ನನಗೂ ಮನಸ್ಸಿದೆ.....!!
ನನಗೂ ಮನಸ್ಸಿದೆ.....!!
ಹೃದಯದೊಳಗಿನ ನೂರಾರು ಭಾವಗಳನು
ಅಕ್ಷರಗಳ ರೂಪದಲಿ ಹೊರ ಹಾಕಿದಲ್ಲಿ
ಮನಸ್ಸಿಗೆ ತುಸು ನೆಮ್ಮದಿಯಿರುವುದು
ದುಃಖದಲಿರುವಾಗ ನಾ ಗೀಚಿದ ಸಾಲುಗಳನು
ಕಂಡಾಗ ಮನಕೆ ತುಸು ಸಮಾಧಾನವಿರುವುದು
ಮನದೊಳಗೆ ಹಲವಾರು ಭಾವಗಳ ಭೋರ್ಗರೆತ
ನವರಸ ಭಾವಗಳನು ಹತ್ತಿಕ್ಕುವುದೇ ದೊಡ್ಡ ಸಾಹಸ!!
ಮನವೆಂಬುದು ಮರ್ಕಟದಂತೆ ನಮ್ಮ ಕೈಗೆ ಸಿಗದು
ಇದ್ದಲ್ಲಿಂದಲೇ ಹಲವಾರು ದೂರಗಳ ಕ್ರಮಿಸುತಲಿಹುದು!
ಕಷ್ಟ ಸುಖಗಳು ನಾಣ್ಯದ ಎರಡು ಮುಖಗಳಿದ್ದಂತೆ
ಎರಡನೂ ಸಮಚಿತ್ತದಲಿ ಎದುರಿಸುವ ಮನವಿರಲಿ
ಖುಷಿಯಲ್ಲಿ ಹಿಗ್ಗದಿರು ದುಃಖದಲ್ಲಿ ಕುಗ್ಗದಿರೆಂದು
ಹೇಳಲು ಸುಲಭ ಆದರೆ ಅನುಸರಿಸುವುದು ಕಷ್ಟ!!
ನೋವಾದರೆ ತನ್ನಿಂತಾನೆ ಕಣ್ಣೀರು ಬರುವುದು
ಖುಷಿಯಾದಾಗ ಮನವು ಕುಣಿದಾಡುವುದು
ಸುಖ ದುಃಖದ ಜೀವನದ ಜಂಜಾಟಗಳಲ್ಲಿ
ಲೇಖನಿಯಿಂದ ಅಕ್ಷರಗಳ ಮುತ್ತುಗಳನ್ನು ಪೋಣಿಸಿ
ಭಾವಗಳ ಹೊರಹಾಕುವೆ ಏಕೆಂದರೆ ನನಗೂ ಮನಸ್ಸಿದೆ!!
