Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Vijaya Bharathi

Children Stories Drama Others

2  

Vijaya Bharathi

Children Stories Drama Others

ದುರಾಸೆಯ ಫಲ

ದುರಾಸೆಯ ಫಲ

2 mins
119


ಒಂದು ಹಳ್ಳಿಯಲ್ಲಿ ರಾಮಣ್ಣ ಹಾಗೂ ಭೀಮಣ್ಣಅಕ್ಕ ಪಕ್ಕದ ಮನೆಯಲ್ಲಿ ವಾಸಮಾಡುತ್ತಿದ್ದರು. ರಾಮಣ್ಣ ಬಡವನಾದರೂ ಪ್ರಾಮಾಣಿಕವಾಗಿ ತನ್ನ ಹೊಲದಲ್ಲಿ ದುಡಿಯುತ್ತಾ,ತನ್ನ ಸಂಪಾದನೆಯಲ್ಲಿ ತನ್ನ ಹೆಂಡತಿ ಮತ್ತು ಮಕ್ಕಳನ್ನು ಸಾಕುತ್ತಾ, ತೃಪ್ತವಾಗಿ ಜೀವನ ನಡೆಸುತ್ತಿದ್ದ. ಅವನು ಅವನ ಹೆಂಡತಿ ಹಾಗೂ ಮಕ್ಕಳಿಗೆ ತನ್ನ ಆದಾಯದ ಇತಿ ಮಿತಿಗಳನ್ನು ತಿಳಿಸುತ್ತಾ, ದೇವರು ಕೊಟ್ಟ್ಟಿದ್ದರಲ್ಲಿ ನೆಮ್ಮದಿಯಿಂದ ಬಾಳಬೇಕು, ನಮಗಿಂತ ಉತ್ತಮ ಮಟ್ಟದಲ್ಲಿರುವವರನ್ನು ನೋಡಿ ಅಸೂಯೆ ಪಡಬಾರದು,ಇನ್ನೊಬ್ಬರ ವಸ್ತುಗಳಿಗೆ ಆಸೆ ಪಡಬಾರದು, ಎಂದು ತಿಳಿವಳಿಕೆ ನೀಡುತ್ತಿದ್ದ. ಹೀಗಾಗಿ ಅವನ ಮನೆಯವರೆಲ್ಲರೂ ಹಾಸಿಗೆ ಇದ್ದಷ್ಟು ಕಾಲುಚಾಚುತ್ತಿದ್ದರು. 


ಈ ರಾಮಣ್ಣನ ನೆರೆ ಮನೆಯವನಾದ ಭೀಮಣ್ಣ ಸಾಹುಕಾರ. ಒಳ್ಳೆಯ ಜಮೀನುದಾರರ ಮಗನಾಗಿದ್ದಿದ್ದರಿಂದ, ದೊಡ್ಡದಾದ ಮನೆ, ಹತ್ತಾರು ಎಕರೆ ತೋಟ ಗದ್ದೆ ಎಲ್ಲವೂ ಇತ್ತು., ಹೀಗಾಗಿ ಅವನಿಗೆ ಸ್ವಲ್ಪ ದೊಡ್ಡಸ್ತಿಕೆ ಇತ್ತು. ರಾಮಣ್ಣ ಹಾಗೂ ಭೀಮಣ್ಣ ಒಂದೇ ವಯಸ್ಸಿನವರಾಗಿದ್ದು,ಒಂದೇ ಊರಿನಲ್ಲಿ ನೆರೆಮನೆಯವರಾಗಿದ್ದುದ್ದರಿಂದ, ಇಬ್ಬರಲ್ಲೂ ಚಿಕ್ಕಂದಿನ ಗೆಳೆತನವಿತ್ತು. 


ಚಿಕ್ಕವಯಸ್ಸಿನಿಂದಲೂ ಕೂಡಿ ಆಡಿ ಬೆಳೆದವರು.ಆದರೆ ವಯಸ್ಸಾಗುತ್ತಾ,ತಮ್ಮ ಮನೆಯ ದೊಡ್ಡಸ್ತಿಕೆಯ ಬಗ್ಗೆ ಭೀಮಣ್ಣನಿಗೆ ಒಂದು ರೀತಿ ಅಹಂಕಾರವೂ ಬೆಳೆದಿತ್ತು. ಹೆಚ್ಚು ಶ್ರಮಪಡದೆ, ಗಂಡಾಗುಂಡಿಯಿಂದ ಬಡವರ ಭೂಮಿಯನ್ನು ತನ್ನದನ್ನಾಗಿ ಮಾಡಿಕೊಂಡು, ಅವರನ್ನು ತನ್ನ ಅಡಿಯಾಳಗಿಸಿಕೊಂಡು, ಕೆಲಸ ತೆಗಿಸುತ್ತಿದ್ದ. ಬಡ ರೈತರ ಬಡತನವನ್ನು ದುರುಪಯೋಗಿಸಿಕೊಳ್ಳುತ್ತಿದ್ದ. 


ಭೀಮಣ್ಣನ ಈ ದೊಡ್ಡಸ್ತಿಕೆಯ ದುರಹಂಕಾರವನ್ನು ತಿಳಿದುಕೊಂಡಿದ್ದ ರಾಮಣ್ಣ ಅವನನ್ನು ಎಷ್ಟು ಬೇಕೋ ಅಷ್ಟೇ ದೂರದಲ್ಲಿ ಇಟ್ಟಿದ್ದ. ಇವನ ಮಕ್ಕಳ ಜೊತೆ ತನ್ನ ಮಕ್ಕಳನ್ನು ಸೇರಿಸಲು ಬಿಡುತ್ತಿರಲಿಲ್ಲ. ಜೊತೆಗೆ ಓದಿನಲ್ಲಿತನ್ನ ಮಕ್ಕಳಿಗಿಂತ ಮುಂದೆ ಇರುತ್ತಿದ್ದ ರಾಮಣ್ಣನ ಮಕ್ಕಳ ಮೇಲೆ ಭೀಮಣ್ಣನಿಗೆ ಒಂದು ರೀತಿ ಅಸೂಯೆ ಬೆಳೆದು, ರಾಮಣ್ಣನ ಕಾಲೆಳೆಯುವುದಕ್ಕೆ ಹೊಂಚು ಹಾಕುತ್ತಿದ್ದ. ಇವನ ಕುಬುದ್ಧಿ ತಿಳಿದಿದ್ದ ರಾಮಣ್ಣ 

ಇವನೊಂದಿಗೆ ಎಚ್ಚರಿಕೆಯಾಗಿರುತ್ತಿದ್ದ.


ರಾಮಣ್ಣನ ಅದೃಷ್ಟವೋ ಎಂಬಂತೆ ಒಂದು ದಿನ ಅವನ ಹೊಲದಲ್ಲಿ ಮಣ್ಣನ್ನು ಅಗೆಯುತ್ತಿದ್ದಾಗ, ಒಂದು ತಾಮ್ರದ ಬಿಂದಿಗೆ ದೊರಕಿ , ಅದನ್ನು ಅವನ ಮನೆಗೆ ತಂದು ನೋಡಿದಾಗ ಅದರೊಳಗೆ ಹತ್ತಾರು ಚಿನ್ನದ ನಾಣ್ಯಗಳಿದ್ದವು. ಬಡತನದ ಜೀವನಕ್ಕೆ ಹೊಂದಿಕೊಂಡು ಹೋಗುತ್ತಿದ್ದ ಅವನ ಹೆಂಡತಿ ಹಾಗೂ ಮಕ್ಕಳಿಗೆ ಅನಾಯಾಸವಾಗಿ 

ದೊರೆತಿರುವ ನಿಧಿಯನ್ನು ನೋಡಿ ತುಂಬಾ ಖುಷಿಯಾಯಿತು. ಕೂಲಿ ಆಳಿನಿಂದ ವಿಷಯ ತಿಳಿದ ಭೀಮಣ್ಣನಿಗೆ ಹೊಟ್ಟೆ ಉರಿ ಹತ್ತಿಕೊಂಡಿತು. ಆ ನಿಧಿಯನ್ನ ಹೇಗಾದರೂ ಭೀಮಣ್ಣನ ಮನೆಯಿಂದ ಲಪಟಾಯಿಸಬೇಕೆಂದು ಯೋಜನೆ ಹಾಕಲು ಪ್ರಾರಂಭಿಸಿದನು. 


ತನ್ನ ಮನೆಯ ಆಳುಗಳನ್ನು ರಾಮಣ್ಣನ ಮನೆಗೆ ಕಳುಹಿಸಿ ಆ ನಿಧಿಯಿರುವ ಕೊಡವನ್ನು ಇಟ್ಟಿರುವ ಜಾಗವನ್ನು ಪತ್ತೆ ಹಚ್ಚುವಂತೆ ಹೇಳಿದಾಗ, ಒಡೆಯನ ಆದೇಶದಂತೆ ಅವರು ರಾಮಣ್ಣನ ಮನೆಗೆ ಬಂದು ಅದೂ ಇದೂ ಮಾತನಾಡುತ್ತಾ ಆ ನಿಧಿಯಿರುವ ತಾಮ್ರದ ಕೊಡದ ಜಾಗವನ್ನು ಹುಡಿಕಿದರು,. ಆ ಕೊಡ ಕೊಟ್ಟಿಗೆಯ ಮೂಲೆಯಲ್ಲಿರುವುದನ್ನು ಪತ್ತೆಹಚ್ಚಿ, ಭೀಮಣ್ಣನಿಗೆ ತಿಳಿಸಿದರು. ಅಂದು ರಾತ್ರಿ ಭೀಮಣ್ಣ ಮುಸುಕುಧಾರಿಯಾಗಿ ಬಂದು ಯಾರಿಗೂ ಗೊತ್ತಾಗದಂತೆ ಆ ತಾಮ್ರದ ಕೊಡವನ್ನು ಕದ್ದು ತೆಗೆದುಕೊಂಡು ಹೋಗಿ ತನ್ನ ಮನೆಯಲ್ಲಿ ಭದ್ರವಾಗಿ ಬಚ್ಚಿಟ್ಟನು. ನಂತರ ಯಾರಿಗೂ ಕಾಣದಂತೆ ಆ ತಾಮ್ರದ ಕೊಡದ ಬಾಯಿಗೆ ಕಟ್ಟಿದ್ದ ಬಟ್ಟೆಮತ್ತು ಹಗ್ಗವನ್ನು ತೆಗೆದು ನೋಡಿದಾಗ ಅವನಿಗೆ ನಿರಾಶೆಯಾಯಿತು. ಅದರೊಳಗೆ ಕೇವಲ ಹಸುವಿನ ಸೆಗಣಿಯಿರುವುದನ್ನು ನೋಡಿ, ಅವನಿಗೆ ತುಂಬಾ ನಿರಾಸೆಯಾಗಿ, ಕೋಪದಿಂದ ಕೊಡವನ್ನು ರಾಮಣ್ಣನ ಮನೆಯ ಹಿತ್ತಿಲಿಗೆ ಎಸೆದು ಬಿಟ್ಟನು. ತಮ್ಮ ಮನೆಯ ಕಿಟಕಿಯಿಂದಲೇ 

ಎಲ್ಲವನ್ನೂ ನೋಡುತ್ತಿದ್ದ ರಾಮಣ್ಣನಿಗೆ ಭೀಮಣ್ಣನ ಪರಿಸ್ಥಿತಿಯನ್ನು ಕಂಡು ನಗು ತಡೆಯದಾಯಿತು.


ಮೊದಲಿನಿಂದಲೂ ಭೀಮಣ್ಣನ ಬುದ್ಧಿ ತಿಳಿದಿದ್ದ ರಾಮಣ್ಣ, ತನಗೆ ಸಿಕ್ಕಿರುವ ಬಂಗಾರದ ನಾಣ್ಯಗಳನ್ನು ಆ ಕೊಡದಿಂದ ತೆಗೆದು ದೇವರ ಮನೆಯಲ್ಲಿ ದೇವರಿಟ್ಟಿರುವ ಜಾಗದ ಕೆಳಗೆ ಇಟ್ಟು , ಖಾಲಿ ಬಿಂದಿಗೆಯಲ್ಲಿ ಸೆಗಣಿ ತುಂಬಿ ಕೊಟ್ಟಿಗೆಯಲ್ಲಿರಿಸಿದ್ದನು. ಈ ವಿಷಯ ಭೀಮಣ್ಣನಿಗೆ ತಿಳಿಯಲೇ ಇಲ್ಲ. ಪ್ರಾಮಾಣಿಕವಾಗಿದ್ದ ರಾಮಣ್ಣನಿಗೆ ಆ ದೇವರೇ ಸಹಾಯ ಹಸ್ತ ನೀಡಿದ್ದನು.ಮತ್ತೊಬ್ಬರ ಹಣಕ್ಕಾಗಿ ಹೊಂಚು ಹಾಕಿದ ಭೀಮಣ್ಣನಿಗೆ ತನ್ನ ಹೊಟ್ಟೆಯನ್ನು ಕಿವುಚಿಕೊಳ್ಳುವುದೊಂದೇ ಉಳಿದದ್ದು.


ನೀತಿ: ನಾವು ಎಂದಿಗೂ ಪರರ ಸೊತ್ತಿಗೆ ಆಸೆ ಪಡಬಾರದು.  ಪ್ರಾಮಾಣಿಕರನ್ನು ದೇವರು ಸದಾಕಾಲ ಕಾಪಾಡುತ್ತಾನೆ.

ಜೀವನದಲ್ಲಿ ಕೆಲವು ಸಂದರ್ಭಗಳಲ್ಲಿ ಕಷ್ಚಗಳಿಂದ ಪಾರಾಗಲು ಉಪಾಯಗಳು ಗೊತ್ತಿರಬೇಕು.



Rate this content
Log in