ಆಸಾರ
ಆಸಾರ
ಎಡಬಿಡದೆ ಸುರಿಯುತಿದೆ
ಆ ನಭದಿಂದ ರಭಸದಿ
ಅಂಗಳದ ತುಂಬಾ ಆಸಾರ
ಕಣ್ಣೆವೆಯ ಮುಚ್ಚದೆ
ಕಾಯುತಿರುವೆ ಅವನಿಗಾಗಿ
ಬರುವನೆ ಆ ನನ್ನ ನೇಸರ
ಕುಳಿರ್ಗಾಳಿಯು ಸೋಕಲು
ಅರ್ಕನ ನೆನಪಾಗುತಿದೆ
ಹಳುತುಂಬಿದ ತೋಟವು
ಹಸಿರು ಸೀರೆ ಹೊದ್ದು ನಲಿಯುತಿದೆ
ಕಪ್ಪು ಕಾದಂಬಿನಿಯರ ಸಾಲು
ಬಾನಲಿ ಬಂದು ಸೇರಿವೆ
ಕರಗಿ ನೀರಾಗಲು ಹಪಹಪಿಸುತ್ತ
ಭುವಿಯ ಅನುಮತಿ ಕೇಳುತಿವೆ
ಸುಮಗಳು ಮಿಂದು ತೋಯುತಿವೆ
ಜಡಿಮಳೆಯ ಸಂಗೀತಕೆ ತಲೆದೂಗುತಿವೆ
ದುಂಬಿಗಳು ಮಂದಾರವ ಮುತ್ತಿಕ್ಕುತಿವೆ
ಜಡಜವು ಸಂತಸದಿ ಬಿರಿಯುತಿದೆ
ಮೈಮರೆತಿದೆ ಇಳೆಯು ವರುಣನ ಆಲಿಂಗನಕೆ
ಮೃತ್ತಿಕೆಯು ಘಮ್ಮೆಂದಿದೆ ಆಸಾರನ ಆಗಮನಕೆ
