STORYMIRROR

Shridevi Patil

Children Stories Inspirational Others

4  

Shridevi Patil

Children Stories Inspirational Others

ನನ್ನ ಶಾಲಾ ದಿನಗಳ ನೆನಪು.ಭಾಗ1.

ನನ್ನ ಶಾಲಾ ದಿನಗಳ ನೆನಪು.ಭಾಗ1.

2 mins
261

ನೆನಪುಗಳ ಬುತ್ತಿಯನ್ನು ಬಿಚ್ಚಿದಾಗ ಅದೆಷ್ಟೋ ನೆನಪುಗಳ ಸುರಿಮಳೆ ಆಗುತ್ತದೆ. ಸಿಹಿ ಊಟದ ರುಚಿಯನ್ನು ಕೊಡುವ ಆ ನೆನಪುಗಳನ್ನು ಹಂಚಿಕೊಳ್ಳಲು ತುಂಬಾ ಖುಷಿಯಾಗುತ್ತಿದೆ. ಈಗಿನ ಮಕ್ಕಳು ತಮ್ಮ ಬಾಲ್ಯವನ್ನು ಮೊಬೈಲ್ , ಟಿವಿ , ಲ್ಯಾಪ್ ಟಾಪ್ , ಅಂತಾ ಕಳೆಯುತ್ತಿವೆ. ಜೊತೆಗೆ ಈಗಂತೂ ಎರಡು ವರ್ಷ ಪೂರ್ತಿಯಾಗಿ ಕೊರೊನಾ ಆವರಿಸಿ ಮಕ್ಕಳ ಬಾಲ್ಯದಲ್ಲಿ ಎರಡು ವರ್ಷವನ್ನು ಹಾಳು ಮಾಡಿತೆಂದೇ ಹೇಳಬಹುದು. ಶಾಲಾ ಅವಧಿಯ ಎರಡು ವರ್ಷದ ಸುಂದರ ಅನುಭವಗಳನ್ನು ಸಹ ಹಾಳು ಮಾಡಿತೆಂದು ಹೇಳಬಹುದು.


ನಾವು ಚಿಕ್ಕವರಿದ್ದಾಗಿನ ಆ ಸಮಯವೇ ಚೆಂದ ಅಂತಾ ಹೇಳುವೆ. ಯಾಕೆಂದರೆ ನಮ್ಮದು ಚಿಕ್ಕ ಹಳ್ಳಿ , ಆಗಿನ್ನೂ ಬಸ್ಸಿನ ಸೌಕರ್ಯ ಇರಲಿಲ್ಲ , ಅಂಗಡಿಗಳು ಇರಲಿಲ್ಲ , ಇನ್ನು ಹೆಚ್ಚಾಗಿ ಹೇಳಬೇಕೆಂದರೆ ಸ್ವಲ್ಪೇ ಸ್ವಲ್ಪ ಮನೆಗಳಿದ್ದವು. ಕಿರಿಯ ಪ್ರಾಥಮಿಕ ಶಾಲೆ ಇದ್ದು , ಒಬ್ಬರೇ ಗುರುಗಳು ಇದ್ದರು. ಆ ಗುರುಗಳು ಒಂದು ಕ್ಲಾಸಿನಲ್ಲಿದ್ದರೆ , ಇನ್ನುಳಿದ ಮೂರು ಕ್ಲಾಸ್ಗಳಿಗೆ ಗುರುಗಳಿರುತ್ತಿರಲಿಲ್ಲ . ಆಗ ಮೂರು ಮತ್ತು ನಾಲ್ಕನೇ ತರಗತಿಯ ಮಕ್ಕಳಲ್ಲಿ ತುಸು ಜಾಣರಿದ್ದ ಮಕ್ಕಳಿಬ್ಬರು ಉಳಿದ ಎರಡು ಕ್ಲಾಸ್ಗೆ ಪಾಠ ಹೇಳಿ ಕೊಡುತ್ತಿದ್ದರು. ನಾನು ಸಹ ಆ ಸಮಯದಲ್ಲಿ ಅಂದರೆ ನಾಲ್ಕನೇ ತರಗತಿಯಲ್ಲಿದ್ದಾಗ ಎರಡನೇ ಕ್ಲಾಸ್ಗೆ ಟೀಚರ್ ಆಗಿದ್ದೆ. ಆಗಿನ ಖುಷಿಯೇ ಬೇರೆ ಇರುತ್ತಿತ್ತು. ಎಲ್ಲರೆದುರು ನಾನು ಜಾಣೆ ಎಂದು ಸರ್ ಹೇಳಿದಾಗ ತಲೆಗೆ ಎರಡು ಕೊಂಬು ಬರುವುದು ಮಾತ್ರ ಬಾಕಿ ಇರುತ್ತಿತ್ತು. ಶಾಲೆಯಲ್ಲಿ ಏನೇ ಕಾರ್ಯಕ್ರಮಗಳಾದರೂ ಮುಂದೆ ಇರಬೇಕು ಎನ್ನುತ್ತಿದ್ದ ನನಗೆ ಭಾಷಣ ಮಾಡುವ ಹುಚ್ಚು ಹೆಚ್ಚಿತ್ತು. ನಮಗಿಂತ ದೊಡ್ಡವರಿದ್ದ ಅಣ್ಣಂದಿರಿಬ್ಬರು ಭಾಷಣ ಮಾಡಿದ್ದನ್ನು ಕೇಳಿದ ನಾನು , " ಅಯ್ಯೋ ಈ ಅಣ್ಣಂದಿರು ತುಂಬಾ ಜಾಣರು ಅಂತ ಅನಿಸುತ್ತೆ. ಸ್ವಾತಂತ್ರ್ಯ ದಿನಾಚರಣೆ ಬಗ್ಗೆ ಚೀಟಿ ಇಲ್ಲದೆ , ನೋಡಿಕೊಳ್ಳದೆ ಎಷ್ಟು ಚೆನ್ನಾಗಿ ಹೇಳ್ತಿದ್ದಾರೆ , ಬಾಳ್ ಮಾಡಿ ಇವ್ರು ಸ್ವಾತಂತ್ರ್ಯ ಹೋರಾಟ ಮಾಡುವುದನ್ನು ನೋಡಿರಬೇಕು ಅದಕ್ಕ ಇಷ್ಟು ಚೆಂದಗ , ನೋಡಿಕೊಳ್ಳದಂಗ ಹೇಳಾಕತ್ತಾರ ಅಂತ ಅನ್ಕೊಂತಿದ್ದೆ. ಅವರು ಬಾಯಿಪಾಠ ಮಾಡಿದ್ದಾರೆ ಅನ್ನೋದು ನಂಗೆ ಗೊತ್ತಾಗಿದ್ದು ನಾನು ಭಾಷಣ ಮಾಡಿದ ಮೇಲೆ."


ಹೀಗೆ ನನ್ನ ಪ್ರಾಥಮಿಕ ಶಾಲೆ ಅದೂ ನಾಲ್ಕನೇ ತರಗತಿವರೆಗೆ ಇದ್ದದ್ದು, ಮುಂದಿನ ಐದು, ಆರು , ಏಳನೇ ತರಗತಿಯವರೆಗೆ ಪಕ್ಕದೂರಿಗೆ ಹೋಗಿ ಕಲಿಯಬೇಕಾಗಿತ್ತು . ಬಸ್ಸು ಅಥವಾ ಬೇರೆ ವಾಹನಗಳ ಸೌಕರ್ಯಗಳಿಲ್ಲದ ಕಾರಣ ನಟರಾಜ ಸರ್ವಿಸ್ ಗತಿಯಾಗಿರುತ್ತಿತ್ತು. ಸರಿ ಸುಮಾರು ಎರಡುವರೆ ಕಿಲೋ ಮೀಟರ್ ನಡೆದು ಹೋಗ ಬೇಕಿತ್ತು. ಹೀಗೆ ನಡೆದು ಹೋಗುವ ಹಾದಿಯೂ ಸರಳವಿರಲಿಲ್ಲ. ಹೊಲಗಳ ಮದ್ಯ , ಕಾಲು ದಾರಿಯಲ್ಲಿ ಹೋಗ ಬೇಕಿತ್ತು. ಹಳ್ಳ , ಕೆರೆಗಳು ಇದ್ದವು ಒಮ್ಮೊಮ್ಮೆ ಭಯ ಆಗುತ್ತಿತ್ತು. ಆದರೂ ಒಂತರಾ ಖುಷಿ ಇರುತ್ತಿತ್ತು. ನಮ್ಮ ಮನೆಯಲ್ಲಿ ನನ್ನ ಸೋದರತ್ತೆಯ ಮಗ ಶಾಲೆ ಕಲಿಯಲೆಂದು ಇದ್ದನು . ನನಗಿಂತ ವಯಸ್ಸಲ್ಲಿ ಒಂದು ವರ್ಷ , ಎರಡು ತಿಂಗಳು ದೊಡ್ಡವನು. ಆದರೂ ನಾನು ಅವನು ಒಂದೇ ಕ್ಲಾಸ್. ನನ್ನ ಚಿಕ್ಕಪ್ಪ ಇಬ್ಬರು ಕೂಡಿ ಹೋಗಿ ಬರುತ್ತಾರೆಂದು ನನ್ನನ್ನು ಐದೇ ವರ್ಷಕ್ಕೆ ಶಾಲೆಗೆ ಸೇರಿಸಿದ್ದರಂತೆ. ಹಳ್ಳಿಯಲ್ವಾ ,ಮುಂದಾಲೋಚನೆ ಮಾಡಿ , ಜೊತೆಯಾಗಿ ಹೋಗಿ ಬರುತ್ತಾರೆಂದು ಒಂದೇ ಸಲ ಇಬ್ಬರದೂ ಹೆಸರು ಹಚ್ಚಿದ್ದರಂತೆ. ಇಬ್ಬರು ಸರಿ ಸುಮಾರು ಹದಿಮೂರು ವರ್ಷಗಳ ಕಾಲ ಜೊತೆಯಾಗಿ ವಿದ್ಯಾಭ್ಯಾಸ ಮಾಡಿದ್ದೇವೆ. ಒಮ್ಮೆಯೂ ಜಗಳ ಮಾಡಿಲ್ಲ. ಇಬ್ಬರು ಒಳ್ಳೆಯ ಸ್ನೇಹಿತರು. ಈಗಲೂ ಸಹ ಒಳ್ಳೆಯ ಸ್ನೇಹಿತರಂತೆ ಇದ್ದೇವೆ.


ನಾನು ಅತ್ತೆಯ ಮಗನ ಜೊತೆ ಶಾಲೆಗೆ ಹೇಗೆ ಹೋಗಿ ಬರುತ್ತಿದ್ದೆ ಎಂಬುದನ್ನು ಮುಂದಿನ ಭಾಗದಲ್ಲಿ ನೋಡೋಣ.


Rate this content
Log in