊರೆತಾಗ" ಎಂದಳು.
ಮಾತುಗಳೆ ಬಾರದೆ, ಗೊಂದಲದಲ್ಲಿದ್ದರು ಇಂದ್ರಜಿತ್, ಒಪ್ಪಲೇಬೇಕಾದ ಪರಿಸ್ಥಿತಿಯಾಗಿತ್ತು. ಒಲ್ಲದ ಮನಸ್ಸಲ್ಲಿ ಒಪ್ಪಿದರೂ ಪದ್ಮರವರಿಗೆ ಮಾತ್ರ ಇಷ್ಟವಿರಲಿಲ್ಲ. ಯಾವ ತಾಯಿ ತಾನೆ, ತಾ ಹೆತ್ತ ಮಗಳು ನಾಲ್ಕು ಜನ ಒಪ್ಪದಂಥ ಕೆಲಸ ಮಾಡುವುದನ್ನು ಸ್ವೀಕರಿಸುತ್ತಾಳೆ? ಗೊಂದಲದಲ್ಲೇ ಕೆಲ ದಿನಗಳ ಕಳೆದರು.
ಮಗಳು ಪ್ರಬುದ್ಧಳಾಗಿ ವರ್ತಿಸಿ, ಹುಟ್ಟು ಹಬ್ಬಕ್ಕೆ ಆಶ್ರಮಕ್ಕೆ ಹೋಗಿ ಆಚರಿಸುವ ಬದಲು, ಒಂದು ಮಗುವ ದತ್ತು ಪಡೆದು, ನನ್ನ ಹುಟ್ಟಿಗೂ, ಆ ಮಗುವಿನ ಹುಟ್ಟಿಗೂ ಗುರುತು ನೀಡುತ್ತೇನೆ ಅಮ್ಮ ಎಂದಳು. ಡೋಲಾಯಮಾನ ಸ್ಥಿತಿ ಪದ್ಮರವರು ಎದುರಿಸುತ್ತಿದ್ದರು. ಮಗಳು ನಮ್ಮ ಮಾತು ಕೇಳುವುದಿಲ್ಲ ಎಂದೆನಿಸಿ ತಮ್ಮ ನಿತ್ಯ ಕಾರ್ಯಗಳಲ್ಲಿ ತೊಡಗಿಸಿಕೊಂಡರು. ತಮ್ಮ 25ನೇ ವರ್ಷದ ವಿವಾಹ ವಾರ್ಷಿಕೋತ್ಸವದಂದು, ಮುದ್ದಾದ 7 ತಿಂಗಳ ಹೆಣ್ಣು ಮಗುವನ್ನು ತಂದೇ ಬಿಟ್ಟಳು ನಂದಿನಿ. ಇವಳ ನಿರ್ಧಾರ ಬದಲಾಗುವುದಿಲ್ಲವೆಂದು ಸಮ್ಮತಿ ನೀಡಲೇಬೇಕಾಯಿತು ಪೋಷಕರು. ಮಗುವಿಗೆ "ಇಂಪನ" ಎಂದು ಹೆಸರಿಟ್ಟರು.
ಇಂ- ಇಂದ್ರಜಿತ್, ಪ- ಪದ್ಮ, ನ- ನಂದಿನಿ.
ನಂದಿನಿಗೆ ಆ ಮಗು ಅದೃಷ್ಟವೇನೊ ಎಂಬಂತೆ, ತನ್ನದೆ ಸ್ವಂತ ಕಂಪೆನಿ ಶುರು ಮಾಡಿದಳು. ಅವಳ ಕಂಪನಿಯಲ್ಲಿ ವ್ಯವಹರಿಸಲು ಬಂದ ಮತ್ತೊಬ್ಬ ವ್ಯಕ್ತಿಗೆ, ನಂದಿನಿಯ ಆದರ್ಶ, ಬದುಕಲ್ಲಿ ಅವಳಿಟ್ಟ ದಿಟ್ಟ ಹೆಜ್ಜೆ, ಮನಸ್ಸಿಗೆ ಹಿಡಿಸಿ, ಅವಳನ್ನು ಮದುವೆಯಾಗ ಬಯಸಿದ. 3 ತಿಂಗಳು ಅವನನ್ನು ಅರ್ಥೈಸಿಕೊಂಡ ಮೇಲೆ ನಂದಿನಿ ತಾನಾಗೆ ಮದುವೆಯಾಗಲು ಒಪ್ಪಿದಳು. ಮಗಳ ಈ ಬೆಳವಣಿಗೆಗೆ ಪ್ರೋತ್ಸಾಹ ನೀಡಿ ಅವಳ ಆಗು ಹೋಗುಗಳ ಜೊತೆಯಾಗಿ ನಿಂತ ಅಪ್ಪ ಅಮ್ಮ, ಹೂವಿನಲ್ಲಿ ಸೇರಿದ ದಾರದ ರೀತಿ, ಗೌರವ ಇಮ್ಮಡಿಗೊಳಿಸಿಕೊಂಡರು. ಮದುವೆಯಾಗಿ 2 ವರ್ಷದೊಳಗೆ ಅವಳಿ ಜವಳಿ ಗಂಡು ಮಕ್ಕಳಿಗೆ ಹೆತ್ತ ತಾಯಾದಳು. ನಂದಿನಿ ಯಶೋದೆಯ ಪ್ರತಿರೂಪದಂತೆ ಕಂಡಿದ್ದು ಅತಿಶಯವಲ್ಲ.
ಸ್ನೇಹಿತರೆ, ಬದುಕಲ್ಲಿ ಕೆಲವೊಂದು ಘಟನೆ ನಮ್ಮ ನಿಲುವನ್ನೇ ಪ್ರಶ್ನಿಸುತ್ತವೆ. ನಾವು ಅದನ್ನು ಸ್ವೀಕರಿಸುವ ರೀತಿಯಲ್ಲಿ ನಮ್ಮ ಬದುಕು ಒಂದು ಹಂತಕ್ಕೆ ತಲುಪುವುದು. ಎಲ್ಲಕ್ಕಿಂತ ಮನುಷ್ಯನಿಗೆ, ನಂಬಿಕೆ ಮುಖ್ಯ. ನಮ್ಮ ನಿರ್ಧಾರದ ಮೇಲೆ ನಂಬಿಕೆ ಇದ್ದರೆ, ಯಶಸ್ಸು ದೊರೆಯುವುದು ಖಂಡಿತ. ನಿಮ್ಮ ನಿರ್ಧಾರ ಸಕಾರಾತ್ಮವಾಗಿರಲಿ. ಈ ಕಥೆಯ ಬರೆವ ಉದ್ದೇಶ, ನಮ್ಮ ಸುತ್ತ ಎಷ್ಟೊ ಜನ ಮಕ್ಕಳಿಲ್ಲದೆ ಜೀವನ ನಶ್ವರ ಎಂದು ಕಣ್ಣೀರಿಡುವಾಗ, ಇಂಥ ಕೆಲವು ನಿದರ್ಶನಗಳು ಅವರಿಗೆ ಮಾದರಿಯಾಗಲಿ. ಮಕ್ಕಳು ಅನಾಥರಾಗುವುದು ಆದಷ್ಟು ಕಡಿಮೆಯಾಗಲಿ.
