ನನ್ನ ಶಾಲಾದಿನಗಳ ನೆನಪು.ಭಾಗ 2.
ನನ್ನ ಶಾಲಾದಿನಗಳ ನೆನಪು.ಭಾಗ 2.
ನಾನು ಮೊದಲನೇ ಭಾಗದಲ್ಲಿ ಹೇಳಿದಂತೆ ಅತ್ತೆಯ ಮಗ ,ಆತನ ಹೆಸರು ಗುರುಶಾಂತ , ನಾವೆಲ್ಲ ಅವನಿಗೆ ಪುಟ್ಟ ಅಂತ ಹೇಳಿ ಕರೆಯುತ್ತಿದ್ದೆವು. ನಾನೀಗ ಅವನಿಗೆ ಗುರು ಅಂತ ಹೇಳುವೆ.
ಗುರು ಸರಿಯಾದ ಸಮಯಕ್ಕೆ ಶಾಲೆ ತಲುಪಬೇಕು , ಪ್ರಾರ್ಥನೆಗೆ ನಿಲುಕಬೇಕು , ಪ್ರಾರ್ಥನಾ ಸಮಯದಲ್ಲಿ ಪತ್ರಿಕಾ ಸುದ್ದಿಯನ್ನು , ಅಥವಾ ಪಂಚಾಂಗವನ್ನು ಓದಬೇಕು ಎನ್ನುವ ಮನೋಭಾವದವನು . ನಾನು ಹಾಗೆಯೇ ಇದ್ದೆ , ಆದರೆ ನನಗೆ ಬೇಗ ಬೇಗ ನಡೆಯಲು ಆಗುತ್ತಿರಲಿಲ್ಲ. ಸಮೀಪವೂ ಅಲ್ಲ , ಎರಡುವರೆ ಕಿಲೋ ಮೀಟರ್ ನಡೆಯೊದಂದ್ರೆ ನನಗೆ ಕಷ್ಟ ಆಗುತ್ತಿತ್ತು. " ಅವನು ನಡೆಯುತ್ತಿದ್ದ , ನಾನು ಓಡುತ್ತಿದ್ದೆ " ಅವನು ಸ್ಪೀಡಾಗಿ ಹೋಗುವುದನ್ನು ನೋಡಿ ಚಿಕ್ಕಪ್ಪ ಅವನಿಗೆ ಗದರುತ್ತಿದ್ದರು , ಒಮ್ಮೊಮ್ಮೆ ಹೊಡೆಯುತ್ತಿದ್ದರು . ನಿಧಾನವಾಗಿ ಕರೆದುಕೊಂಡು ಹೋಗಲು ಆಗಂಗಿಲ್ಲನು , ಎನ್ ಬೆನ್ನತ್ತಿರತತಿ ನಿಂಗ , ಶ್ರೀದೇವಿನ ಕರ್ಕೊಂಡು ಹೋಗಾಕ ಆಗಲ್ಲನು , ಮೈಯ್ಯಾಗ ಸೊಕ್ಕನು ನಿಂಗ , ಅಂತೆಲ್ಲ ಬೈಯುತ್ತಿದ್ದರು. ಅಷ್ಟೇ ಅಲ್ಲ , ನಂಗೂ ಬೈತಿದ್ರು , ನೀನು ಲ್ವಗು ಲ್ವಗು ಹೋಗಾಕ ರೂಢಿ ಆಗ್ವಾ , ದಿನಾ ದಿನಾ ಅದ ಹಾಡ ಆತು ನಿಂದು , ಮುಂಜಾನೆ ಲ್ವಗು ಏಳು ಸ್ವಲ್ಪ ಅಂತಾ ಬೈತ್ತಿದ್ರು.
ನಾನು ಬೇಗನೇ ಏಳುತ್ತಿದ್ದೆ , ಆದರೆ ಅದೇಕೋ ಗೊತ್ತಿಲ್ಲ , ಪ್ರತಿದಿನವೂ ನನ್ನದು ಓಡುವ ಕೆಲಸವೇ. ಕಚ್ಚಾ ರಸ್ತೆ ಬೇರೆ , ಹೊಲದ ಮದ್ಯದ ಕಾಲುಹಾದಿಯಲ್ಲಿ ಓಡುತ್ತಾ ಸಾಗುವ ನನ್ನ ನಿತ್ಯದ ಕಾಯಕ ಸರಿ ಸುಮಾರು ಆರು ವರ್ಷಗಳ ಕಾಲದವರೆಗೆ ರಜಾದಿನಗಳ ಹೊರತು ಪಡಿಸಿ ನಿತ್ಯ ನಿರಂತರವಾಗಿ ಸಾಗುತ್ತಿತ್ತು. ಮುಂದೆ ಪಿ. ಯು. ಸಿ. ಗೆ ಹೊರಟಾಗಲು ಇದೇ ಹಣೆಬರಹ ಮುಂದುವರೆದಿತ್ತು. ಆದರೂ ನನ್ನ ಬೆಸ್ಟ್ ಫ್ರೆಂಡ್ ಗುರು ನೇ. ಅವತ್ತಿಂದ ಇವತ್ತಿನ ತನಕ ಮೊದಲಿನ ಆತ್ಮೀಯತೆ , ಮೊದಲಿನ ಬಾಂಧವ್ಯ ಈಗಲೂ ಮುಂದುವರೆದಿದೆ.
ಮುಂದೆ ಇಬ್ಬರ ಓದುವ ಆಯ್ಕೆಗಳು ಬೇರೆಯಾದಾಗ , ಪಯಣದ ಹಾದಿಯಲ್ಲಿ ಬದಲಾವಣೆಯಾಯಿತು , ಆದರೆ ನಮ್ಮ ಸ್ನೇಹದಲ್ಲಿ ಅಲ್ಲ. ಆತ ಹುಬ್ಬಳ್ಳಿಗೆ ಓದಿನ ಜೊತೆಗೆ ಪಾರ್ಟ್ ಟೈಮ್ ಕೆಲಸಕ್ಕೆಂದು ಸೇರಿಕೊಂಡ. ಓದುತ್ತ ಜೊತೆಗೆ ಕಾಲೇಜು ಒಂದರಲ್ಲಿ ಕೆಲಸ ಮಾಡುತ್ತಾ ತನ್ನ ಓದಿನ ಖರ್ಚನ್ನು ನಿಭಾಯಿಸಿಕೊಂಡು , ತನ್ನ ಮನೆಯನ್ನು ನಿಭಾಯಿಸುತ್ತ ಒಂದೊಂದೇ ಮೆಟ್ಟಿಲನ್ನು ಏರುವ ಪ್ರಯತ್ನ ಮಾಡಿದ್ದನು. ಓದುವ ಆಸೆಯಂತೂ ಸಿಕ್ಕಾಪಟ್ಟೆ ಇದ್ದಿತು. ಅದರ ಪರಿಣಾಮವಾಗಿ ಇಂದು ಒಂದು ಪೊಲೀಸ್ ಹುದ್ದೆಯನ್ನು ಅಲಂಕರಿಸಿದ್ದಾನೆ. ಲಕ್ಷ್ಮಿ ಎಂಬ ಸುಂದರ ಹುಡುಗಿಯೊಂದಿಗೆ ಮದುವೆ ಆಗಿ ಇವತ್ತು ಒಳ್ಳೆಯ , ಚೆಂದದ ಬದುಕು ಮಾಡುತ್ತಿದ್ದಾನೆ.
ಹೀಗೆ ಓಡುತ್ತಾ , ನಡೆಯುತ್ತ , ಒಮ್ಮೊಮ್ಮೆ ಚಿಕ್ಕಪ್ಪನ ಸೈಕಲ್ ಮೇಲಾಗಲಿ ಹತ್ತಿ ಒಟ್ಟಿನಲ್ಲಿ ಶಾಲೆಗೆ ಹೋಗಿ ಬರುತ್ತಿದ್ದೆ. ಒಮ್ಮೊಮ್ಮೆಯಂತೂ ಚಿಕ್ಕಪ್ಪನ ಟ್ರಾಕ್ಟರ್ ಮೇಲೆ ಶಾಲೆ ಮುಟ್ಟುತ್ತಿದ್ದೆವು. ಒಮ್ಮೊಮ್ಮೆ ಬಾಯಿಂದ ಬಾಯಿಗೆ ಹರಿದು ಬರುವ ಸುಳ್ಳು ಸುದ್ದಿ ಕೇಳಿ ಭಯ ಆಗುತ್ತಿತ್ತು. ಅಂದರೆ ಕಳ್ಳಕಾಕರ ಭಯವಂತೂ ಸಿಕ್ಕಾಪಟ್ಟೆ ಆಗುತ್ತಿತ್ತು. ಹೀಗಾಗಿ ಕಂಪಾಸ್ ಬಾಕ್ಸ್ನಲ್ಲಿ ಇರಬೇಕಾದ ಆ ತ್ರಿಜ್ಯ ರಸ್ತೆಯಲ್ಲಿ ಯಾವಾಗಲೂ ನಮ್ಮ ಕೈಯ್ಯಲ್ಲಿಯೇ ಇರುತ್ತಿತ್ತು. ಯಾವಾಗಲೋ ಕೇಳಿದ ದೆವ್ವದ ಭಯ ಹುಟ್ಟಿಸುವ ಆ ಕೆಟ್ಟ ಕಟ್ಟುಕತೆಗಳು ಸಹ ಎಷ್ಟೋ ಸಲ ನಮ್ಮ ಜೀವ ಹಿಂಡಿದ್ದಂತೂ ಸುಳ್ಳಲ್ಲ.
ಹೀಗೆ ನಡೆಯುತ್ತ ನನ್ನ ಓದನ್ನು ಮುಗಿಸಿದೆ. ಈಗ ನಮ್ಮೂರಿಗೆ ಎರಡು ಮೂರು ಬಸ್ಗಳಿವೆ. ಈಗ ಯಾವ ಚಿಂತೆಯೂ ಇಲ್ಲ. ಎಲ್ಲ ಮಕ್ಕಳೂ ಹೆಚ್ಚು ಕಡಿಮೆ ಸೈಕಲ್ ಸವಾರಿ ಮಾಡುತ್ತವೆ. ಪಾಸ್ ಸೌಲಭ್ಯ ಇರುವುದರಿಂದ ಬಸ್ಸಲ್ಲಿಯೂ ಹೋಗುತ್ತಾರೆ.
ಮತ್ತೊಂದು ನೆನಪಿನ ಬುತ್ತಿಯೊಂದಿಗೆ ಮುಂದಿನ ಭಾಗದಲ್ಲಿ ಬೆಟ್ಟಿ ಆಗುವೆ..
