ಕೃಷ್ಣ ಮತ್ತು ಕುಂಬಾರ
ಕೃಷ್ಣ ಮತ್ತು ಕುಂಬಾರ
ದ್ವಾರಕ ನಗರದಲ್ಲಿ ಒಬ್ಬ ಕುಂಬಾರನಿದ್ದ. ಕುಂಬಾರನು ತುಂಬಾ ಶ್ರಮಜೀವಿ, ಹಾಗೂ ಸುಖೀ ಪರಿವಾರ ಹೊಂದಿದ್ದ. ಎಲ್ಲರ ಜೊತೆಗೆ ಪ್ರೀತಿ ಮತ್ತು ವಿಶ್ವಾಸದಿಂದ ಇರುತ್ತಿದ್ದ ಮತ್ತು ತನ್ನ ಕಾಯಕವನ್ನೇ ದೇವರು ಎಂದು ನಂಬಿದ್ದ. ಕುಂಬಾರನು ತುಂಬಾ ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದ ಹಾಗೂ ಎಲ್ಲರೊಟ್ಟಿಗೂ ವಿಶ್ವಾಸದಿಂದ ವ್ಯಾಪಾರ ಮಾಡುತ್ತಿದ್ದ. ಮಡಿಕೆ, ಕುಡಿಕೆ, ಒಲೆ ಮತ್ತು ನಾನಾ ತರಹದ ಅತ್ಯುತ್ತಮ ಸಾಮಗ್ರಿಗಳನ್ನು ಮಾಡುತ್ತಿದ್ದ. ದ್ವಾರಕೆಯಲ್ಲಿ ಪ್ರಸಿದ್ಧಿಯಾಗಿದ್ದ. ಕೃಷ್ಣ ಮತ್ತು ಬಲರಾಮರು ಸಮಯ ಸಿಕ್ಕಾಗಲೆಲ್ಲ ತಮ್ಮ ನಗರ ಸಂಚಾರ ಮಾಡಿ ಪ್ರಜೆಗಳ ಕಷ್ಟ ಸುಖ ಆಲಿಸುತ್ತಿದ್ದರು. ಮತ್ತು ತಮ್ಮ ರಾಜ್ಯದ ಜನರು ನೆಮ್ಮದಿಯಿಂದ ಇರುವಂತೆ, ಯಾವುದೇ ನಷ್ಟ, ಹಾನಿ ಆಗದಂತೆ ನೋಡಿಕೊಳ್ಳುತ್ತಿದ್ದರು. ಹೀಗಿರುವಾಗ ಒಂದು ಊರಿನಲ್ಲಿ ಒಬ್ಬ ಧನಿಕನ ಮನೆಯ ಸಮಾರಂಭಕ್ಕೆ ಅಧಿಕವಾಗಿ ಹಣತೆ ಮಡಿಕೆ-ಕುಡಿಕೆ ಬೇಕಾಗಿತ್ತು. ಇದನ್ನು ತಯಾರಿಸಿ ಕೊಡುವ ಕುಂಬಾರರಿಗೆ ಬೇಡಿದಷ್ಟು ಬೆಲೆ ಕೊಟ್ಟು ಕೊಳ್ಳೂವುದಾಗಿ ಡಂಗೂರ ಸಾರಿದರು. ಇದನ್ನು ಕೇಳಿದ ಕುಂಬಾರ ತಾನು ಜಾಸ್ತಿ ಚಿನ್ನದ ನಾಣ್ಯಗಳನ್ನು ಪಡೆಯಬೇಕು ಎಂಬ ಉದ್ದೇಶದಿಂದ ಎಲ್ಲ ಸಾಮಗ್ರಿಗಳ ಬೆಲೆಯನ್ನು ದ್ವಿಗುಣವಾಗಿ ಹೇಳಿ ಜಾಸ್ತಿ ಬೆಲೆಗೆ ಮಾರಾಟ ಮಾಡಬೇಕು ಅನ್ನೋ ಆಸೆಯಿಂದ ಕುಂಬಾರ ಬೆಳ್ಳಿಗ್ಗೆ ಎದ್ದು ಮಡಿಕೆ ಮಾಡೋಕೆ ಶುರು ಮಾಡಿದ. ಸಂಜೆಯಾದರೂ ಒಂದು ಮಡಿಕೆ ಸಹ ಸರಿಯಾಗಿ ಬರಲಿಲ್ಲ. ಆತನು ಮಾಡುತ್ತಿದ್ದ ಮಡಿಕೆ ವಕ್ರವಾಗಿ ಆಗುವುದು, ಸೀಳುವುದು, ಕಳಚಿ ಬೀಳುವುದು ಆಗುತ್ತಿದ್ದವು. ಆಗ ಶ್ರೀಕೃಷ್ಣ ನಗರ ಸಂಚಾರಕ್ಕೆ ಬಂದಾಗ ದೂರದಿಂದ ಕುಂಬಾರನ ಸ್ಥಿತಿ ನೋಡಿದ ಕೃಷ್ಣನಿಗೆ ನಗು ಬರುವುದರ ಜತೆಗೆ ಸ್ವಲ್ಪ ಮರುಕವೂ ಆಯಿತು. ಕೃಷ್ಣ ಕುಂಬಾರನ ಬಳಿ ಹೋಗಿ "ಯಾಕೆ ನೀನು ಏನು ತೊಂದರೆ ಪಡುತ್ತಿರುವೆ..?" ಎಂದು ಕೇಳಿದ. ಅದಕ್ಕೆ ಕುಂಬಾರ ನಡೆದ ಸಂಗತಿ ಬಗ್ಗೆ ವಿವರಿಸಿದ. ಅದನ್ನು ಕೇಳಿದ ಕೃಷ್ಣ "ನಾನೂ ಒಂದು ಮಡಿಕೆಯನ್ನು ಮಾಡಿ ನೋಡುವೆ" ಎಂದ. ಅದಕ್ಕೆ ಕುಂಬಾರ "ಪ್ರಭು ಬೇಡ ನೀವು ಮಡಿಕೆ ಮಾಡುವುದಾ? ಬೇಡವೇ ಬೇಡ" ಎಂದನು. ಅದಕ್ಕೆ ಕೃಷ್ಣ "ಯಾಕೆ..? ನಾನೇಕೆ ಮಾಡಬಾರದು ಒಂದು ಸಾರಿ ಪ್ರಯತ್ನಿಸಿ ನೋಡುವೆ" ಎಂದು ಹೇಳುತ್ತಾ ಕೃಷ್ಣನು ಚಕ್ರಕ್ಕೆ ಮಣ್ಣು ಹಾಕಿ ತಿರುಗಿಸಿದ. ಆಗ ಆಶ್ಚರ್ಯಕರ ರೀತಿಯಲ್ಲಿ ಕ್ಷಣಮಾತ್ರದಲ್ಲೇ ಸುಂದರವಾದ ಮಡಿಕೆಯೊಂದು ಮೂಡಿ ಬಂದಿತು. ಈ ವಿಸ್ಮಯಕಾರಿ ಘಟನೆಯಿಂದ ಕುಂಬಾರನು ಅಚ್ಚರಿಯಾದನು. ಅದಕ್ಕೆ ಕುಂಬಾರನು ಕೃಷ್ಣನನ್ನು ಕುರಿತು "ಪ್ರಭುವೇ ನಾನು ಇಪ್ಪತ್ತು ವರ್ಷದಿಂದ ಇದೇ ಕೆಲಸವನ್ನು ಮಾಡಿಕೊಂಡು ಬರುತ್ತಿರುವೆ, ಮತ್ತು ಸುತ್ತಮುತ್ತಲಿನ ನಗರದಲ್ಲಿ ಈ ಕೆಲಸಕ್ಕಾಗಿ ನಾನೇ ಪ್ರಸಿದ್ಧಿಯಾಗಿರುವೆ. ಆದರೂ ಅದೇಕೋ ನನಗೆ ಇಂದು ಮುಂಜಾನೆಯಿಂದ ಪ್ರಯತ್ನಿಸಿದರೂ ಒಂದು ಮಡಿಕೆ ಮಾಡಲೂ ಸಾಧ್ಯವಾಗಲಿಲ್ಲ. ಆದರೆ ಮಡಿಕೆ ಮಾಡುವ ಗಂಧಗಾಳಿಯೇ ಗೊತ್ತಿಲ್ಲದ ನೀವು ಅದ್ಹೇಗೆ ಮಡಿಕೆ ಮಾಡಲು ಸಾಧ್ಯವಾಯಿತು..?" ಎಂದು ಕೇಳಿದ.
ಅದಕ್ಕೆ ಕೃಷ್ಣ ಮುಗುಳ್ನಕ್ಕು "ಏನಿಲ್ಲ ಕುಂಬಾರ ನೀನು ಮಡಿಕೆ ಮಾಡುವಾಗ ಅದನ್ನು ಎಷ್ಟು ಚಿನ್ನದ ನಾಣ್ಯಗಳಿಗೆ ಮಾರಾಟ ಮಾಡಬೇಕು. ಎಷ್ಟು ಬೆಲೆ ಪಡೀಬೇಕು ಅಂತ ಯೋಚನೆ ಮಾಡುತ್ತಾ ಮಡಿಕೆ ಮಾಡಿದಿಯೇ ಹೊರತು ನೀನು ಮಡಿಕೆ ಮಾಡುವ ಕೆಲಸದ ಮೇಲೆ ಗಮನವಿರಲಿಲ್ಲ. ನಿನ್ನ ಗಮನವೆಲ್ಲ ಚಿನ್ನದ ನಾಣ್ಯದ ಮೇಲಿತ್ತು ಅದಕ್ಕೆ ಮಡಿಕೆ ಸರಿಯಾಗಿ ಮೂಡಲಿಲ್ಲ. ಆದರೆ ನಾನು ಮಡಿಕೆ ಮಾಡುವಾಗ ಮಣ್ಣು ಹದವಾಗಿದೆಯಾ? ನಾನು ಮಡಿಕೆ ಚೆನ್ನಾಗಿ ಮಾಡಬೇಕು. ಅದಕ್ಕೆ ಸರಿಯಾಗಿ ಆಕಾರ ಕೊಡಬೇಕು, ಮಡಿಕೆಯನ್ನು ಗಟ್ಟಿಮುಟ್ಟಾಗಿ ಮಾಡಬೇಕು, ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಾ ಮಡಿಕೆ ಮಾಡಿದೆ ಆದ್ದರಿಂದ ನನ್ನ ಮಡಿಕೆಯು ಸುಂದರವಾಗಿ ಮೂಡಿ ಬಂದಿತು" ಎಂದನು. ಇದರಿಂದ ಕುಂಬಾರನಿಗೆ ತನ್ನ ತಪ್ಪಿನ ಅರಿವಾಯಿತು..
ನಾವೆಲ್ಲರೂ ಮಾಡುವ ತಪ್ಪು ಇದೆ. ನಮ್ಮ ನಮ್ಮ ಮಕ್ಕಳನ್ನು ದುಡ್ಡು ಮಾಡೋ ಯಂತ್ರಗಳನ್ನಾಗಿ ತಯಾರು ಮಾಡೋಕೆ ಹೋಗ್ತೀವಿ ಸ್ಕೂಲ್, ಕಾಲೇಜ್ನಲ್ಲಿ ಅವರೇ ಫಸ್ಟ್ ಬರಬೇಕು ಅಂತ ಒತ್ತಡ ಹೆರ್ತೀವಿ. ಅವರೇ ಶ್ರೇಷ್ಠ ಆಗ್ಬೇಕು ಅಂತ ಅಂದ್ಕೋತೀವಿ ಅದರಿಂದ ಅವರು ಸಮಾಜದಲ್ಲಿ ಶ್ರೇಷ್ಠ ಅಲ್ಲ ಉತ್ತಮ ವ್ಯಕ್ತಿ ಕೂಡ ಆಗಲ್ಲ. ಅದೇ ನಾವು ಅವರಿಗೆ ಒಳ್ಳೆ ಸಂಸ್ಕಾರ, ವಿದ್ಯೆ, ಸುವಿಚಾರ ಬುದ್ಧಿ, ನಮ್ಮ ಸಂಸ್ಕೃತಿ ಬಗ್ಗೆ ಹೇಳಿದ್ರೆ ಒಳ್ಳೆಯ ವ್ಯಕ್ತಿಗಳಷ್ಟೇ ಅಲ್ಲ ಶ್ರೇಷ್ಠ ವ್ಯಕ್ತಿಗಳಾಗಿ ಬೆಳೀತಾರೆ.
ಹಿಂದೆ ಕರ್ಣ ಮಾಡಿದ ತಪ್ಪು ಇದೆ ಕರ್ಣ ಯಾವಾಗಲೂ ಜಗತ್ತಿನಲ್ಲೇ ಶ್ರೇಷ್ಠ ಧನುರ್ಧಾರಿ ಆಗ್ಬೇಕು, ಅರ್ಜುನನನ್ನು ಸೋಲಿಸಬೇಕು ಅನ್ನೋ ಅಹಂಕಾರದಿಂದ ಇರುತ್ತಿದ್ದ. ಸುಳ್ಳು ಹೇಳಿ ವಿದ್ಯೆ ಪಡೆದ, ದುರ್ಜನರ ಸಹವಾಸ ಮಾಡಿದ, ಇದರಿಂದಾಗಿ ತನ್ನ ಕಡೆಗಾಲದಲ್ಲಿ ವಿದ್ಯೆ ಮರೆತು ಹೋದ. ಆದ್ರೆ ಅರ್ಜುನ ಯಾವಾಗಲೂ ತಾನೊಬ್ಬ ಉತ್ತಮ ಧನುರ್ಧಾರಿ ಆಗ್ಬೇಕು ಅಂತ ಪ್ರಯತ್ನಪಟ್ಟಿದ್ದ ಅದಕ್ಕೆ ಆತ ಮುಂದೆ ಒಬ್ಬ ಶ್ರೇಷ್ಠ ಧನುರ್ಧಾರಿ ಆದ. ನಾವು ಯಾವಾಗಲೂ ಉತ್ತಮ ಆಗೋಕೆ ಪ್ರಯತ್ನಪಟ್ಟರೆ ಶ್ರೇಷ್ಠತೆ ತಾನಾಗೇ ಸಿಗುತ್ತೆ.
