Become a PUBLISHED AUTHOR at just 1999/- INR!! Limited Period Offer
Become a PUBLISHED AUTHOR at just 1999/- INR!! Limited Period Offer

Vijaya Bharathi

Children Stories Classics Inspirational

2  

Vijaya Bharathi

Children Stories Classics Inspirational

ಧ್ರುವ ಕುಮಾರ

ಧ್ರುವ ಕುಮಾರ

4 mins
83


ಅಂದು ಸಂಜೆ ಬಿಕ್ಕಿ ಬಿಕ್ಕಿ ಅಳುತ್ತಾ ಬಂದ ತನ್ನ ಐದು ವರ್ಷದ ಮಗ ಧ್ರುವನನ್ನು ಕಂಡ ಸುನೀತಿಗೆ ತುಂಬಾ ನೋವಾಗಿ, ಕರುಳು ಕಿತ್ತು ಬರುವಂತಾಯಿತು. ಓಡಿ ಬಂದು ಮಗನನ್ನು ತಬ್ಬಿಕೊಂಡು, "ಮಗು ಧ್ರುವ ಯಾಕಪ್ಪಾ ಇಷ್ಟು ದುಃಖ ಪಡುತ್ತಿದ್ದೀಯ? ಯಾರು ಏನು ಮಾಡಿದರು? ನಿನ್ನ ತಮ್ಮ ಉತ್ತಮ ಏನಾದರೂ ಜಗಳ ಮಾಡಿದನಾ? ಎಲ್ಲಾದರೂ ಬಿದ್ದೆಯ?ಏನಾಯ್ತು ಹೇಳು ಪುಟ್ಟ?" ಒಂದೇ ಸಮನೆ ಪ್ರಶ್ನೆಯ ಮಳೆಗರೆದಳು.


ಅವಳ ಒಳಮನದಲ್ಲಿ ಸವತಿ ಸುರುಚಿಯ ಬಗ್ಗೆ ಅನುಮಾನವಿದ್ದೇ ಇತ್ತು. "ಅವಳೇನಾದರೂ ಅಂದಿರುತ್ತಾಳೆ. ದೊರೆ ಉತ್ತಾನಪಾದರಾಯ ಅವಳ ಪರವೇ. ಅವನಿಗೆ ನನ್ನ ಮೇಲೆ ಅಕ್ಕರೆಯೇ ಇಲ್ಲ. ನಾನೂ ಸುರುಚಿಗಿಂತಲೂ ಮೊದಲೇ ಮಹಾರಾಣಿಯ ಪಟ್ಟ ಗಿಟ್ಟಿಸಿದ್ದರೂ, ಅವಳು ಬಂದ ನಂತರ ನನ್ನನ್ನು ದೊರೆ ಕಡೆಗಾಣಿಸಿ, ನನ್ನನ್ನು ದೂರಮಾಡಿಲ್ಲವೆ? ನನಗೆ ಅರಮನೆಯಿಂದ ದೂರ ಒಂದು ಮನೆ ಮಾಡಿಕೊಟ್ಟಿಲ್ಲವೆ? ನಾನು ನನ್ನ ಮಗ

ಧ್ರುವ ಅರಮನೆಯಿಂದ ದೂರವೇ ಉಳಿಯಬೇಕಾಗಿದೆ. ಹೇಗೋ ಭಗವನ್ನಾಮ ಸ್ಮರಣೆ ಹಾಗೂ ಅವನ ಧ್ಯಾನ ಜಪಗಳಿಂದ ನಾನೇನೋ ಮನಸ್ಸಿಗೆ ಸಮಾಧಾನ ತಂದುಕೊಂಡಿದ್ದರೂ, ಇನ್ನೂ ಹಸುಳೆಯಾಗಿರುವ ಧ್ರುವನಿಗೆ ತನ್ನ ತಂದೆಯ ಪ್ರೀತಿ ಬೇಡವೇ? ಹೀಗಾಗಿ ಅವನುದಿನಕ್ಕೊಮ್ಮೆ ಅರಮನೆಯ ಕಡೆ ಹೋಗಿ,ತನ್ನ ತಮ್ಮ ಉತ್ತಮನೊಂದಿಗೆ ಸ್ವಲ್ಪ ಹೊತ್ತು ಆಟವಾಡ ಕೊಂಡು ಬರುತ್ತಾನೆ. ಇದನ್ನು ನಾನು ಹೇಗೆ ತಪ್ಪಿಸಲಿ?ಇಂದೂ ಸಹ ಹೋಗಿದ್ದ, ಆದರೆ ಅಲ್ಲಿ 

ಏನಾಯಿತೋ ಏನೋ? ಮಗು ಧ್ರುವ ತುಂಬಾ ಅಳುತ್ತಿದ್ದಾನೆ". ಸುನೀತಿ ಯೋಚಿಸುತ್ತಿದ್ದಳು.  


ಧ್ರುವನ ಅಳು ಇನ್ನೂಹೆಚ್ಚಾಗುತ್ತಾ ಹೋಯಿತು.


ಅವಳಿಗೆ ಮಗನ ದುಃಖವನ್ನು ಸಹಿಸಾಗದೆ, ಮಗುವನ್ನು ಕಂಕುಳಲ್ಲಿ ಎತ್ತಿಕೊಂಡು

 ಮತ್ತೊಮ್ಮೆ ಏನಾಯಿತೆಂದು ಕೇಳಿದಾಗ,ಧ್ರುವ ಬಿಕ್ಕುತ್ತಲೇ ಅರಮನೆಯಲ್ಲಿ ನಡೆದ 

ವಿಷಯವನ್ನು ತನ್ನ ಬಾಲಭಾಷೆಯಲ್ಲಿ ಬಿಕ್ಕುತ್ತಾ ಹೇಳುತ್ತಾನೆ.


"ಅಮ್ಮ, ಇಂದು ಸಿಂಹಾಸನದ ಮೇಲೆ ಅಪ್ಪನ ತೊಡೆಯಲ್ಲಿಉತ್ತಮನು ಕುಳಿತಿರುವುದನ್ನು ಕಂಡು ನನಗೂ ಆಸೆಯಾಗಿ, ಅಪ್ಪನ ತೊಡೆ ಏರಲು ಸಿಂಹಾಸನದ ಹತ್ತಿರ ಹೋದಾಗ ನನ್ನನ್ನು ಕೂರಿಸಿಕೊಳ್ಳಲಿಲ್ಲ, ಅಷ್ಟೆ ಅಲ್ಲದೆ,ಸುರುಚಿ ಚಿಕ್ಕ್ಕಮ್ಮ

ನನಗೆ ಏನೇನೋಹೇಳಿ ಅವಮಾನ ಮಾಡಿದಳು. ನನಗೆ ತುಂಬಾ ಅಳು ಬಂತು. ನಾನು ಯಾಕಮ್ಮಅಪ್ಪನ ತೊಡೆಯ ಮೇಲೆ ಕುಳಿತುಕೊಳ್ಳಬಾರದು? ನಾನು ಅಪ್ಪನ ತೊಡೆಯ  ಮೇಲೆ ಕುಳಿತುಕೊಳ್ಳಬೇಕಾದರೆ, ಸುರುಚಿ ಚಿಕ್ಕಮ್ಮನ ಮಗನಾಗಬೇಕಂತೆ,ನಾನೂ ಸಹ ಅಪ್ಪನಿಗೆ ಮಗನಲ್ಲವೇನಮ್ಮ? ಹೀಗಂದರೆ ಏನಮ್ಮ ಅರ್ಥ?"


ತನಗೆ ತಿಳಿದಷ್ಟನ್ನು ಧ್ರುವ ತಾಯಿಗೆ ಹೇಳಿದಾಗ, ಸುನೀತಿಗೆ ಸ್ವಲ್ಪ ಅರ್ಥವಾಯಿತು. ಮಗುವನ್ನು ಸಮಾಧಾನಗೊಳಿಸಿದ ನಂತರ ತನ್ನ ಪರಿಜನರನ್ನು ಕರೆದು ವಿಚಾರಿಸಲಾಗಿ,  ಅರಮನೆಯಲ್ಲಿ ಧ್ರುವನಿಗಾದ ಅವಮಾನ ,ಸವತಿ ಸುರುಚಿಯ ತಿರಸ್ಕಾರದ ಮಾತುಗಳೆಲ್ಲವೂ  ಸುನೀತಿಗೆ ತಿಳಿಯಿತು.ಅವಳ ಮನಸ್ಸು ಮುದುಡಿಹೋಯಿತು. ತನ್ನ ಹಾಗೂ ತನ್ನ ಮಗನ 

ಸ್ಥಾನವನ್ನು ಕಸಿದುಕೊಂಡಿರುವ ಸುರುಚಿಯ ಬಗ್ಗೆ ತುಂಬಾ ಬೇಸರವಾಗುವುದರ ಜೊತೆಗೆ ತನ್ನ ಗಂಡ ಮಹಾರಾಜ ಉತ್ತಾನಪಾದರಾಯನ ಬಗ್ಗೆ ಯೂ ತಿರಸ್ಕಾರ ಮೂಡಿತು. ಇಂತಹ ಅವಮಾನಗಳನ್ನು ತಾನು ಡೆದುಕೊಳ್ಳಬಹುದಾದರೂ, ಇನ್ನೂ ಎಳೆ ಬಾಲಕನಾಗಿರುವ ತನ್ನ ಮಗ ಧ್ರುವ ಹೇಗೆ ತಡೆದುಕೊಂಡಾನು? ತನ್ನ ಹೊಟ್ಟೆಯಲ್ಲಿ ಹುಟ್ಟಿದ ತಪ್ಪಿಗೆ ಅವನೂ ಸಹ ಇಂತಹ ಅನ್ಯಾಯ ಅಪಮಾನಗಳನ್ನು ಸಹಿಸಲೇಬೇಕು. ಆದರೆ ಚಿಕ್ಕ ಬಾಲಕನಾದ ಅವನಿಗೆ ಇದನ್ನೆಲ್ಲಾ ಹೇಗೆ ಅರ್ಥ ಮಾಡಿಸುವುದು? 


ಸುನೀತಿ ಮಗನನ್ನು ಸಾಕಷ್ಟು ಸಮಾಧಾನ ಮಾಡಿ,"ಇಂತಹ ಅಪಮಾನಗಳಿಗೆ ನಾವು ಯಾವಾಗಲೂ ಸಿದ್ಧರಾಗಿರಬೇಕಪ್ಪ, ಇದು ನಮ್ಮ ಹಣೇ ಬರಹ, ಈ ಕಷ್ಟಗಳಿಂದ ಪಾರಾಗಲು ದೇವರ ಧ್ಯಾನ ಮಾಡ ಬೇಕಪ್ಪ,ಭಗವಂತನನ್ನು ಕುರಿತು ತಪಸ್ಸು 

ಮಾಡಬೇಕಪ್ಪ.ನೀನು ನನ್ನ ಹೊಟ್ಟೆಯಲ್ಲಿ ಹುಟ್ಟಿದ್ದರಿಂದ ಇದನ್ನೆಲ್ಲಾ ಅನುಭವಿಸಬೇಕಾಯಿತು"  ಎಂದು ನೋವಿನಿಂದ ನುಡಿದಾಗ, "ಅಮ್ಮ, ನಾನು ಸುರುಚಿ ಚಿಕ್ಕಮ್ಮನ ಹೊಟ್ಟೆಯಲ್ಲಿ ಹುಟ್ಟಿ ಅಪ್ಪನ ತೊಡೆಯ ಮೇಲೆ 

ಕುಳಿತುಕೊಳ್ಳ ಬೇಕಾದರೆ ದೇವರನ್ನು ಕುರಿತು ತಪಸ್ಸು ಮಾಡಬೇಕಾ ಅಮ್ಮ ?" ಮುಗ್ದ ಧ್ರುವನ ಮಾತಿಗೆ ಸುನೀತಿ ಕರಗಿ ಹೋದಳು.ಅವನನ್ನು ಎದೆಗೆ ಅಪ್ಪಿಕೊಳ್ಳುತ್ತಾ, " ಮಗು, ನೀನು ನಮ್ಮ ಕಷ್ಟಗಳ ಪರಿಹಾರಕ್ಕಾಗಿ ದೇವರನ್ನು ಕುರಿತು ತಪಸ್ಸು ಮಾಡು.


ಸುರುಚಿಯ ಹೊಟ್ಟೆಯಲ್ಲಿ ಮಗನಾಗಿ ಹುಟ್ಟಬೇಕೆಂದು ಬೇಡಿಕೊಳ್ಳಬೇಡ.ದೇವರಲ್ಲಿ, ಆನಂದವನ್ನು ಕೊಡು,ಶಾಂತಿಯನ್ನು ಕೊಡು, ಎಂದು ವರವನ್ನು ಬೇಡಿಕೋ.ಆಗ ಅವನು, ಆನಂದದ ಸ್ಥಿತಿ ಪ್ರಾಪ್ತವಾಗುವ ರೀತಿಯಲ್ಲಿ ವರವನ್ನು ಕೊಡುತ್ತಾನೆ" ಪರಿಪರಿಯಾಗಿ ಮಗನನ್ನು ಸಮಾಧಾನ ಪಡಿಸುತ್ತಿದ್ಡಾಗ, ಇದ್ದಕ್ಕಿದ್ದಂತೆ ಪುಟ್ಟ

ಧ್ರುವ, ದೊಡ್ಡ ಪ್ರತಿಜ್ಞೆ ಯನ್ನೇ ಮಾಡಿಬಿಟ್ಟ. " ಅಮ್ಮ, ನನಗೆ ಈ ರೀತಿ ಅವಮಾನ ಸಹಿಸಲು ಇಷ್ಟವಿಲ್ಲ, ನಾನು ದೇವರನ್ನು ಕುರಿತು ತಪಸ್ಸು ಮಾಡಿಯೇ ಮಾಡುತ್ತೇನೆ. ತಪಸ್ಸಿನ ಫಲವಾಗಿ ,ಉತ್ತಮನಾಗಲೀ,ಉತ್ತಮನ ಅಮ್ಮನಾಗಲೀ ಉತ್ತಮನ ಪೂರ್ವಿಕರಾಗಲೀ ಯೋಚನೆ ಮಾಡದಿರದ ಉನ್ನತವಾದ ಪದವಿಯನ್ನು ಹೊಂದುತ್ತೇನೆ. ಇದು ನನ್ನ ಪ್ರತಿಜ್ಞೆ "ಕೇವಲ ಐದು ವರ್ಷದ ಧ್ರುವನ ಈ ದೊಡ್ಡ ಪ್ರತಿಜ್ಞೆ ಕೇಳಿ ,ಸುನೀತಿ ಹೆದರಿದಳು.


ಆದರೆ ಧ್ರುವ ಮಾತ್ರ ಅನವರತವೂ ದೇವರನ್ನು ಕುರಿತು ತಪಸ್ಸು ಮಾಡುವ ಬಗ್ಗೆಯೇ ತನ್ನ ತಾಯಿಯನ್ನು ಕೇಳುತ್ತಿದ್ದನು, ಅದರ ಬಗ್ಗೆಯೇ ಯೋಚಿಸಿತ್ತಿದ್ದನು. ಚಿಕ್ಕಮಗು ಎಲ್ಲವನ್ನು ಮರೆಯುತ್ತದೆ ಎಂದುಕೊಂಡಿದ್ದ ಸುನೀತಿಗೆ ಧ್ರುವ ತಪಸ್ಸಿನ ಬಗ್ಗೆಯೇ ಪ್ರಶ್ನೆ ಮಾಡುತ್ತಿದ್ಡಾಗ,ಅವಳಿಗೆ ಭಯವಾಯಿತು. ಆ ಚಿಕ್ಕ ಬಾಲಕ ಕಾಡಿಗೆ ಹೋಗಿ ಕಠಿಣ ತಪಸ್ಸನ್ನು ಮಾಡುವುದೆಂದರೆ? ಸುನೀತಿ ಒಳಗೊಳಗೇ ಹೆದರಿದಳು. ಧ್ರುವನಾದರೋ ತನಗಾದ ಅವಮಾನದ ಬಗ್ಗೆಯೇ ಯೋಚಿಸುತ್ತ, ಇದರ ಪರಿಹಾರಕ್ಕೆ ತಪಸ್ಸಿನ ಮೂಲಕ ದೇವರನ್ನು ವರ ಕೇಳುವುದೊಂದೇ ಸರಿಯಾದ ಮಾರ್ಗವೆಂದು ಬಲವಾಗಿ ನಂಬಿದನು.


ಒಂದು ದಿನ ತಾಯಿಯನ್ನು ಒಪ್ಪಿಸಿ, ತನ್ನ ಮನೆ ಬಿಟ್ಟು ,ಊರು ದಾಟಿ ತಪಸ್ಸಿಗಾಗಿ ಕಾಡಿನ ಕಡೆ ಹೊರಟೆ ಬಿಟ್ಟನು. ಯಾವುದಕ್ಕೂ ಹೆದರದ ಧ್ರುವ, ಹಳ್ಳಿಗಳು,ನಗರಗಳನ್ನು ದಾಟುತ್ತಾ, ಕಾಡಿನ ಕಡೆ ನಡೆಯುತ್ತಿದ್ದಾಗ ಮಾರ್ಗ ಮಧ್ಯದಲ್ಲಿ ನಾರದ ಮಹರ್ಷಿಗಳು ಸಿಕ್ಕಿದರು.


ತ್ರಿಕಾಲ ಜ್ಞಾನಿಗಳಾದ ನಾರದರು, ಧ್ರುವನನ್ನು ಕಂಡು, ಎಲ್ಲವನ್ನೂ ವಿಚಾರಿಸಿದಾಗ,ಧೃವ ತನಗೆ ತನ್ನ ತಂದೆಯಿಂದಾದ ಅವಮಾನವನ್ನು ತಿಳಿಸಿ, ತಾನು ಉತ್ತಮ ಪದವಿ ಪಡೆಯಲು ಕಾಡಿಗೆ ತಪಸ್ಸು ಮಾಡಲು ಹೋಗುತ್ತಿದ್ದೇನೆ ಎಂದಾಗ, ನಾರದರಿಗೆ ತುಂಬಾ ಆಶ್ಚರ್ಯವಾದರೂ ಆ ಬಾಲಕನ ದೃಢತೆಯನ್ನು ಕಂಡು ಸಂತೋಷವೂ ಆದುತ್ತದೆ. ಅವನ ಮನಸ್ಸಿನ ಪಕ್ವತೆಯನ್ನು ಪರೀಕ್ಷೆ ಮಾಡಲು, ಅವನನ್ನು ಮನೆಗೆ ಹಿಂತಿರುಗಿಸಲು, ಹಲವು ಪ್ರಯತ್ನಗಳನ್ನೂ ಮಾಡುತ್ತಾರೆ." ಮಗು  ಧ್ರುವ,ನೀನು ಇನ್ನೂ ಎಳೆಬಾಲಕ,ಕಾಡಿನಲ್ಲಿ ಕ್ರೂರ ಮೃಗಗಳಿರುತ್ತವೆ ನಿನಗೆ ಭಯವಾಗುತ್ತದೆ,

ಅಲ್ಲಿ ಊಟ ಇರುವುದಿಲ್ಲ,ಮಲಗಲು ಮೆತ್ತನೆ ಮಂಚವಿರುವುದಿಲ್ಲ,ಬೇಡ ಮಗು ನೀನು  ಮತ್ತೆ ಮನೆಗೆ ಹಿಂದಿರುಗು,ನಾನು ನಿನ್ನ ಅಪ್ಪ ಉತ್ತಾನಪಾದರಾಯನಿಗೆ ಬುದ್ಧಿ ಹೇಳುತ್ತೇನೆ. ನೀನು ಅವನ ತೊಡೆಯ ಮೇಲೆ ಕುಳಿತುಕೊಳ್ಳುವಂತೆ ಮಾಡುತ್ತೇನೆ" ನಾರದರ ಮಾತಿಗೂ ಬಗ್ಗದ ಧ್ರುವ,ತನಗೆ ತಪಸ್ಸು ಮಾಡುವುದನ್ನು ಹೇಳಿಕೊಡುವಂತೆ ಕೇಳಿಕೊಂಡಾಗ

ಆ ಬಾಲಕನ ನಿಶ್ಚಲ ಬುದ್ಧಿಯನ್ನು ಕಂಡು, ಮನದಲ್ಲೇ ಸಂತಸ ಪಟ್ಟ ನಾರದರು ಧೃವನಿಗೆ ತಪಸ್ಸು ಮಾಡುವುದನ್ನು ತಿಳಿಸಿಕೊಟ್ಟು, ಶ್ರೀಮನ್ನಾರಾಯಣ ಮಂತ್ರವನ್ನು ಉಪದೇಶಿಸಿ,ಅವನಿಗೆ ಒಳ್ಳೆಯದಾಗುವಂತೆ ಆಶೀರ್ವದಿಸಿ,ಮುಂದೆ ತೆರಳುತ್ತಾರೆ.


ಮುಂದೆ ಧ್ರುವನು ಯಮುನಾನದಿ ತೀರದ "ಮಧುವನ" ಎಂಬ ಜಾಗದಲ್ಲಿ ಧೀರ್ಘವಾದ ತಪಸ್ಸಿಗೆ ಕುಳಿತುಕೊಳ್ಳುತ್ತಾನೆ. ಕೇವಲ ಐದು ವರ್ಷದ ಬಾಲಕ ಕಠಿಣ ತಪಸ್ಸನ್ನು ಮಾಡಲು ಪ್ರಾರಂಭಿಸಿ, "ಓಂನಮೋ ನಾರಾಯಣಾಯ, ಓಂ ನಮೋ ಭಗವತೇ ವಾಸುದೇವಾಯ"ಎಂಬ ಮಂತ್ರವನ್ನು ಜಪಿಸುತ್ತಾ, ಮೊದಲ ತಿಂಗಳು ಕಪಿತ್ಥವನ್ನೂ, ಜಂಬೂ ಪಲವನ್ನೂ ಸೇವಿಸುತ್ತಾ,ಎರಡನೇ ತಿಂಗಳು ಒಣ ಹುಲ್ಲನ್ನೂ,ಮೂರನೆಯ ತಿಂಗಳು ಕೇವಲ ನೀರನ್ನು,ನಾಲ್ಕನೇ ತಿಂಗಳು ಗಾಳಿಯನ್ನೂ, ಸೇವಿಸುತ್ತಾ, ಐದನೇ ತಿಂಗಳು ಎಲ್ಲವನ್ನೂ ಬಿಟ್ಟೂ ಅಂಗುಶ್ಠಾಗ್ರದಲ್ಲಿ ಭೂಮಿಯ ಮೇಲೆ ನಿಂತು ತಪಸ್ಸು ಮಾಡುತ್ತಾನೆ. ಇವನ ತಪಸ್ಸಿನ ತೀವ್ರತೆಗೆ ದೇವತೆಗಳ ಶ್ವಾಸಬಂಧವಾದಗ, ಅವರೆಲ್ಲರೂ ಮಹಾವಿಷ್ಣುವನ್ನು ಮೊರೆ ಹೋಗುತ್ತಾರೆ.


ಕಡೆಗೂ ಧ್ರುವನ ತಪಸ್ಸಿಗೆ ಮೆಚ್ಚಿದ ಶ್ರೀಮನ್ನಾರಾಯಣ ಗರುಢಾರೂಢನಾಗಿ, ಧ್ರುವ ನಿಗೆ ಪ್ರತ್ಯಕ್ಷವಾಗಿ, ಧ್ರುವ ನ ಅಂತರಂಗವನ್ನು ಅರಿತು ಅವನಿಗೆ ವರವನ್ನು ದಯಪಾಲಿಸುತ್ತಾನೆ. "ಮಗು ನಿನ್ನ ತಪಸ್ಸಿಗೆ ಮೆಚ್ಚಿದ್ದೇನೆ. ನಿನ್ನ ಮನಸ್ಸಿನ ಆಸೆಯಂತೆ, ನೀನಾಗಲೀ,ನಿನ್ನ ಪೂರ್ವಿಕರಾಗಲೀ ಯೋಚನೆ ಮಾಡೂವುದಕ್ಕೂ ಆಗುವುದಿಲ್ಲವೋ,ಅಂತಹ ಧ್ರುವ ಸ್ಥಾನವನ್ನು ಕೊಡುತ್ತೇನೆ.ಆದರೆ,ಅದನ್ನು ಈಗಲೇ ಕೊಡುವುದಿಲ್ಲ, ನೀನು ಧರ್ಮದಿಂದ ಕೆಲವು ಕಾಲ ರಾಜ್ಯಭಾರ ಮಾಡಿ ಆ ಬಳಿಕ ಆ ಸ್ಥಾನವನ್ನು ಪಡೆಯುತ್ತೀಯ". ಎಂದು ಹೇಳಿದ ಶ್ರೀಮನ್ನಾರಾಯಣನು ತಕ್ಷಣವೇ ಅಂತರ್ಧಾನನಾದಾಗ,ಧ್ರುವ ತನ್ನ ತಾಯಿಯು ಹೇಳಿದ್ದ ಆನಂದ, ಉತ್ತಮೋತ್ತಮ ಸ್ವರೂಪ ದರ್ಶನಗಳೆಲ್ಲವನ್ನೂ ಕೇಳಬೇಕೆಂಬುದು ಮರೆತು ಹೋಗುತ್ತದೆ. ಆದರೆ ಅವನ ತಪಸ್ಸಿನ ಸಂಕಲ್ಪ ಈಡೇರುತ್ತದೆ. ಭಗವಂತನ ದರ್ಶನದಿಂದ ಅವನ ಮನಸ್ಸು ತುಂಬಿ ಹೋಗುತ್ತದೆ.


ತನ್ನ ಸ್ವಪ್ರಯತ್ನದಿಂದ ಧ್ರುವ ಪದವಿಯನ್ನು ಪಡೆದ ಧ್ರುವ ತನ್ನ ಮನೆಗೆ ಹಿಂತಿರುಗಿದಾಗ, ಅವನಿಗೆ ಸಂಭ್ರಮದ ಸ್ವಾಗತವು ದೊರಕಿ, ಮುಂದೆ ತನ್ನ ಆರನೇ ವರ್ಷಕ್ಕೇ ರಾಜಪದವಿಯನ್ನು ಪಡೆದು, ಬಹಳ ವರ್ಷಗಳ ಕಾಲ ಧರ್ಮದಿಂದ ರಾಜ್ಯಭಾರ ಮಾಡುತ್ತ, ಕಡೆಗೆ ತನಗೆ ಭಗವಂತನಿಂದ ಅನುಗ್ರಹಿತವಾದ "ಧ್ರುವ ಪದವಿ"ಯನ್ನು ಪಡೆದು,"ಧ್ರುವ ತಾರೆ" ಯಾಗಿ ಇಂದಿಗೂ ನಕ್ಷತ್ರ ರೂಪದಲ್ಲಿ ಪ್ರಕಾಶಿಸುತ್ತಿದ್ದಾನೆ.


ಆಕರ: ವಿಷ್ಣು ಪುರಾಣ





 




Rate this content
Log in