ಪಕ್ಷಿ ಕಲಿಸಿದ ಪಾಠ
ಪಕ್ಷಿ ಕಲಿಸಿದ ಪಾಠ


ಒಬ್ಬ ರಾಜ. ಅವನು ಪಕ್ಷಿ ಪ್ರಿಯ. ಅರಮನೆಯ ಮೇಲಿಂದ ಪಕ್ಷಿಗಳ ವೀಕ್ಷಣೆ ಅವನ ಒಂದು ಹವ್ಯಾಸ. ಒಂದು ದಿನ ಒಬ್ಬ ಹಳ್ಳಿಯವನು ರಾಜನಿಗೆ ಎರಡು ಗಿಡುಗಗಳನ್ನು ತಂದುಕೊಟ್ಟ. ರಾಜ ಮಂತ್ರಿಗೆ ಹೇಳಿದ ಈ ಗಿಡಗುಗಳನ್ನು ಚೆನ್ನಾಗಿ ನೋಡಿಕೋ ನಾನು ಒಂದು ತಿಂಗಳಾದ ಮೇಲೆ ಬಂದು ನೋಡುತ್ತೇನೆ. ಮಂತ್ರಿ ಹಾಗೇ ಮಾಡಿದ. ಆದರೆ ಒಂದು ವಾರದಲ್ಲೇ ಮಂತ್ರಿ ರಾಜನಿಗೆ ಹೇಳಿದ, ಸ್ವಾಮಿ ಆ ಪಕ್ಷಿಗಳಲ್ಲಿ ಒಂದು ಮಾತ್ರ ಆಕಾಶದಲ್ಲಿ ಚೆನ್ನಾಗಿ ಹಾರುತ್ತೆ ಮತ್ತೊಂದು ಏನು ಮಾಡಿದರೂ ಮರದ ಕೊಂಬೆಯಿಂದ ಮೇಲೆ ಹಾರುವುದಿಲ್ಲ. ಬಹಳ ಪ್ರಯತ್ನ ಮಾಡಿದೆ ಎಂದ. ರಾಜ ಅನೇಕ ಪಕ್ಷಿತಜ್ಞರನ್ನ ಕರೆಸಿ ಪ್ರಯತ್ನ ಮಾಡಿದರೂ ಅದು ಮಾತ್ರ ಅಲ್ಲೇ ಬಂದು ಕುಳಿತು ಬಿಡುತ್ತಿತ್ತು. ರಾಜನಿಗೆ ಇದು ಒಂದು ಸವಾಲಾಗಿ ಪರಿಣಮಿಸಿತು. ಈ ವಿಷಯ ತಿಳಿದ ಒಬ್ಬ ಹಳ್ಳಿಯವನು ಮಂತ್ರಿ ಮತ್ತು ರಾಜನ ಅಪ್ಪಣೆ ಪಡೆದು ಪಕ್ಷಿಯ ಬಳಿ ಬಂದ. ಚಪ್ಪಾಳೆ ಹೊಡೆದ. ಸ್ವಲ್ಪ ಮೇಲಕ್ಕೆ ಹೋಗಿ ಅಲ್ಲೇ ಬಂದು ಕುಳಿತದ್ದು ಕಂಡು ಒಂದು ಕೊಡಲಿಯನ್ನ ತಂದು ಮರ ಹತ್ತಿ ಅದು ಕುಳಿತುಕೊಳ್ಳುತ್ತಿದ್ದ ಕೊಂಬೆಯನ್ನ ಕತ್ತರಿಸಿಬಿಟ್ಟ. ಮೇಲೆ ಹಾರಿದ ಗಿಡುಗ ಕೆಳಗೆ ಬಂದರೂ ಅದು ಯಾವಾಗಲೂ ಕುಳಿತುಕೊಳ್ಳುತ್ತಿದ್ದ ಕೊಂಬೆ ಕಾಣದೆ ಮತ್ತೆ ಮೇಲೆ ಹಾರಿತು . ಕುಳಿತುಕೊಳ್ಳಲು ಮತ್ತೆ ಬಂದಾಗಲೂ ಕೊಂಬೆ ಇಲ್ಲದೆ ಮತ್ತೆ ಹಾರಿತು. ಹೀಗೆ ಮೇಲೆ ಮೇಲೆ ಹಾರುತ್ತ ಹೆಚ್ಚು ದೂರ ಹೋಗಿ ಬೇರೆ ಗಿಡುಗಗಳನ್ನ ಸೇರಿಕೊಂಡು ಸಂಜೆ ಮಾತ್ರ ಆ ಮರಳುತ್ತಿತ್ತು. ವಿಷಯ ರಾಜನಿಗೂ ತಿಳಿದು ಅವನನ್ನ ಕರೆಸಿ ಹೊಗಳಿದ. ಕುತೂಹಲಕ್ಕೆ ಇದು ಸಾಧ್ಯವಾಗಿದ್ದಾದರೂ ಹೇಗೆಂದು ಕೇಳಿದಾಗ ಅವನು ಹೇಳಿದ್ದು, ಮಹಾಸ್ವಾಮಿ ಅದಕ್ಕೆ ಹೇಗೋ ಆ ಕೊಂಬೆಯಲ್ಲಿ ಕುಳಿತುಕೊಳ್ಳುವ ಅಭ್ಯಾಸವಾಗಿತ್ತು . ಅದನ್ನ ತಪ್ಪಿಸಲು ನಾನು ಹೀಗೆ ಮಾಡಬೇಕಾಯ್ತು ಅಷ್ಟೆ. ಮನುಷ್ಯರೂ ಹೀಗೇ. ಯಾವುದೋ ಒಂದು ಸ್ಥಳ ಅಥವ ಕೆಲಸವನ್ನ ಇಷ್ಟಪಟ್ಟು ಅದರಿಂದ ದೂರ ಬೇರೆಡೆಗೆ ಹೋಗಬೇಕಾಗಿ ಬಂದರೆ ಬಹಳ ಕಷ್ಟಪಡುತ್ತಾರೆ. ಮನಸ್ಸಿಗೆ ಬಹಳ ಆಘಾತವಾದಂತೆ ತಿಳಿಯುತ್ತಾರೆ. ಆದರೆ ಅನ್ಯಮಾರ್ಗವಿಲ್ಲವೆಂದಾಗ ಒಪ್ಪಿಕೊಳ್ಳುತ್ತಾರೆ ಮತ್ತು ಕ್ರಮೇಣ ಅದಕ್ಕೆ ಹೊಂದಿ ಕೊಳ್ಳುತ್ತಾರೆ ಎಂದ. ಮಕ್ಕಳೇ ನಮ್ಮ ಜೀವನದಲ್ಲೂ ಇದು ಸತ್ಯ ತಾನೇ ?
.