ಬೆಂದು ಬೆಳಕಾದ ಬೇಂದ್ರೆ
ಬೆಂದು ಬೆಳಕಾದ ಬೇಂದ್ರೆ
ಎನಗೂ ನಿನಗೂ ಅಂಟಿದ ನಂಟಿನ
ಸಾಧನ ಕೇರಿಯ ಸಾಧಕನೇ
ಮಂದಿ ಒಳಗ ತಾನೊಂದಾದರೂ
ಬೆಂದು ಬಳಲಿದ ಪ್ರೇರಕನೇ II
ಮನದ ಮಣ್ಣನೇ ಕಲಸಿ ಬಳಸಿದ
ಅದಕೂ ಇದಕು ಎದಕು
ಅವನವನ ಭಾಗ್ಯಕ್ಕೆ ಬೇವು ಮಾವಾಗಲೇ ಇಲ್ಲ ಬದುಕು
ಕುರುಡು ಕಾಂಚಾಣದ ಗೆಜ್ಜೆ ಸದ್ದಿನಬ್ಬರಕೆ
ಅಗಸಿ ಮುಂದೆ ನಿಂತರೂ, ಶ್ರಾವಣದ ಮಳಿ
ಬರಲೇ ಇಲ್ಲ ಹದಕ II
ಬರಹ ಒಂದೇ ಬಲ, ಬುದ್ಧಿಯೇ ಕೌಶಲ್ಯ ಧನ ಕನಕ ಒಡವೆ ಕಾಣಲಿಲ್ಲ ಬೇಂದ್ರೆ
ಕುಳಿತು ಪರದೆಯ ಹಿಂದೆ ಅವನಾಡಿಸೋ ನಾಟಕದಿ
ಸೋತ ಸೋಲನೆ,ಅಪ್ಪಿ, ಅದನೆ ನೆಪ್ಪಿ
ಕೆತ್ತಿದ ಜೀವನ ಗಾಥೆಯ ನಾಕುತಂತಿಯ ಶಿಲ್ಪಿ II
ಹುಸಿ ನಗುವಿನ ಮುಂದ ತುಸು ನಗುವುದ ಕಲಿತಿದ್ದ
ಹಸುಗೂಸಿನ ಸಾವಿಗೆ ಅಂತರಂಗದ ಮೃದಂಗವೇ ನೊಂದಿತ್ತ
ಹೂತ ಹುಣಿಸೆ ಮರದ ಟೊಂಗಿಗ ಜೇಡ ಒಡಲನೂಲಿನ ದಾರ ಹೆಣೆದಿತ್ತ II
ಅಯ್ಯೋ ಬದುಕೇ ನಾನಿರ್ದ ಬನದೋಳ್
ಇರ್ದಂ ನೀನಮ್ | 'ಗಾಳಿ ಯಾರದೋ ' ಸೂತ್ರ ಯಾರದೋ
ಕತ್ತಲೆಯ ಹಪಹಪಿಸುವೆ ಏಕೆ?
ಮತ್ತೆ ಬೇಯುವೆ ಮತ್ತೆ ಬಳಲುವೆ ,
ಮೂಡುವೆ ಹಚ್ಚ ಹೊಸ ಬೆಳಕಾಗಿ
ಯಾಕೆಂದರೆ ನಾ ಬೇಂದ್ರೆ II ಯಾಕೆಂದರೆ ನಾ ಬೇಂದ್ರೆ II
