ಜೀವ ನದಿ
ಜೀವ ನದಿ
ಹರಿವ ನದಿ ರಾಶಿಯ ಒಮ್ಮೆ ಹಾಗೆ ನೋಡುವಾಗ ನನ್ನ ನಾನೇ ಮರೆತಂತೆ ಭಾವನೆಯ ಭಾಷೆಯು ಮನದಲ್ಲಿ ಹೂವಂತೆ ಅರಳಲು ಸುಗಂಧಕ್ಕೆ ಹೊಸ ಹೊಸ ಆಲೋಚನೆಗಳ ಮಧುರ ಸಂಚಿಕೆಗಳು ನೆನಪಿಗೆ ಬರಲು ಖಾತರಿಸುತ್ತದೆ.
ನಾನಿಂದು ಹೇಳಲು ಹೊರಟ ವಿಷಯ ನನ್ನ ಮನೆಯ ಎದುರಿನ ಹೊಳೆಯ ಬಗ್ಗೆ. ಸೂರ್ಯನಿಗೆ ಕನ್ನಡಿಯಂತೆ ಮೀನುಗಾರರಿಗೆ ಜೀವವಾಹಿನಿಯಾಗಿ ನಮ್ಮ ಗ್ರಾಮದ ಉಸಿರು ಹಸರಿನ ಮೂಲ ಹೆಸರು ನಮ್ಮ ಚಿತ್ತಾರಿ ನದಿ. ಈ ನದಿಯ ದಡದಲ್ಲಿ ಆಡಿದ ಆಟ ಒಂದಾ ಎರಡಾ ಪ್ರತಿ ಸವಿ ಸಂಜೆಯಲ್ಲಿ ನದಿತಟದಲ್ಲಿ ಕುಳಿತುಕೊಂಡರೆ ಸುಮಧುರ ಮಾರುತವು ತನುವನ್ನು ಸ್ಪರ್ಶಿಸಿದೊಡನೆ ಗಾಢ ನಿದ್ರೆಯ ಮಂಪರು ಆಹ್ವಾನಿಸುತ್ತದೆ. ಅಲ್ಲೇ ತೇಲಾಡುತ್ತಿದ್ದ ಮರದ ರೆಂಬೆಗೆ ಒಮ್ಮೆ ತಲೆ ಇಟ್ಟರೆ ಸುಖ ನಿದ್ರೆ ಸಮಯ ಕಳೆದದ್ದೇ ತಿಳಿಯದು. ಆದರೂ ನಿದ್ರೆಯ ಎಡೆಯಲ್ಲಿ ಕೆಲವೊಮ್ಮೆ ಸಣ್ಣ ಧ್ವನಿಯಲ್ಲಿ ಬೈಗುಳವು ಪ್ರತಿಧ್ವನಿಸಿ ಕಿವಿಯತ್ತ ಕೇಳುವುದು ಸರ್ವೇಸಾಮಾನ್ಯವಾಗಿತ್ತು. ಸಮಯ ಕಳೆದಂತೆ ಆ ಧ್ವನಿಯ ಸದ್ದು ನನ್ನ ಸನಿಹವೇ ಬಂದಂತಿತ್ತು . ಕಣ್ತೆರೆದು ಒಮ್ಮೆ ನೋಡುವಾಗ ಅಕ್ಕ ಉದ್ದದ ಬೆತ್ತವನ್ನು ಹಿಡಿದು ನಿಂತಿರುವಳು. ಅಯ್ಯೋ ನನ್ನ ಕಥೆ ಗೋವಿಂದ ಇಲ್ಲಿ ಇದ್ದರೆ ಉಳಿಗಾಲ ಇಲ್ಲ ಎಂದು ನನ್ನ ನಡೆ ಮನೆ ಕಡೆ ಎಂಬಂತೆ ಓಡಿಹೋದೆ . ಸರಸರನೆ ಹೆಜ್ಜೆ ಹಾಕಿದೆ . ಓಡುವ ಧಾವಂತದಲ್ಲಿ ಕೆಸರಲ್ಲಿ ಕಾಲಿಟ್ಟು ದೊಪ್ಪನೆ ಬಿದ್ದೆ . ಅಲ್ಲಿಂದ ಏಳುವಷ್ಟರಲ್ಲಿ ಅಕ್ಕ ಅಲ್ಲಿ ಪ್ರತ್ಯಕ್ಷಲಾಗಿದ್ದಳು. ಬೆತ್ತದಲ್ಲಿ ಸರಿ ಪೆಟ್ಟು ಕೊಟ್ಟು ಎರಡು ಬುದ್ದಿ ಮಾತು ಹೇಳಿದಳು . ಮಾತುಗಳನ್ನು ಕೇಳುವ ಪರಿಸ್ಥಿತಿಯಲ್ಲಿ ನಾನಿರಲಿಲ್ಲ ಏಕೆಂದರೆ ಹೊಡೆದ ಏಟಿಗೆ ಒಂದೇ ಸಮನೆ ಆಗಸ ತೂತದಂತೆ ನೀರ ಹನಿಯು ಕಣ್ಣಂಚಿನಲ್ಲಿ ಬರುತ್ತಿತ್ತು . ಅಲ್ಲಿಗೆ ಬಂದ ಅಮ್ಮ ಏನೇನೋ ಕಟ್ಟುಕತೆಗಳನ್ನು ಹೇಳಿ ನನ್ನನ್ನು ಸಮಾಧಾನಪಡಿಸುತ್ತಿದ್ದರು ಜೊತೆಗೆ ಭಯವನ್ನು ಕೂಡ. ಅದ್ರಲ್ಲಿ ಒಂದು ಕತೆ ಇಂದು ಚೆನ್ನಾಗಿ ನೆನಪಲ್ಲಿದೆ. ಅಲ್ಲಿ ಪ್ರೇತಾತ್ಮಗಳ ಓಡಾಟ ದುಷ್ಟಶಕ್ತಿಗಳು ಇದೆ ಅದಲ್ಲದೆ ಅಲ್ಲಿಗೆ ಒಬ್ಬರೇ ಹೋದರೆ ಪ್ರೇತ ಕಾಣುತ್ತದೆ ಅದು ನಿನ್ನನ್ನು ತಿನ್ನುತ್ತದೆ ಎಂದು ಒಂದೇ ಸಮನೆ ರೇಡಿಯೋ ಆನ್ ಮಾಡಿದಂತೆ ಹೇಳಲು ಶುರುಮಾಡಿದರು. ಅದನ್ನು ಕೇಳಿ ನನಗೂ ಭಯವಾಯಿತು ಆದರೆ ಇಂದು ಆ ಹಳೇ ಸಂಚಿಕೆಗಳನ್ನು ಒಮ್ಮೆ ಮೆಲುಕು ಹಾಕಿ ನೋಡುವಾಗ ನಗು ಬರುತ್ತದೆ. ಇಂದೂ ಕೂಡ ಬಿಡುವಿರುವ ವೇಳೆಯಲ್ಲಿ ಒಬ್ಬನೇ ನದಿ ಕಿನಾರೆಯತ್ತ ಹೋಗಿ ಸುಮ್ಮನೆ ಕುಳಿತುಕೊಳ್ಳುತ್ತೇನೆ. ಹೊಳೆಯ ಹೊಳೆಯುವ ಮೈಬಣ್ಣ ನೋಡುವಾಗ ಹರಿವ ನೀರಲ್ಲಿ ಬಿಟ್ಟ ಕಾಗದದ ದೋಣಿ ಸಾಲು , ಗಾಳಕ್ಕೆ ಸಿಕ್ಕಿಕೊಳ್ಳದ ಮೀನು, ಕೆಸರಾದ ಕಾಲು ಕೈಗಳನ್ನು ತೊಳೆದದ್ದು ಎಲ್ಲವೂ ಪ್ರತ್ಯಕ್ಷವಾಗುತ್ತದೆ.
ಚಿತ್ತಾರಿ ನದಿಯ ಸುಂದರ ಸಂಚಿಕೆಗಳು ಒಂದೊಂದು ಕೂಡ ಒಂದಕ್ಕಿಂತ ಒಂದು ಅದ್ಭುತ. ನದಿಯ ಸನಿಹದಲ್ಲಿ ಮನೆ ಇದ್ದುದರಿಂದ ಇದರ ಲಾಭ ನನಗೆ ಸಿಕ್ಕಿತು . ಮರ ಗಿಡಗಳಿಂದ ಸದಾ ಸೂಸುವ ಗಾಳಿ, ನಿತ್ಯಹರಿದ್ವರ್ಣದಲ್ಲಿರುವ ಹಸಿರ ರಾಶಿ ಹೊದ್ದಿರುವ ಬಯಲು ಸೀಮೆ, ಬರಿ ಮಳೆ ಬಂದ್ರೆ ಸಾಕು ತುಂಬುವ ಗದ್ದೆ ಅಲ್ಲಿ ಮೀನಿನ ಹುಡುಕಾಟ. ದೇವರೇ ಎಷ್ಟೊಂದು ಸವಿನೆನಪುಗಳ ಸಂತೆ ಕಂತೆ. ನಿಜ್ಜಕೂ ಹಳ್ಳಿ ಮನವೇ ಬಲು ಮೋಜು. ಧನ್ಯವಾದ ಚಿತ್ತಾರಿ ನದಿ
