ಮನಸ್ಸಿನ ಖಾಯಿಲೆಗೆ ಮದ್ದುಂಟೆ? ೨
ಮನಸ್ಸಿನ ಖಾಯಿಲೆಗೆ ಮದ್ದುಂಟೆ? ೨
ಆ ಅಜ್ಜಯ್ಯನ ಪ್ರೀತಿಯ ಮೊಮ್ಮಗಳು ಈಗ ಆಸ್ಪತ್ರೆಯ ವಿಶೇಷ ಅತಿಥಿಯಾಗಿ ಹೋಗಿದ್ದಳು. ವೈದ್ಯರ ಚಿಕಿತ್ಸೆ ಆಕೆಗೆ ಯಾವುದೇ ಧನಾತ್ಮಕ ಪರಿಣಾಮ ಬೀರಲೇ ಇಲ್ಲ. ಕಾರಣ ಆಕೆಗೆ ಆಗಿರುವ ಕಾಯಿಲೆಯೇ ಅಂತಹದ್ದು. ದೇಹದ ಮೇಲಾಗಿರುವ ಗಾಯ ಅಥವಾ ಕಾಯಿಲೆಗೆ ಮದ್ದು ಉಂಟು. ಆದರೆ ಈ ಮನಸ್ಸಿನ ಕಾಯಿಲೆಗೆ ಎಂತಹದೇ ಔಷಧಿ ಕೊಟ್ಟರೂ, ಎಷ್ಟು ದುಬಾರಿಯ ಮದ್ದು ನೀಡಿದರೂ ಸರಿ, ಅದು ಕಾಯಿಲೆಯನ್ನು ಮಾತ್ರ ಸರಿಪಡಿಸುವುದಿಲ್ಲ. ಆ ಮೊಮ್ಮಗಳು ಸಹ, ಯಾವಾಗಲೂ ಮಂಕಾಗಿಯೇ ಇರುತ್ತಿದ್ದಳು. ತನ್ನನ್ನು ತಾನೇ ಬೈಯ್ದುಕೊಳ್ಳುತ್ತಿದ್ದಳು. ತನ್ನ ಮಗುವನ್ನು ಎತ್ತದೇ, ಮುದ್ದಾಡದೇ, ತನ್ನದೇ ಆದಂತಹ ಚಿಂತಾಲೋಕದಲ್ಲಿ ಮಗ್ನಳಾಗಿ ಹುಚ್ಚಿಯಂತಾಗಿ ಬಿಟ್ಟಿದ್ದಳು.
ತಿಂಗಳುಗಳು ಉರುಳಿದವು, ಮಗು ಬೆಳೆಯತೊಡಗಿತ್ತು. ಕಂದನಿಗೆ ಹಾಲು ಕುಡಿಸದೆ ಇದ್ದಿದ್ದರಿಂದ ಎದೆಹಾಲು ಕೂಡ ಇಂಗಿ ಹೋಗಿತ್ತು. ಪಾಪ ಆ ಕೂಸು ಹೊರಗಿನ ಹಾಲು ಅಂದರೆ ಪೌಡರ್ ಹಾಲಿಗೆ ಜೊತೆಗೆ ಆಕಳು ಹಾಲಿಗೆ ಹೊಂದಿಕೊಂಡಿಬಿಟ್ಟಿತ್ತು. ಹೀಗೆಯೇ ದಿನಕಳೆಯುತ್ತ ಅರುತಿಂಗಳು ಮುಗಿದವು. ಅಸ್ಪತ್ರೆಯವರು ಸಹ ಚಿಕಿತ್ಸೆ ಕೊಟ್ಟು ಕೊಟ್ಟು ಸುಸ್ತಾದರೊ ಏನೋ ಗೊತ್ತಿಲ್ಲ. ಒಂದು ತಿಂಗಳಾಗುವಷ್ಟು ಔಷಧಿ ಮಾತ್ರೆಗಳನ್ನು ಕೊಟ್ಟು ಡಿಸ್ಚಾರ್ಜ್ ಮಾಡಿಸಿಕೊಂಡು ಮನೆಗೆ ಕರೆದುಕೊಂಡು ಹೋಗಲು ಹೇಳಿದರು. ಪಾಪ ಅವರು ತಾನೇ ಏನು ಮಾಡಿಯಾರು?
ಎಷ್ಟು ಅಂತ ನೋಡ್ತಾರೆ. ಚಿಕಿತ್ಸೆಗೆ ಸ್ವಲ್ಪವಾದರೂ ಸ್ಪಂದಿಸಿದರೆ ವೈದ್ಯರಿಗೂ ಮುಂದಿನ ಹಂತದ ಚಿಕಿತ್ಸೆ ನೀಡಲು ಹುರುಪಿನಿಂದ ಮುಂದಾಗುತ್ತಾರೆ.ಆದರೆ ಇಲ್ಲಿ ಹಾಗಾಗಲೇ ಇಲ್ಲವಲ್ಲ. ಜೊತೆಗೆ ಮನೆಯವರು ಸಹ ಅಷ್ಟೊಂದು ತಿಂಗಳು ಕೆಲಸ ಕಾರ್ಯ ಮರೆತು ಆಸ್ಪತ್ರೆಯಲ್ಲಿ ಇದ್ದಿದ್ದೇ ಹೆಚ್ಚು. ವೈದ್ಯರು ಹೇಳಿದ್ದನ್ನು ಕೇಳಿ ಡಿಸ್ಚಾರ್ಜ್ ಮಾಡಿಸಿಕೊಂಡು ಮನೆಗೆ ಬಂದರು.
ಮನೆಗೆ ಬಂದ ನಂತರ ತಾಯಿ ಮನೆಯಲ್ಲೇ ಉಳಿದಳು. ಯಾವುದರ ಪರಿವೆಯೇ ಇಲ್ಲದ ಆಕೆ ಎತ್ತೋ ನೋಡುತ್ತಾ, ಏನೇನೋ ಮಾತಾಡುತ್ತಾ ಬಂದವರಿಗೆ ಹೋದವರಿಗೆ ಬೈಯ್ಯುತ್ತ ಇರುತ್ತಿದ್ದಳು. ಆಕೆಯ ತಾಯಿಗೂ ಆರೈಕೆ ಮಾಡಿ ಮಾಡಿ ಸಾಕಾಗಿ ಹೋಗಿತ್ತು. (ಯಾರೇ ಆದರೂ ಕೂಡ, ಒಂದು ಹಂತದವರೆಗೆ ಎಲ್ಲವನ್ನು ಸಹಿಸಿಕೊಂಡು ಮಾಡುತ್ತಾರೆ.ಆದರೆ ಮಿತಿ ಮೀರಿದರೆ ತಾಯಿಯಾದರೂ ಸರಿ, ಮಗಳಾದರೂ ಸರಿ ಅಲ್ಲಿಗೆ ಪ್ರೀತಿ ಕಮ್ಮಿಯಾಗುತ್ತ ಬರುತ್ತದೆ.)
ಇಲ್ಲಿಯೂ ಸಹ ಆ ಮೊಮ್ಮಗಳ ತಾಯಿಗೂ ಬೇಸರವಾಗಿ ಹೋಗಿತ್ತು. ಆದರೂ ಮಗಳೆಂಬ ಮಮಕಾರ ಇದ್ದಿದ್ದರಿಂದ ಹೇಗೋ ಮಾಡುತ್ತಿದ್ದಳು. ಅದರೆ ಸ್ವಲ್ಪ ದಿನಗಳ ನಂತರ ಆ ಮೊಮ್ಮಗಳ ವರ್ತನೆಯಲ್ಲಿ ಬದಲಾವಣೆ ಕಂಡಿತು. ಆಕೆ ಮಾತಾಡುತ್ತಾ ಮಾತಾಡುತ್ತಾ ಆ ಉಳಿದ ಇಬ್ಬರು ಸೊಸೆಯರ ಹೆಸರನ್ನು ಹೇಳುತ್ತ ಬೈಯ್ಯಲು ಶುರು ಮಾಡಿದಳು. ಅವರಿಬ್ಬರಿಗೆ ಮಾತ್ರ ಬೈಯುತ್ತಿದ್ದಳು. ನಾನು ಸರಿ ಇಲ್ಲವಾ ಎಂದು ಮತ್ತೆ ಮತ್ತೆ ಕೇಳುತ್ತಿದ್ದಳು. ಈ ವರ್ತನೆ ಆಕೆಯನ್ನು ಇನ್ನಷ್ಟು ಆರೋಗ್ಯ ಹದಗೆಡುವಂತೆ ಮಾಡಿತು. ದಿನದಿಂದ ದಿನಕ್ಕೆ ಆಕೆಯ ಆ ಹುಚ್ಚು ಅತಿರೇಕಕ್ಕೆ ಏರಿತು. ಔಷಧೀಯ ಪರಿಣಾಮ ಮಾತ್ರ ಶೂನ್ಯವೇ ಆಗಿತ್ತು. ಆಕೆ ಒಮ್ಮೊಮ್ಮೆ ರಾತ್ರಿ ನಿದ್ದೆಗಣ್ಣಲ್ಲಿ ಎದ್ದು ಓಡಾಡಲು ಶುರುಮಾಡಿದ್ದಳು. ಒಮ್ಮೊಮ್ಮೆ ಚಾಕು ತೆಗೆದುಕೊಂಡು ನಿನ್ನ ಸಾಯಿಸಿಬಿಡ್ತೀನಿ ಎಂದು ಹೇಳುತ್ತಾ ಓಡುತ್ತಿದ್ದಳು. ಹೀಗೆ ಮಾಡುತ್ತ ಮಾಡುತ್ತಾ ಒಂದು ದಿನ ರಾತ್ರಿ ಹೊತ್ತು ತನಗೆ ತಾನೇ ಚಾಕುವಿನಿಂದ ಚುಚ್ಚಿಕೊಂಡು ಪ್ರಾಣ ಬಿಟ್ಟಳು. ಆಕೆಯ ತಲೆಯಲ್ಲಿ ತಾನು ಸರಿಯಿಲ್ಲ,ತನ್ನಿಂದ ಯಾರಿಗೂ ಒಳ್ಳೆಯದಾಗುವುದಿಲ್ಲ ಎನ್ನುವುದು ಬೇರೂರಿ ಬಿಟ್ಟಿತ್ತು. ಇದ್ದರೂ ಏನು ಪ್ರಯೋಜನ ಇಲ್ಲವೆಂದು ತಿಳಿದು ತನ್ನ ಸಾವನ್ನು ತಾನೇ ತಂದುಕೊಂಡು ತನ್ನ ಮಗುವನ್ನು ಅನಾಥನನ್ನಾಗಿ ಮಾಡಿ ತನ್ನ ಈ ಲೋಕದ ಯಾತ್ರೆ ಮುಗಿಸಿದ್ದಳು..
