ಘಮಘಮ ಮಲ್ಲಿಗೆ
ಘಮಘಮ ಮಲ್ಲಿಗೆ
ಇನಿಯನ ನೆನೆಯುತ್ತ ಮುಡಿಗೇರಿಸಿದ್ದೆ
ಘಮಘಮ ಮಲ್ಲಿಗೆ ಮೊಗ್ಗಿನ ದಿಂಡು
ಅವನ ನೆನಪುಗಳಲಿ ಕಾಲ ಕಳೆಯುತಿರೆ
ಮೊಗ್ಗುಗಳೆಲ್ಲಾ ಅರಳಿ ಮಲ್ಲಿಗೆ ದಿಂಡು
ಭುಜಕ್ಕಿಳಿದು ಮಾಲೆಯಾಗಿತ್ತು ನಗುತಲಿ!!
ನನ್ನಿನಿಯನ ಸಿಹಿ ಮುಗುಳ್ನಗೆಯಂತೆ
ಸುತ್ತೆಲ್ಲಾ ಸುಶ್ರಾವ್ಯ ಬೀರುತ್ತಾ
ಮನದಿ ಶೃಂಗಾರದ ರಸಕಾವ್ಯ ಸುಳಿದಾಡುತಿತ್ತು
ಸನಿಹ ಬಯಸಿ ತನುವು ತೂಗಿ
ಇನಿಯನ ತೋಳಿನಾಸರೆ ಬೇಡಿತ್ತು!!
ನಡುವಿನ ಇಳಿಜಾರಿನಲಿ ಭಾವವೊಂದು ಉಕ್ಕಿರಲು
ಹಾಡುತ್ತಲಿತ್ತು ಸವಿಗಾನದ ಪ್ರಣಯ ಗೀತೆ
ಪಾದಗಳು ಹೆಜ್ಜೆ ಇಟ್ಟು ನೃತ್ಯವಾಡುತಿರಲು
ಮೌನರಾಗದ ಸ್ವರ ಸಂಯೋಜನೆಯಲಿ
ನಲಿದಾಡುತ್ತಿತ್ತು ಮೆಲ್ಲಗೆ ಘಮಘಮ ಮಲ್ಲಿಗೆ!!
✍️ ಪುಷ್ಪ ಪ್ರಸಾದ್
