ದುರಾಸೆ
ದುರಾಸೆ
ಬಹಳ ಹಿಂದೆ ಒಬ್ಬ ಬಡವ ಕಾಡಿಗೆ ಹೋಗಿ ಮರ ಕಡಿದು ಸೌದೆ ತಂದು ಮಾರಿ ಜೀವನ ನಡೆಸುತ್ತಿದ್ದ. ಒಂದುದಿನ ಕಾಡಲ್ಲಿ ಕಣ್ಣುಮುಚ್ಚಿ ಧ್ಯಾನದಲ್ಲಿದ್ದ. ಒಬ್ಬ ಸನ್ಯಾಸಿಯ ಕಾಲು ಮುಟ್ಟಿ ನಮಸ್ಕರಿಸಿದ. ಆ ಸನ್ಯಾಸಿ ಇವನ ಕಷ್ಟದ ಕಾಯಕದ ಬಗ್ಗೆ ಅನುಕಂಪಗೊಂಡು ನಿನ್ನ ಕಷ್ಟದ ದಿನಗಳು ದೂರವಾಗುತ್ತೆ. ನೀನು ಅಲ್ಲಿ ಕಾಣುವ ಮರದ ಹಿಂದೆ ಹೋಗಿ ಮಣ್ಣು ಅಗೆದರೆ ಅಲ್ಲಿ ದೊರೆಯುವ ವಸ್ತುವಿನಿಂದ ನೀನು ನಿಶ್ಚಿಂತೆಯಿಂದ ಜೀವನ ಮಾಡಬಹುದೆಂದ. ಹಾಗೆಯೆ ಮಾಡಿದ. ಬಗೆದಷ್ಟೂ ಕಬ್ಬಿಣದ ಅದಿರು ಕಂಡು ತನ್ನ ಎರಡು ಕತ್ತೆಯ ಮೇಲೆ ಸಾಧ್ಯವಾದಷ್ಟು ಮನೆಗೆ ಸಾಗಿಸಿದ. ಅದನ್ನ ಮಾರಿ ನೆಮ್ಮದಿ ಜೀವನ ನಡೆಸಿದ. ಕೆಲವು ಕಾಲದ ನಂತರ ಆ ಸನ್ಯಾಸಿಯ ಕಂಡು ಧನ್ಯವಾದ ಹೇಳಲು ಬಂದ. ಈಗಲೂ ನೀನು ಬಹಳ ಸುಖವಾಗೇನು ಇಲ್ಲ ಅಲ್ಲವೇ. ನೀನು ಅದೇ ಮರದ ಪಕ್ಕದಲ್ಲಿರುವ ಹಳ್ಳದಲ್ಲಿ ಅಗೆದು ನೋಡು ಬೇರೊಂದು ವಸ್ತು ದೊರೆಯುತ್ತೆ. ಮತ್ತಷ್ಟು ಸುಖ ಅನುಭವಿಸಬಹುದೆಂದ. ತಮ್ಮ ದಯದಿಂದ ನಾನು ತೃಪ್ತನಾಗಿದ್ದೇನೆ. ನೆಮ್ಮದಿ ಇದೆ. ಮತ್ತೇನೂ ಬೇಡವೆಂದ.
ಮನೆಗೆ ಬಂದು ಈ ವಿಷಯವನ್ನ ಹೆಂಡತಿ ಮಕ್ಕಳಿಗೆ ತಿಳಿಸಿದ. ಅವರು ರಾತ್ರಿಯೆಲ್ಲ ಇವನಿಗೆ ನಿದ್ದೆ ಮಾಡಲು ಬಿಡದೆ ಪೀಡಿಸಿದರು. ಅನ್ಯ ದಾರಿ ಕಾಣದೆ ಒಪ್ಪಿ ಮಾರನೇದಿನ ಎಲ್ಲರೂ ಬಂದು ಅಲ್ಲಿ ಅಗೆಯಲು ಬೆಳ್ಳಿಗಟ್
ಟಿಗಳೇ ದೊರೆಯಿತು. ರಾತ್ರಿ ಆಗುವವರೆಗೂ ಕಾದು ಸಿಕ್ಕಷ್ಟೂ ಮನೆಗೆ ಸಾಗಿಸಿ ಅದನ್ನು ಮಾರಿ ಶ್ರೀಮಂತರಾದರು. ಅಂದಿನಿಂದ ಅವನಿಗೆ ನೆಮ್ಮದಿ ಹಾಳಾಗಿ ನಿದ್ದೆ ಇಲ್ಲದ ದಿನಗಳ ಕಳೆದ. ಹೆಂಡತಿಮಕ್ಕಳಿಗೆ ಇವನ ಬಗ್ಗೆ ಕಾಳಜಿ ಕಡಿಮೆ ಆಗುತ್ತಾ ಬಂದು ಚಿಂತೆಯಲ್ಲಿ ಮುಳುಗಿ ಹಾಸಿಗೆ ಹಿಡಿದ.ಒಂದು ದಿನ ಅವನ ಹೆಂಡತಿ ಮಕ್ಕಳು ಆ ಸನ್ಯಾಸಿಯನ್ನ ಕಾಣಲು ಬಂದು ನಮಸ್ಕರಿಸಿದರು.
ಅವಳ ಮಾತಲ್ಲೇ ಗಂಡನ ಬಗ್ಗೆ ಒಳ್ಳೆಯ ಭಾವನೆ ಇಲ್ಲದಿರುವುದು ಸನ್ಯಾಸಿಗೆ ತಿಳಿಯಿತು. ಏನು ನೀವು ಶ್ರೀಮಂತರಂತೆ ಕಾಣುತ್ತಿಲ್ಲವಲ್ಲ ಎಂದ ಸನ್ಯಾಸಿ . ತಕ್ಷಣ ಅವಳು ವ್ಯಾಪಾರದಲ್ಲಿ ಬಹಳ ನಷ್ಟವಾಗಿ ಎಲ್ಲ ಕಳೆದುಕೊಂಡಿದ್ದೇವೆ. ಅದಕ್ಕೆ ನಿಮ್ಮಲ್ಲಿ ಬಂದದ್ದು ಎಂದು ಸುಳ್ಳು ಹೇಳಿ ಬಿಟ್ಟಳು. ಅಯ್ಯೋ ಪಾಪ ಹೆದರಬೇಡಿ ಅಲ್ಲಿ ದೂರದಲ್ಲಿ ಕಾಣುವ ಆಲದ ಮರದ ಹಿಂದೆ ಹಾಳು ಮಂಟಪ ಇದೆ. ಮುಂದಿನ ಅಮಾವಾಸ್ಯೆ ರಾತ್ರಿ ಅಲ್ಲಿಹೋಗಿ ನಿಮಗೆ ಬೇಕಾದ ವಸ್ತು ದೊರೆಯುತ್ತೆ ಎಂದರು. ಆಯ್ತು ಅಂತ ಅಲ್ಲಿಯವರೆಗೆ ಕಾಯದೆ ದುರಾಸೆ ಇಂದ ಗಂಡನಿಗೂ ತಿಳಿಸದೇ ಅಂದಿನ ರಾತ್ರಿಯೇ ಮಕ್ಕಳ ಜೊತೆ ಆ ಹಾಳು ಮಂಟಪಕ್ಕೆ ಬಂದಳು. ಕತ್ತಲಲ್ಲಿ ಹುಡುಕಾಡುವಾಗ ಅಲ್ಲೇ ಇದ್ದ ವಿಷ ಸರ್ಪವೊಂದು ಮೂವರನ್ನು ಕಚ್ಚಿ ಸಾಯಿಸಿತು.