ನನ್ನವ್ವ
ನನ್ನವ್ವ
ಜೀವದ ಉಸಿರ ಕೊಟ್ಟವಳು
ತಿದ್ದಿ ಕೈ ಹಿಡಿದು ನಡೆಸಿದವಳು
ಆಸರೆಯಾಗಿ ನನಗೆ ನೆರಳಾದವಳು
ತೂಗಿಸಿ ಲಾಲಿ ಹಾಡಿದವಳು ನನ್ನವ್ವ!!
ಊರ ಜನರೆಲ್ಲಾ ಸೇರಿ ಜಗಳವಾಡಿದಾಗ
ನನಗೆ ಕಥೆ ಹೇಳಿ ಉಣ ಬಡಿಸಿದವಳು
ಶಾಂತಿಯ ಮಂತ್ರದ ಸೂತ್ರ ಹೇಳಿ
ಸದ್ಗುಣಗಳ ಕಲಿಸಿಕೊಟ್ಟವಳು ನನ್ನವ್ವ!!
ಶಾಲೆಗೆ ನಿತ್ಯ ಅವಳು ಕರೆತರಲು
ನಾ ಹೇಗೆ ಮರೆಯಲಿ ಆ ದಿನಗಳ
ಕೂಲಿ ಮಾಡಿ ಶಾಲೆ ಜ್ಞಾನ ಕೂಡಿಸಿ
ಸಮಾಜದಲ್ಲಿ ನನಗೆ ಸ್ಥಾನ ನೀಡಿದಳು ನನ್ನವ್ವ!!
ದೇಶದ ಕಥೆ ಹೇಳಿ ದೇಶಾಭಿಮಾನ ಬೆಳಿಸಿ
ನೀತಿಯ ಕಥೆಯ ಹೇಳಿ ನೀತಿವಂತನ ಮಾಡಿದವಳು
ಗೌರವ ಕಾಣುವ ಹುದ್ದೆಗೆ ಕಾರಣಳಾಗಿ
ಗುರಿಯ ಸೇರಲು ಮಾಡಿದವಳು ನನ್ನವ್ವ!!
ತುಸು ನೋವಾದರೂ ಸಹಿಸದ ಕರುಣೆಯವಳು
ಪ್ರೀತಿಯ ಮಮತೆಯ ಕರುಣಾಮಯಿ
ದೇವತೆಯ ಕೈತುತ್ತು ತಿನ್ನಿಸಿ ಬೆಳೆಸಿದ
ಮಮತಾಮಯಿ ತಾಯಿ ನನ್ನವ್ವ!!
✍️ ಪುಷ್ಪ ಪ್ರಸಾದ್ ಉಡುಪಿ
