ಹಸಿರ ನಡುವೆ
ಹಸಿರ ನಡುವೆ
ತೆರೆಯಿತು ಭಾಗ್ಯದ ಬಾಗಿಲು
ಸ್ವಚ್ಛಂದವಾಗಿ ವಿಹರಿಸುತ್ತ
ಚಿಲಿಪಿಲಿಗುಟ್ಟುತ್ತಿರುವ ಹಕ್ಕಿಗಳ ಸಾಲು
ಮನೆಯ ಮುಂದೆ ತಲೆ ಎತ್ತಿ ನಿಂತ
ಕಲ್ಪವೃಕ್ಷಗಳ ಸಾಲು.
ಕಂಗು ತೆಂಗು ಬಾಳೆಗಳ ಮಧ್ಯೆ ಮುಂಜಾನೆ
ತೂರಿ ಬರುವ ನೇಸರನ ಕಿರಣಗಳು
ದೇವರ ನಾಮವ ಗುನುಗುತ್ತಾ ಗೃಹಲಕ್ಷ್ಮಿ
ರಂಗವಲ್ಲಿಯನಿಟ್ಟು ತುಳಸಿಗೆ ನೀರೆರೆವಳು
ಹಟ್ಟಿಯ ಕರುವಿಗೆ ಹುಲ್ಲು ಹಾಕಿ ಗೆಜ್ಜೆಯ
ದನಿಯೊಂದಿಗೆ ಮನವ ತಣಿಸುವ ಮಗಳು.
ಹೊಲ ತೋಟದ ಕಾಯಕದಲ್ಲಿ
ಅಪ್ಪನಿಗೆ ಜೊತೆಯಾಗುವ ಮಗನ ಹೆಗಲು
ಬದುಕು ಸಾರ್ಥಕವಾಯಿತು
ಹಸಿರಿನ ನಡುವೆ ಉಸಿರಾಡುತ್ತಿರಲು
ಧನ್ಯತೆಯ ಭಾವದಿಂದ ನೋಡುತ್ತಿವೆ
ಮನೆಯ ಹಿರಿ ಜೀವಗಳು.
