Vijaya Bharathi.A.S.

Children Stories Classics Inspirational

4  

Vijaya Bharathi.A.S.

Children Stories Classics Inspirational

ಶಿಬಿ ಚಕ್ರವರ್ತಿ

ಶಿಬಿ ಚಕ್ರವರ್ತಿ

1 min
373



ಯಮುನಾ ನದಿಯ ದಡದಲ್ಲಿ ಉಶೀನರ ಎಂಬ ರಾಜನಿದ್ದನು. ಅವನು ಶಿಬಿ ವಂಶದವನಾಗಿದ್ದರಿಂದ ಅವನನ್ನು "ಶಿಬಿ ಚಕ್ರವರ್ತಿ" ಎಂದೂ ಸಹ ಕರೆಯುತ್ತಿದ್ದರು. ಈ ರಾಜ ದಾನಶೂರನಾಗಿದ್ದು,ತನ್ನ ಬಳಿ ಬೇಡಿ ಬಂದವರನ್ನು ಬರಿಗೈಯಲ್ಲಿ ಕಳುಹಿಸುತ್ತಿರಲಿಲ್ಲ. ಒಂದು ಬಾರಿ ಅವನು ಯಮುನಾ ನದಿಯ ದಡದಲ್ಲಿ ಮಹಾಯಾಗವೊಂದನ್ನು ನಡೆಸಿ, ಅಲ್ಲಿಗೆ ಬಂದವರೆಲ್ಲರಿಗೂ ಏನು ಕೇಳಿದರೂ ಇಲ್ಲವೆನ್ನದೆ ದಾನ ಮಾಡಿದನು. ಇವನು ಮಾಡಿದ ಈ ದಾನದ ವೈಭವವು ದೇವಲೋಕದ ಇಂದ್ರನವರೆಗೂ ಮುಟ್ಟಿತು. 


ಇಂದ್ರನಿಗೆ ಭೂಲೋಕದಲ್ಲಿರುವ ದಾನಚಿಂತಾಮಣಿ ಶಿಬಿ ಚಕ್ರವರ್ತಿಯನ್ನು ಪರೀಕ್ಷೆ ಮಾಡಬೇಕಿನಿಸಿತು. 

ಅವನು ಅಗ್ನಿಯನ್ನು ತನ್ನ ಸಹಾಯಕ್ಕೆ ಕರೆದನು.  ಇಂದ್ರ ಮತ್ತು ಅಗ್ನಿ ಇಬ್ಬರೂ ಪಕ್ಷಿಗಳ ರೂಪವನ್ನು ತಾಳಿದರು. ಇಂದ್ರ ಗಿಡುಗ ರೂಪ ಮತ್ತು ಅಗ್ನಿ ಪಾರಿವಾಳ ರೂಪವನ್ನು ಧರಿಸಿ, ಶಿಬಿ ಚಕ್ರವರ್ತಿಯನ್ನು ಪರೀಕ್ಷಿಸಲು ಭೂಲೋಕಕ್ಕೆಇಳಿದು ಬಂದರು. 


ಭೂಲೋಕದಲ್ಲಿ ಗಿಡುಗ ಪಾರಿವಾಳವನ್ನು ಅಟ್ಟಿಸಿಕೊಂಡು ಹೋಗುತ್ತಿದ್ದಾಗ, ಪಾರಿವಾಳವು ಶಿಬಿ ಮಹಾರಾಜನ ಹತ್ತಿರ ಬಂದು ಪ್ರಾಣಭಿಕ್ಷೆಯನ್ನು ಕೇಳಿತು. ಕೂಡಲೇ ಶಿಬಿಮಹಾರಾಜ, ಆ ಪಾರಿವಾಳದ ರಕ್ಷಣೆಯ ಭಾರ ಹೊರುವುದಾಗಿ ಅದಕ್ಕೆ ಮಾತು ಕೊಟ್ಟ. ಪಾರಿವಾಳವನ್ನು ಹುಡುಕುತ್ತಾ ಬಂದ ಗಿಡುಗ, ಶಿಬಿಯ ಜೊತೆಗೆ ಜಗಳ ಪ್ರಾರಂಭಿಸಿತು. ತನಗೆ ಸೇರಬೇಕಾದ ಆಹಾರವಾದ ಪಾರಿವಾಳವನ್ನು ಬಿಟ್ಟುಬಿಡುವಂತೆ ರಾಜನಲ್ಲಿ ಕೇಳಿತು. ಆದರೆ ತನ್ನ ರಕ್ಷಣೆಯಲ್ಲಿರುವ ಪಾರಿವಾಳವನ್ನು ತಾನು ಗಿಡುಗನಿಗೆ ಒಪ್ಪಿಸಲು ಸಾಧ್ಯವಿಲ್ಲವೆಂದು ಶಿಬಿ ಮಹಾರಾಜ ಹೇಳಿದಾಗ, ಗಿಡುಗವು, ಆ ಪಾರಿವಾಳಕ್ಕೆ ಸಮನಾದ ತೂಕದ ಮಾಂಸವನ್ನು ಶಿಬಿಯ ಮೈಯ್ಯಿಂದ ಕೊಡಬೇಕೆಂದು ಹೇಳಿದಾಗ, ಗಿಡುಗನ ಮಾತನ್ನು ಸಂತೋಷದಿಂದ ಒಪ್ಪಿಕೊಂಡ ಶಿಬಿ ಚಕ್ರವರ್ತಿ, ತಕ್ಕಡಿಯ ಒಂದು ಕಡೆ ಪಾರಿವಾಳವನ್ನು ಕೂರಿಸಿ, ಮತ್ತೊಂದು ಕಡೆಗೆ ತನ್ನ ಮೈಯನ್ನು ಕತ್ತರಿಸಿ ಮಾಂಸವನ್ನು ಹಾಕುತ್ತಾಹೋದ. 


ಎಷ್ಟು ಮಾಂಸ ಹಾಕುತ್ತಾ ಹೋದರೂ, ಪಾರಿವಾಳ ಮೇಲೆ ಏರದಿದ್ದಾಗ, ತಾನೇ ತಕ್ಕಡಿಯ ಮತ್ತೊಂದು ಬಳಿ ಕುಳಿತು, ತನ್ನ ದೇಹದಲ್ಲಿರುವ ಇಡೀ ಮಾಂಸವನ್ನು ಗಿಡುಗನಿಗೆ ದಾನ ಮಾಡಿದ.


ಶಿಬಿ ಚಕ್ರವರ್ತಿಯ ತ್ಯಾಗ ಹಾಗೂ ದಾನ ಬುದ್ಧಿಯನ್ನು ಕಣ್ಣಾರೆ ಕಂಡು ಮೆಚ್ಚಿದ, ಗಿಡುಗ ರೂಪದ ಇಂದ್ರ ಹಾಗೂ ಪಾರಿವಾಳ ರೂಪದ ಅಗ್ನಿ ಇಬ್ಬರಿಗೂ ತುಂಬಾ ಸಂತೋಷವಾಗಿ, ಅವರಿಬ್ಬರೂ ತಮ್ಮ ನಿಜರೂಪವನ್ನು ಶಿಬಿಗೆ ತೋರಿ, ಅವನಿಗೆ ಒಳ್ಳೆಯದಾಗಲಿ ಎಂದು ಹರಸಿ ದೇವಲೋಕಕ್ಕೆ ತೆರಳಿದರು.  ಇಂದಿಗೂ ಶಿಬಿಚಕ್ರವರ್ತಿಯ ಈ ದಾನ ಸುಪ್ರಸಿದ್ಧವಾಗಿದೆ.   

ಇಂತಹ ಮಹಾನ್ ದಾನ ಶೂರನನ್ನು ಪಡೆದ ಭಾರತಭೂಮಿ ನಿಜಕ್ಕೂ ಧನ್ಯಳೇ ಸರಿ.


ಆಕರ (ಮಹಾಭಾರತ)



Rate this content
Log in