ಸ್ವಾತಂತ್ರದ ಸೊಗಡು
ಸ್ವಾತಂತ್ರದ ಸೊಗಡು


ಬೆಂಗಳೂರಿನ ಅದೆಷ್ಟು ಹಳೆಯ ಬಡಾವಣೆಗಳಲ್ಲಿ ಅದು ಒಂದು; ಎದೆ ಉಬ್ಬಿಸಿ ಹೇಳಿಕೊಳ್ಳುವತ್ತದ್ದೇನು ಅಲ್ಲಿರಲಿಲ್ಲ. ರಸ್ತೆಯ ಎರಡು ಬದಿಯಲ್ಲಿ ಅಂಗಡಿಗಳ ಸಾಲು, ಹೂವು, ಹಣ್ಣು, ತರಕಾರಿ, ಬಳೆ,ಹಾರ್ಡ್ವೇರ್, ಎಲೆಕ್ಟ್ರಿಕಲ್ ವಸ್ತುಗಳು, ಹೀಗೆ, ಅಲ್ಲಿ ಮಾರಾಟಕ್ಕಿರದ ವಸ್ತುಗಳೇ ಇರಲಿಲ್ಲ.
ರಸ್ತೆಗಳು ಬಹಳವೇ ಅಧ್ವಾನವಾಗಿದ್ದವು; ಕೆಲವು, ಹಳ್ಳಗಳಂತೋ ಅಲ್ಲಿ ಓಡಾಡುತ್ತಿದ್ದ, ಆಟೋ ಗಳನ್ನೇ ನುಂಗುವಷ್ಟು ದೊಡ್ಡದಿದ್ದವು. ಇನ್ನು, ಸ್ಕೂಟರ್ ಸವಾರರೊ, ಹಳ್ಳ ಕೊಳ್ಳಗಳನ್ನು ತಪ್ಪಿಸಿಕೊಂಡು ಓಡಿಸಲು ಹರ ಸಾಹಸ ಪಡುತ್ತಿದ್ದರು.
ದೊಡ್ಡದಾದ ಹಳ್ಳವೊಂದನ್ನು ಹೇಗೋ ತಪ್ಪಿಸಿಕೊಂಡು. ರಸ್ತೆ ಬದಿಯಲ್ಲಿ ನನ್ನ ಸ್ಕೂಟರ್ ನಿಲ್ಲಿಸಿ, ಮುಖದಿಂದ ಸುರಿಯುತ್ತಿದ್ದ ಬೆವರನ್ನು ಒರೆಸಿಕೊಂಡು, ಅತ್ತಿತ್ತ ನೋಡಿದೆ. ಅಂದು ಆಗಸ್ಟ್ 15!
ಸ್ವತಂತ್ರ ದಿನಾಚರಣೆಯ ಸಂಭ್ರಮ ಎಲ್ಲೆಡೆ ಎದ್ದು ಕಾಣುತಿತ್ತು.
ರಸ್ತೆಬದಿಯ ಅಂಗಡಿಗಳು, ತ್ರಿವರ್ಣ ಧ್ವಜವನ್ನು ಹೆಮ್ಮೆಯಿಂದ ಎರಡು ಬದಿ ಕಟ್ಟಿದ್ದರೆ, ಮುಖ್ಯ ರಸ್ತೆಯ ಪಕ್ಕದ ರಸ್ತೆ ಬಂದ್ ಮಾಡಲಾಗಿತ್ತು; ದೊಡ್ಡ ಶಾಮಿಯಾನ, ಮುಂದೆ, ದೊಡ್ಡ ಕಂಬಕ್ಕೆ ಕಟ್ಟಿದ್ದ ತ್ರಿವರ್ಣ ಧ್ವಜ ಅದರ ಮುಂದೆ ದೊಡ್ಡದಾಗಿ ರಂಗೋಲಿಯಿಂದ ಬರೆದಿದ್ದ ಭಾರತದ ನಕ್ಷ!
ಪಾಕಿಸ್ತಾನ, ಬರ್ಮಾ, ರಷ್ಯಾ ಎಲ್ಲ ರಾಷ್ಟ್ರಗಳಿಂದ ಸ್ವಲ್ಪ ಜಾಗವನ್ನು, ಬಿಂದಾಸ್ ಆಗಿ ತೆಗೆದು, ಬರೆದಿದ್ದ ಆ ನಕ್ಷೆ ನಿಜವಾದ ರಾಷ್ಟ್ರವಾದಿಯ ಎದೆ ಉಬ್ಬುವಂತೆ ಮಾಡುತಿತ್ತು.
ರಸ್ತೆ ತುಂಬಾ ವಾಹನಗಳು ಹರಿದಾಡುತ್ತಿದ್ದವು; ಎಲ್ಲ ಸ್ಕೂಟರ್, ಕಾರು ಹಾಗು ಟೆಂಪೋಗಳ ಮೇಲೆ ತ್ರಿವರ್ಣ ಧ್ವಜ ಹಾರಾಡುತ್ತಿತ್ತು; ಸ್ವತಂತ್ರ ದಿನಾಚರಣೆಯ ನಿಜವಾದ ಸಂಭ್ರಮ ಎದ್ದು ಕಾಣುತಿತ್ತು.
ಅಲ್ಲೇ ನಿಂತು ನೋಡುತಿದ್ದ ನನಗೆ, ಏನು ಶಬ್ದ ಕೇಳಿಸಿದಂತಾಗಿ, ತಿರುಗಿ ನೋಡಿದೆ. ಸುಮಾರು, 8 ವರ್ಷದ ಬಾಲಕ, ಕೇವಲ ಚಡ್ಡಿ ಮಾತ್ರ ಹಾಕಿಕೊಂಡು, ಬರಿದಾದ ಎದೆಯುಬ್ಬಿಸಿ, ಬಾಯಿಂದ ಶಬ್ದಮಾಡುತ್ತ, ತನ್ನ ಕಲ್ಪನೆಯ ಸ್ಕೂಟರ್ ಓಡಿಸಿಕೊಂಡು ಬಂದು ನನ್ನ ಪಕ್ಕ ನಿಲ್ಲಿಸಿದ; ಆದರೆ, ಬಾಯಿಂದ ಬರುವ ಶಬ್ದಮಾತ್ರ ನಿಲ್ಲಲಿಲ್ಲ. ಸ್ಕೂಟರ್ ಐಡಲಿಂಗ್ ನಲ್ಲಿತ್ತು.
ಮೂಗಿನಿಂದ ಬರುತಿದ್ದ ಸಿಂಬಳ ಕೈಯಲ್ಲಿ ಒರೆಸಿಕೊಂಡು, ಎವೆ ಇಕ್ಕದೆ, ಅಲ್ಲಿ ಓಡಾಡುತ್ತಿದ್ದ ದ್ವಿಚಕ್ರವಾಹನಗಳ್ಳನೇ ನೋಡುತ್ತಿದ್ದ; ಅವನ ದೃಷ್ಟಿ ಬಿಳುತ್ತಿದ್ದಿದ್ದು ಆ ವಾಹನಗಳ ಮೇಲೆ ಕಟ್ಟಿರುತ್ತಿದ್ದ ತ್ರಿವರ್ಣ ಧ್ವಜದ ಮೇಲೆ!
ನನಗರ್ಥವಾಯಿತು; ಆ ಹುಡುಗನ ಸ್ಕೂಟರ್ ಮೇಲೆ ಕಟ್ಟಿಕೊಳ್ಳಲು ಅವನಿಗೂ ಒಂದು ಧ್ವಜ ಬೇಕಾಗಿತ್ತು. ಅವನ ವೇಷ ಭೂಷಣ ನೋಡಿದ ನನಗೆ ಕನಿಕರ ಉಂಟಾಯಿತು. ಧ್ವಜ ಕೊಂಡುಕೊಳ್ಳುವಷ್ಟು ಹಣ, ಅವನ ಹತ್ತಿರ ಖಂಡಿತ ಇರಲಿಲ್ಲ. ನನ್ನ ಜೀಬಿಗೆ ಕೈ ಹಾಕಿ, ಹಣ ಕೊಡುವ ಮನಸ್ಸಾದರೂ, ಕುತೂಹಲ ನನ್
ನನ್ನು ತಡೆಯಿತು; ನೋಡುವ ಏನು ಮಾಡುತ್ತಾನೆಂದು.
ಇದ್ದಕಿದ್ದಂತೆ, ಇಡೀ ಸಂಸಾರವನ್ನೇ, ಸ್ಕೂಟರ್ ಮೇಲೆ ಕುಳಿಸಿಕೊಂಡು ಬರುತಿದ್ದ ಒಬ್ಬ ವ್ಯಕ್ತಿ, ಹಳ್ಳ, ಕೊಳ್ಳಗಳನ್ನು, ತಪ್ಪಿಸಿಕೊಳ್ಳಲು, ತನಗೆ ಗೊತ್ತಿದ್ದ ವಿದ್ಯೆಯನ್ನೆಲ್ಲ ಖರ್ಚು ಮಾಡಿ, ಅವಸ್ಥೆಪಡುತ್ತಾ ಬರುತಿದ್ದ.
ಸ್ಕೂಟರ್ ಮುಂದೆ ಪ್ಲಾಸ್ಟಿಕ್ ತ್ರಿವರ್ಣ ಧ್ವಜ ಹಿಡಿದ ಒಬ್ಬ ಮಗ ನಿಂತಿದ್ದರೆ, ಹಿಂದೆ ಸೀಟ್ನಲ್ಲಿ ಕುಳಿತಿದ್ದ ಅವನ ಹೆಂಡತಿ, ಮತ್ತೊಂದು ಮಗುವನ್ನು ತೊಡೆಯ ಮೇಲೆ ಕುಳಿಸಿಕೊಂಡು, ಐಸ್ ಕ್ರೀಮ್ ತಿನ್ನಿಸುತಿದ್ದಳು. ಮಗು, ತನ್ನ ಪುಟ್ಟ ಕೈಗಳಲ್ಲಿ, ತ್ರಿವರ್ಣ ಧ್ವಜ ಹಿಡಿದು, ಆಟವಾಡುತಿತ್ತು.
ಸ್ಕೂಟರ್ ಚಾಲಕ, ಎಷ್ಟೇ ಪ್ರಯತ್ನ ಪಟ್ಟರು, ಒಂದು ಹಳ್ಳವನ್ನು ತಪ್ಪಿಸಲಾಗದೆ, ಸ್ಕೂಟರ್ ಹಳ್ಳದ ಒಳಕ್ಕಿಳುದು, ಜೋರಾಗಿ ಅಲುಗಾಡಿತು; ಮಗುವಿನ ಕೈಲಿದ್ದ ಪ್ಲಾಸ್ಟಿಕ್ ತ್ರಿವರ್ಣ ಧ್ವಜ ಹಾಗು, ತಾಯಿಯ ಕೈಲಿದ್ದ ಐಸ್ ಕ್ರೀಮ್ ಕೋನ್ ಎರಡೂ ಕೆಳೆಗೆ ಬಿದ್ದವು.
ತಾಯಿ ಅಸಹಾಯಕತೆಇಂದ ಹಿಂದೆ ತಿರುಗಿ ನೋಡುತ್ತಿದ್ದರೆ, ಮಗು, ಜೋರಾಗಿ ಅಳಲು ಪ್ರಾರಂಭಿಸಿತು. ಸ್ಕೂಟರ್ ಸವಾರ, ಸ್ಕೂಟರ್ ನಿಲ್ಲಿಸದೆ, ಮುಂದೆ ಓಡಿಸಿದ.
ರಸ್ತೆ ಬದಿಯಲ್ಲಿ ನಿಂತು ನೋಡುತಿದ್ದ, ಆ ಹುಡುಗ, ಎರಡು ಕಡೆಯಿಂದ ಬರುತಿದ್ದ ವಾಹನಗಳನ್ನು ಲೆಕ್ಕಿಸದೆ, ಓಡಿದ; ಮೊದಲು ನನಗನಿಸಿದ್ದು, ಅವನು, ತುಂಬಿದ್ದ ಐಸ್ ಕ್ರೀಮ್ ಕೋನ್ ಗಾಗಿ ಓಡುತಿದ್ದಾನೆಂದು. ಆದರೆ, ಆ ಹುಡುಗ ಅದನ್ನು ಕಡೆಗಣ್ಣಿನಿಂದ ಕೂಡ ನೋಡದೆ, ಕೆಳೆಗೆ ಬಿದ್ದಿದ್ದ ಪ್ಲಾಸ್ಟಿಕ್ ತ್ರಿವರ್ಣ ಧ್ವಜವನ್ನು ಹಿಡಿದು, ಓಡಿಬಂದ.
ಧ್ವಜ ಹಿಡಿದ ಆ ಹುಡುಗ, ಮತ್ತೇನನ್ನು ಹುಡುಕುತ್ತಾ, ರಸ್ತೆ ಬದಿಯಲ್ಲಿದ್ದ ಅಂಗಡಿಗಳನ್ನೇ ನೋಡುತ್ತಾ ಹೊರಟ. ಅಲ್ಲಾ ಅವನಿಗೆ ಬೇಕಿದ್ದ, ಧ್ವಜ ಸಿಕ್ಕಾಯಿತಲ್ಲ? ಮತ್ತೇನು ಬೇಕವನಿಗೆ? ಎಂದು ಯೋಚಿಸುತ್ತ, ಕೂತುಹಲ ತಡೆಯದಾಗದೆ, ಸ್ಕೂಟರ್ ಅಲ್ಲೇ ಬಿಟ್ಟು, ಅವನನ್ನೇ ಹಿಂಬಾಲಿಸಿದೆ.
ತಲೆಯೆತ್ತಿ ಮೇಲೆ ನೋಡುತ್ತಾ ಹೋಗುತಿದ್ದ ಆ ಹುಡುಗ, ಇದ್ದಕಿದ್ದಂತೆ ಬಾಗಿಲು ಹಾಕಿದ್ದ, ಒಂದು ಎಲೆಕ್ಟ್ರಿಕ್ ಅಂಗಡಿಯ ಮುಂದೆ ಕುಳಿತು ಏನನ್ನೋ ಹುಡುಕ ತೊಡಗಿದ.
ಸ್ವಲ್ಪ ಹೊತ್ತಿನ ನಂತರ, ಅವನ ಮುಖದಲ್ಲಿ ಮುಗುಳ್ನಗೆ ಕಂಡಿತು.
ಅವನ ಕೈಲಿತ್ತು ಎಲೆಕ್ಟ್ರಿಕ್ ಕೆಲಸದಲ್ಲಿ ಉಪಯೋಗಿಸುವ ಕೆಂಪು ಬಣ್ಣದ ಇನ್ಸುಲೇಷನ್ ಟೇಪ್!
ನೋಡುತ್ತಿದ್ದಂತೆ, ಅವನು, ಧ್ವಜದ ಕಡ್ಡಿಗೆ ಆ ಟೇಪನ್ನು ಸುತ್ತಿ, ಅಂಟಿರುವ ಎರಡು ಬದಿಯನ್ನು, ತನ್ನ ಬರಿದಾದ ಎದೆಗೆ ಅಂಟಿಸಿಕೊಂಡು ಎದ್ದು ನಿಂತವನೇ, ತನ್ನ ಸ್ಕೂಟರ್ ಸ್ಟಾರ್ಟ್ ಮಾಡಿ, ಜೋರಾಗಿ ಶಬ್ದ ಮಾಡುತ್ತಾ, ಹಿಗ್ಗುತ್ತಾ ಹೊರಟ ಆ ಹುಡುಗ.
ಸ್ವಾತಂತ್ರ ಹಾಗು ಅದರ ಮಹತ್ವದ ಬಗ್ಗೆ, ನೂರಾರು ಪುಟಗಳನ್ನೂ ಓದಿಯೂ ಸರಿಯಾಗಿ ಅರ್ಥವಾಗಿರದಿದ್ದ ನನಗೆ, ನಿಜವಾದ ಸ್ವಾತಂತ್ರ ಕಂಡಿದ್ದು ಅಂದುಆ ಹುಡುಗನ ಮುಗ್ಧ ಮುಖದಲ್ಲಿ.