ನಂಬಿಕೆ
ನಂಬಿಕೆ


ಒಮ್ಮೆ ಒಬ್ಬ ಯುವಕ ಕೆಲಸ ಇಲ್ಲದೆ ಪರದಾಡುತ್ತಿದ್ದ. ಯಾರಿಂದಲೋ ಪಕ್ಕದ ಊರಿನಲ್ಲಿ ಹೊಸದಾಗಿ ಪ್ರಾರಂಭವಾಗಿರುವ ಕಾರ್ಖಾನೆಯಲ್ಲಿ ಕೆಲಸಕ್ಕೆಬಹಳ ಜನರನ್ನ ತೆಗೆದು ಕೊಳ್ಳುತ್ತಾರೆಂಬ ವಿಷಯ ತಿಳಿಯಿತು. ಅಲ್ಲಿಗೆ ಸುಮಾರು ಐದು ಕಿಲೋ ಮೀಟರ್ ದೂರದ ಪ್ರಯಾಣ ಬಸ್ ಅಥವಾ ಬೇರೆ ವಾಹನಗಳ ಸೌಕರ್ಯ ಇರಲಿಲ್ಲ. ನಡೆದುಕೊಂಡು ಹೊರಟ. ರಣ ಬಿಸಿಲು ಕಿರಿದಾದ ರಸ್ತೆ ಬೇರೆ.
ನೆರಳಿಗೆ ಮರಗಳು ಹತ್ತಿರ ಇಲ್ಲ. ಸ್ವಲ್ಪ ದೂರ ನಡೆದು ವಿಶ್ರಾಂತಿ ತೆಗೆದುಕೊಳ್ಳಲು ಒಂದುಕಡೆ ಕುಳಿತುಕೊಂಡ. ಯಾರೋ ಹಿಂದೆ ನಿಂತಿರುವಂತೆ ಭಾಸ ವಾಗಿ ಹಿಂದೆ ನೋಡಿದ . ವೃದ್ಧರೊಬ್ಬರು ಇವನ ಬಗ್ಗೆ ವಿಚಾರಿಸಿ ಒಳ್ಳೆಯದಾಗಲಿ ಎಂದು ಹೇಳಿ ಅಲ್ಲೇ ಬಿದ್ದಿರುವ ಕೆಲವು ದಪ್ಪ ಕಲ್ಲುಗಳನ್ನ ಚೀಲದಲ್ಲಿ ಹಾಕಿ ಕೊಳ್ಳಲು ಹೇಳಿದರು. ಅದರ ಅವಶ್ಯಕತೆ ನಿನಗಿದೆ ತೆಗೆದುಕೋ ಅಂದಾಗ,ನನಗೆ ಈ ಬಿಸಿಲಲ್ಲಿ ನಡೆಯುವುದೇ ಕಷ್ಟ ವಾಗಿರುವಾಗ ಕಲ್ಲುಗಳನ್ನ ಎಲ್ಲಿ ಎತ್ತಿಕೊಂಡು ಹೋಗಲಿ. ಬೇಡಾಂತ ಹೊರಟುಬಿಟ್ಟ. ಇನ್ನೂ ಸ್ವಲ್ಪ ದೂರ ನಡೆದಮೇಲೆ ದೂರದಲ್ಲೊಂದು ಗುಡಿಸಲು ಕಂಡು, ಕುಡಿಯಲು ನೀರು ಸಿಗಬಹುದೆಂದು ಹೋದ ಅಲ್ಲಿ ಒಂದು ಮುದುಕಿ ಮಾತ್ರ ಇದ್ದು ಕೇಳುವ ಮೊದಲೇ ನೀರು ಕೊಟ್ಟಳು ಅಂತಹ ನೀರು ಅಲ್ಲಿಯವರೆಗೆ ಕುಡಿದೇ ಇಲ್ಲವೇನೋ ಅನಿಸಿತು. ಸ್ವಲ್ಪ ಹಾಗೇ ನಿದ್ದೆ ಮಾಡುವ ಮನಸಾಗಿ ಮಲಗಿಬಿಟ್ಟ. ಎಚ್ಚರವಾದಾಗ ಆ ಮುದುಕಿ ಎರಡು ಬಾಳೆಹಣ್ಣನ್ನು ಕೊಟ್ಟು ಪುಟ್ಟ ಪುಟ್ಟ ಕಲ್ಲುಗಳನ್ನ ಇವನ ಕೈ ಚೀಲದಲ್ಲಿ ತುಂಬುತ್ತಿದ್ದುದನ್ನ ನೋಡಿ ಬೆಚ್ಚಿದ. ಏಕೆ ಹೀಗೇ ಮಾಡ್ತಿದೀಯಾ ಎಂದರೆ ಮಾತನಾಡ್ತಿಲ್ಲ. ಅವಳಿಗೆ ಮಾತುಬರಲ್ಲ ಅಂತ ತಿಳಿದು ಚೀಲ ಕಿತ್ತುಕೊಂಡು ಕಲ್ಲುಗಳನ್ನ ಕೆಳಗೆ ಸುರಿದು ಹೊರಟುನಿಂತ. ಅವಳೆಲ್ಲೋ ಹುಚ್ಚು ಮುದುಕಿ ಇರಬೇಕು ಅಂತ ಅಲ್ಲಿಂದ ಹೊರಟ. ಎರಡು ಹೆಜ್ಜೆಹೋಗಿ ಹಿಂದೆ ತಿರುಗಿ ನೋಡಿದರೆ ಗುಡಿಸಲಾಗಲಿ ಮುದುಕಿಯಾಗಲಿ ಇಲ್ಲ. ಹೆದರಿ ಓಡಿದ. ಮುಖ್ಯ ರಸ್ತೆ ಸಿಗೋವರೆಗೂ ಓಡಿದ. ಅಲ್ಲಿ ಯಾರೋ ಒಬ್ಬರು ಸನ್ಯಾಸಿ ಇವನು ಹೆದರಿ ಓಡಿ ಬರುತ್ತಿದ್ದುದನ್ನ ಗಮನಿಸಿ ಹೆದರ ಬೇಡ ಅಲ್ಲಿಗೆ ಸಾಮಾನ್ಯವಾಗಿ ಯಾರೂ ಹೋಗಲ್ಲ ಪಾಪ ನೀನು ನೀರಿಗಾಗಿ ಹೋಗಿದ್ದೀಯೆ.
ನೀರು ಹೇಗಿತ್ತು ಅಂತ ಕೇಳಿದರು. ಇವನಿಗೆ ಆಶ್ಚರ್ಯ ಏಕೆ ಅಂತ ಕೇಳಿದ ಅದಕ್ಕೆ ಅವರು ಅವಳು ಮಾಯಾವಿ ಮುದುಕಿ ಮಾತನಾಡಲ್ಲ. ಅವಳು ಯಾರು ಅಲ್ಲಿಗೆ ಹೋದರೂ ನೀರು ಕೊಡ್ತಾಳೆ ಕುಡಿದರೆ ನಿದ್ದೆ ಬರುತ್ತೆ. ಅದಕ್ಕೆ ಕೇಳಿದೆ ಅಂದರು. ಹೌದು ನನಗೂ ಹಾಗೇ ಆಯ್ತು ಅಂದ. ನಂತರ ಆ ಸನ್ಯಾಸಿ ಪಕ್ಕದಲ್ಲಿದ್ದ ಒಂದು ಹುಣಿಸೆ ಮರದ ಕೆಳಗೆ ಸ್ವಲ್ಪಹೊತ್ತು ಕೂಡಲು ಹೇಳಿ ತಾನೂ ಕೂತುಕೊಂಡ. ಕೆಲ ಸಮಯದನಂತರ ಇವನನಿಗೆ ಮುದುಕಿಕೊಟ್ಟ ಬಾಳೆಹಣ್ಣು ನೆನೆಪಾಗಿ ತೆಗೆದು ಬಿಸಾಡುವನಿದ್ದ ಅಷ್ಟರಲ್ಲಿ ಬೇಡ ಬಿಸಾಡುವ ಹಾಗಿಲ್ಲ. ಅದನ್ನ ನೆಲದ ಮೇಲೆಯೂ ಇಡುವಹಾಗಿಲ್ಲ. ಇಲ್ಲಿಕೊಡು ಅಂತ ಹೇಳಿ ಮೇಲಕ್ಕೆ ಎಸೆದ ಸನ್ಯಾಸಿ. ಕೆಳಗೆ ಬೀಳಲೇ ಇಲ್ಲ. ಇವನಿಗೆ ಆಶ್ಚರ್ಯ. ಇಲ್ಲಿ ಎಲ್ಲರೂ ಮಾಯಾವಿಗಳೇ ಇದ್ದ ಹಾಗಿದೆ ಅಂತ ಹೆದರಿದ. ಹೊರಡುತ್ತೀನೆಂದು ಎದ್ದು ನಿಂತ. ಆಯ್ತು ನೀ ಹೊರಡು. ನಾನು ನಿಧಾನವಾಗಿ ಬರುತ್ತೀನಿ ಎಂದು ಹೇಳಿದರು.
ಹಿಂದೆ ತಿರುಗಿ ನೋಡಿದ. ಅವರ ಕಾವಿಬಟ್ಟೆ ಬಿಳಿಬಟ್ಟೆಯಂತ ಬದಲಾವಣೆ ಆಗಿತ್ತು. ಭಯ ಭೀತನಾದ. ವೇಗವಾಗಿ ನಡೆದ ಏನೂ ತಿಂದಿಲ್ಲದೆ ಬಹಳ ಸುಸ್ತು. ಹೇಗೋ ಕಾರ್ಖಾನೆ ಹತ್ತಿರಬಂದು ಬಿಟ್ಟಿದ್ದ. ಅವನ ಬಳಿ ಇದ್ದ ಕಾಸಿನಲ್ಲಿ ಒಂದು ಎಳೆನೀರು ಕುಡಿಯೋಣ ಅಂತ ಅಲ್ಲೇ ಕಾಣುತ್ತಿದ್ದ ಅಂಗಡಿಗೆ ಹೋದ. ಕಾಫಿ ಕುಡಿಯೋವಾಗ ಅವನ ಕೈಚೀಲ ಕಂಬಕ್ಕೆ ತಾಗಿ ಶಬ್ದ ವಾಯ್ತು. ತೆಗೆದು ನೋಡಿದ. ಎರಡು ಪುಟ್ಟಕಲ್ಲುಗಳು. ಆ ಮುದುಕಿ ದಪ್ಪ ಕಲ್ಲುಗಳನ್ನ ತುಂಬಿದಾಗ ಆ ಮುದುಕಿಯನ್ನ ಬೈದು ಎಲ್ಲವನ್ನ ಹೊರಹಾಕಿದ್ದ . ಆಗ ಅಕಸ್ಮಾತ್ ಅದರಲ್ಲಿ ಪುಟ್ಟಕಲ್ಲುಗಳು ಉಳಿದು ಬಿಟ್ಟಿದೆ. ನೋಡಿದರೆ ಅದು ಬೆಲೆಬಾಳುವ ವಜ್ರಗಳು. ಆಗ ಯೋಚಿಸಿದ ಮೊದಲು ದಪ್ಪ ಕಲ್ಲುಗಳನ್ನ ಬೇಡವೆಂದು ನಿರಾಕರಿಸಿದ್ದೆ ನಂತರ ಮುದುಕಿ ತುಂಬಿದ್ದ ಕಲ್ಲುಗಳನ್ನು ಹೊರಗೆ ಹಾಕಿದೆ ಎಂತಹ ತಪ್ಪು ಮಾಡಿದೆ ಆ ದಪ್ಪ ಕಲ್ಲುಗಳನ್ನ ಒಯ್ಯ ಬೇಕಿತ್ತು. ನಂಬಿಕೆ ಇಲ್ಲದೆ ಹೆದರಿದ್ದಕ್ಕೆ ಈ ಗತಿ ಅಂದುಕೊಂಡು ಬಹಳ ಕೊರಗಿದ.
(ಇದೊಂದು ಕಾಲ್ಪನಿಕ ಕಥೆಯಾದರೂ ನಂಬಿಕೆಯ ಬೆಲೆಯನ್ನ ಸೂಚಿಸುತ್ತದೆ )