ಪ್ರೀತಿಯ ಪಾಶ
ಪ್ರೀತಿಯ ಪಾಶ
ಒಬ್ಬ ಬಹಳ ಇಷ್ಟಪಟ್ಟು ಒಂದು ಬೆಕ್ಕು ಸಾಕಿದ್ದ. ಇವನು ಮನೆಗೆ ಬಂದ ತಕ್ಷಣ ಇವನ ಕಾಲು ನೆಕ್ಕಿ ತೊಡೆ ಏರಿಕೂತು ಬಿಡುತ್ತಿತ್ತು. ಅದು ಆವನಿಗೂ ಮೊದಮೊದಲು ಇಷ್ಟ ಆಗುತ್ತಿತ್ತಾದರೂ ಬರಬರುತ್ತಾ ಅದೊಂದು ರೀತಿ ತೊಂದರೆಯೇ ಆಯ್ತು. ಒಂದುದಿನ ಹೇಗಾದರೂ ಮಾಡಿ ಇದರಿಂದ ಮುಕ್ತಿ ಪಡೆಯಬೇಕೆಂದು ಒಂದು ಬುಟ್ಟಿಯಲ್ಲಿ ಹಾಕಿಕೊಂಡು ಹೋಗಿ ಪಕ್ಕದ ಹಳ್ಳಿಯಲ್ಲಿ ಬಿಟ್ಟುಬಂದ. ಮನೆಗೆ ಬಂದು ನೋಡಿದರೆ ಆಶ್ಚರ್ಯ ಇವನಿಗೆ ಮೊದಲೇ ಮನೆಬಾಗಿಲ ಬಳಿ ನಿಂತಿದೆ . ಇದನ್ನ ಅವನ ಸ್ನೇಹಿತನಿಗೆ ಹೇಳಿದ್ದಕ್ಕೆ ಅವನಿಂದ ಒಂದು ಉಪಾಯ ದೊರೆಯಿತು. ಅದೇನಪ್ಪ ಅಂದರೆ ಊರ ಪಕ್ಕದಲ್ಲಿರುವ ಕೆರೆಯ ಹಿಂದೆ ಬುಟ್ಟಿಯ ಸಮೇತ ಇಟ್ಟು ಬಂದುಬಿಡು ನೀರೆಂದರೆ ಅದಕ್ಕೆ ಭಯ ಬರೋದಿಲ್ಲ ಅಂತ. ಮಾರನೇ ದಿನ ಒಂದು ಹರಿಗೋಲಿನಲ್ಲಿ ಕೆರೆದಾಟಿ ಬುಟ್ಟಿಯನ್ನ ಅಲ್ಲಿಯೇ ಇಟ್ಟು ಬರುವಾಗ ಹರಿಗೋಲು ನಡೆಸುವವನು ಹೊರಟು ಹೋಗಿದ್ದ ಕಾರಣ ಪಕ್ಕದ ರಸ್ತೆಯಲ್ಲಿ ನಡೆದೇ ಬಂದ. ಅಲ್ಲಿ ಬುಟ್ಟಿಯನ್ನ ಕಂಡವರು ಯಾರೋ ಅದರಲ್ಲಿ ಏನಿರಬಹುದೆಂದು ಕುತೂಹಲಕ್ಕೆ ತೆಗೆದಾಗ ಬೆಕ್ಕು ಹಾರಿ ಬಂದು ಬಿಟ್ಟಿದೆ . ದೂರದಲ್ಲಿ ಇವನು ಹೋಗುತ್ತಿರುವುದನ್ನು ನೋಡಿ ಹಿಂದೆಯೇ ಅವನನ್ನ ಹಿಂಬಾಲಿಸಿ ಬಂದುಬಿಟ್ಟಿತು. ಮತ್ತೆ ಇವನ ಸ್ನೇಹಿತನ ಬಳಿ ಹೋಗಿ ನೀನು ಹೇಳಿದ ಉಪಾಯವೂ ನಡೆಯಲಿಲ್ಲ . ಏನುಮಾಡಲಿ ಎಂದಾಗ ಕೊನೇ ಉಪಾಯ ಒಂದಿದೆ ಇದು ಖಂಡಿತ ವರ್ಕೌಟ್ ಆಗತ್ತೆ ಅಂತ ಬೆಕ್ಕಿಗೆ ಕೇಳಿಸದ ಹಾಗೆ ಅವನ ಕಿವಿಯಲ್ಲಿ ಹೇಳಿದ.
ಮಾರನೇ ದಿನ ಬೆಕ್ಕಿನ ಕಣ್ಣಿಗೆ ಕಪ್ಪುಬಟ್ಟೆ ಕಟ್ಟಿ ಒಂದು ಬ್ಯಾಗ್ ನಲ್ಲಿ ಹಾಕಿಕೊಂಡು ಹೋರಟ . ಮೊದಲು ಒಂದು ಬಸ್ಸಿನಲ್ಲಿ ಹೋಗಿ ಅಲ್ಲಿಂದ ಒಂದು ಆಟೋದಲ್ಲಿ ಸ್ವಲ್ಪ ದೂರ ಹೋಗಿ ಕಾಡು ತಲುಪಿದ ನಡೆದೇ ಕಾಡಿನಮಧ್ಯೆ ಬಂದ . ಬೆಕ್ಕಿಗೆ ಒಂದು ಬಾಟಲ್ ಹಾಲು ತಂದಿದ್ದ ಕುಡಿಸಿ ತಾನೂ ತಿಂಡಿ ತಿಂದ . ಆಗಲೂ ಪಾಪ ಬೆಕ್ಕು ಇವನ ತೊಡೆ ಮೇಲೆ ಕೂತು ಮಿಯಾವ್ ಮಿಯಾವ್ ಅಂತಾನೆ ಇತ್ತು. ಅದರ ಮುಖ ಒಮ್ಮೆ ನೋಡಿದ ಏಕೋ ಕಾಡಿನಲ್ಲಿ ಬಿಟ್ಟು ಬರಲು ಮನಸ್ಸು ಒಪ್ಪಲಿಲ್ಲ. ಆದರ ಮುಖವನ್ನು ಇವನ ಮುಖದ ಹತ್ತಿರ ಇಟ್ಟುಕೊಂಡು ಗಳಗಳ ಅಂತ ಕಣ್ಣೀರು ಸುರಿಸಿ ಅತ್ತುಬಿಟ್ಟ. ಸಂಜೆ ಆಗ್ತಾ ಇತ್ತು ಕಾಡು ಬೇರೆ . ಭಯವಾಗಿ ಬೆಕ್ಕಿನ ಜೊತೆ ಅಲ್ಲಿಂದ ಹೊರಟ. ಹೇಗೋ ಮುಖ್ಯ ರಸ್ತೆ ತಲುಪಿದ ಅಲ್ಲಿ ಯಾವುದಾದರೂ ವಾಹನ ಸಿಗಬಹುದೇನೋ ಅಂತ ಕಾದ .ಪಕ್ಕದಲ್ಲಿದ್ದ ಪುಟ್ಟ ಅಂಗಡಿಯಲ್ಲಿ ಒಂದು ಪಾಕೆಟ್ ಬಿಸ್ಕೆಟ್ ತೊಗೊಂಡು
ಬ್ಯಾಗ್ನಿಂದ ತನ್ನ ಪ್ರೀತಿಯ ಬೆಕ್ಕನ್ನ ಕೆಳಗೆ ಬಿಟ್ಟು ಅಂಗಡಿಯವನಿಗೆ ಕಾಸುಕೊಡಲು ಆ ಕಡೆ ತಿರುಗಿದ. ಆ ಗೂಡಂಗಡಿ ಕೆಳಗೆ ಕತ್ತಲಲ್ಲಿ ಮಲಗಿದ್ದ ಬೀದಿನಾಯಿಯೊಂದು ತಕ್ಷಣ ಬೆಕ್ಕನ್ನ ಕಚ್ಚಿಕೊಂಡು ಓಡಿ ಹೋಯ್ತು . ಇವನು ಅಲ್ಲೇ ಕುಸಿದ. ಬಿಚ್ಚದ ಬಿಸ್ಕೆಟ್ ಪೊಟ್ಟಣ ಕೈಯ್ಯಲ್ಲಿ ಹಾಗೇ ಇತ್ತು. ವಿಧಿ ಹೀಗೆ ಆಟ ಆಡಿತ್ತು.