ರಾಮರಾಜ್ಯ
ರಾಮರಾಜ್ಯ
ಬಹಳ ಹಿಂದೆ ಒಬ್ಬ ರಾಜನಿದ್ದ. ತನ್ನ ರಾಜ್ಯದಲ್ಲಿ ಬಡವರೇ ಇಲ್ಲವೆಂದು ಎಲ್ಲರೂ ಬಹಳ ಸುಖವಾಗಿದ್ದಾರೆಂದು ಬಹಳ ಸಂತೋಷಪಟ್ಟಿದ್ದ. ಅವನಿಗೆ ಮಹಾಮಂತ್ರಿಗಿಂತ ಅವನ ಪರಿಚಾರಕ ಸಿಬ್ಬಂದಿಮೇಲೆ ಬಹಳ ನಂಬಿಕೆ. ಒಮ್ಮೆ ಪಕ್ಕದ ದೇಶದ ರಾಜನ ಆಹ್ವಾನದ ಮೇಲೆ ತನ್ನ ಎಲ್ಲಾ ಸಿಬ್ಬಂದಿ ಜೊತೆ ಹೊರಟಿದ್ದಾಗ ಸಂಜೆಯಾಗುತ್ತಿದ್ದ ಕಾರಣ ಅವನ ದೇಶದ ಗಡಿಯಲ್ಲಿಯೆ ಬಿಡಾರ ಹೂಡಬೇಕಾಯ್ತು. ಒಬ್ಬ ಭಿಕ್ಷುಕ ಅಲ್ಲಿಗೆ ಅಕಸ್ಮಾತ್ ಬಂದಾಗ ರಾಜನಬಗ್ಗೆ ಬಹಳ ಕುತೂಹಲ ಇದ್ದುದರಿಂದ ಅವನಿಗೆ ರಾಜನನ್ನ ನೋಡಬೇಕೆನಿಸಿತು.ಆದರೆ ಅಷ್ಟು ಸುಲಭವಲ್ಲವೆಂದು ತಿಳಿದಿತ್ತು. ಸಮ್ಮತಿಗಾಗಿ ಅಲ್ಲೇ ಇದ್ದ ಕಾವಲುಗಾರನನ್ನ ಕೇಳಿದ. ಇವನ ಹರಕಲು ಬಟ್ಟೆ ಗಲೀಜು ಮುಖ ನೋಡಿ ನಕ್ಕು ಏನಯ್ಯ ರಾಜ ಅಂದರೆ ನಿನ್ನ ಸ್ನೇಹಿತನನ್ನ ನೋಡೋ ಹಾಗೇ ಅಂದುಕೊಂಡಿದ್ದೀಯ. ನಿನ್ನನ್ನ ನೋಡಿದ್ರೆ ಸೆರೆಮನೆಗೆ ಹಾಕಿಸಿಬಿಡ್ತಾರೆ. ಯಾಕೆ ಗೊತ್ತಾ ನಮ್ಮ ರಾಜ್ಯದಲ್ಲಿ ಭಿಕ್ಷುಕರು ಹೋಗ್ಲಿ ಬಡವರನ್ನ ಕಂಡರೂ ಅವರು ಸಹಿಸಲ್ಲ ಗೊತ್ತಾ ಅಂದುಬಿಟ್ಟ . ನಮ್ಮದು ರಾಮ ರಾಜ್ಯ ಅಂತ ಹೇಳ್ತಾ ಇರೋವಾಗ.ಡೇರೆಯ ಒಳಗಿನಿಂದ ಬಂದ ಒಬ್ಬ ಸೈನಿಕ ಇಲ್ಲಿ ಈಗ ಮಾತನಾಡುತ್ತಿರುವ ವ್ಯಕ್ತಿ ಯನ್ನ ಕರೆದು ಕೊಂಡು ಬರಬೇಕೆಂದು ಆ
ಜ್ಞೆಯಾಗಿದೆ ಯಾರದು ಅಂದ. ಅಲ್ಲಿದ್ದ ಭಿಕ್ಷುಕನನ್ನ ಕಂಡು ನೀನೇನಾ ಬಾ ಒಳಗೆ ಅಂತ ಕೈಹಿಡಿದು ಎಳೆದು ಕರೆದೊಯ್ದ.
ರಾಜ ಇವನನ್ನ ನೋಡಿ ಯಾವ ದೇಶದ ಗೂಡಾಚಾರ ನೀನು ಈ ರೀತಿ ಬಿಕ್ಷುಕನ ವೇಷದಲ್ಲಿ ಬಂದರೆ ತಿಳಿಯಲ್ಲವೇ ನಮಗೆ ಅಂದೊಡನೆ ರಾಜಾ ನಾನು ಯಾವ ಗೂಡಾಚಾರನು ಅಲ್ಲ ನಿಮ್ಮ ದೇಶಕ್ಕೆ ಸೇರಿದ ಈ ಹಳ್ಳಿಯವನು. ನಿಮ್ಮಬಗ್ಗೆ, ಬಡವರ ಬಗ್ಗೆ ನಿಮಗಿರುವ ಕರುಣೆಯ ಬಗ್ಗೆ ಕೇಳಿದ್ದೆ. ಕುತೂಹಲದಿಂದ ನೋಡಬಯಸಿದೆ ಮತ್ತೇನಿಲ್ಲ ಎಂದ. ರಾಜನಿಗೆ ಆಶ್ಚರ್ಯ. ನಮ್ಮ ರಾಜ್ಯದಲ್ಲಿ ಭಿಕ್ಷುಕ ಹೇಗೆ ಸಾಧ್ಯ ಎಂದ. ದಯವಿಟ್ಟು ನನ್ನ ಮಾತನ್ನ ಕೇಳುವುದಾದರೆ ಹೀಗೆಮಾಡಿ ಎಂದು ಹತ್ತಿರಹೋಗಿ ಕಿವಿಯಲ್ಲಿ ಒಂದು ವಿಷಯ ತಿಳಿಸಿದ. ಅದಕ್ಕೆ ಸಮ್ಮತಿಸಿದ ರಾಜ ಯಾರಿಗೂ ತಿಳಿಯದಂತೆ ಅವನೂ ಒಬ್ಬ ಭಿಕ್ಷುಕನ ವೇಷದಲ್ಲಿ ಕುದುರೆ ಏರಿ ಹೊರಗೆ ಕಾಯುತ್ತಿದ್ದ ಆ ಭಿಕ್ಷುಕನ ಜೊತೆಯಲ್ಲಿ ರಾತ್ರಿ ಇಡೀ ಸಂಚಾರಿ ಮಾಡಿದ. ಆಗ ರಾಜನಿಗೆ ಅರಿವಾಗಿದ್ದು ಅನೇಕರು ಮನೆಮಠವಿಲ್ಲದೆ ಸರಿಯಾಗಿ ಊಟತಿಂಡಿಗಳಿಲ್ಲದೆ ದೇವಸ್ಥಾನ ಮುರುಕುಮಂಟಪಗಳಲ್ಲಿ ವಾಸಮಾಡುತ್ತಿದ್ದಾರೆಂದು. ಮಾರನೇ ದಿನವೇ ಈ ಬಿಕ್ಷುಕನನ್ನ ಕರೆದು ಎಲ್ಲಾ ಭಿಕ್ಷುಕರಿಗೂ ವಸತಿ ಊಟ ವ್ಯವಸ್ಥೆ ಮಾಡಿಕೊಟ್ಟು ಅದರ ಉಸ್ತುವಾರಿ ನೋಡಿಕೊಳ್ಳಲು ತಿಳಿಸಿದ. ಅಂದಿನಿಂದ ಅವನು ಬಯಸಿದಂತೆ ನಿಜಕ್ಕೂ ರಾಮ ರಾಜ್ಯ ವಾಯ್ತು.