ಇನಶಶಿ
ಇನಶಶಿ
ಅಂದು ರಾತ್ರಿ ಊಟದ ವೇಳೆಯಲ್ಲಿ ಎರಡು ವರ್ಷದ ಪುಟ್ಟ ತುಂಬಾ ಹಠ ಮಾಡುತ್ತಿದ್ದ . ಅವನಮ್ಮನಿಗೆ ಮಗುವಿಗೆ ಹೇಗೆ ಊಟ ಮಾಡಿಸುವುದೆಂದು ಗೊತ್ತಾಗಲಿಲ್ಲ. ಅಳುತ್ತಾ ಇದ್ದ ಪುಟ್ಟ ನನ್ನು ಅವನ ಅಪ್ಪ ನ ಬಳಿ ಕೊಟ್ಟು, ಮನೆಯ ಹೊರಗೆ ಬಂದು ಗೇಟ್ ಬಳಿ ನಿಂತಳು. ಅರ್ಧ ಗಂಟೆ ಯಿಂದ ಮಗುವನ್ನು ಸುಧಾರಿಸಿ ಸಾಕಾಗಿದ್ದ ಅವಳಿಗೆ, ಹೊರಗೆ ಬಂದಾಗ, ಹಾಯೆನಿಸಿತು. ಅವಳ ಹಾಗೇ ಆಶವನ್ನು ನೋಡಿದಾಗ, ಆಕಾಶದಲ್ಲಿ ಹುಣ್ಣಿಮೆ ಚಂದ್ರ ಇವಳನ್ನು ನೋಡಿ ನಗುತ್ತಿದ್ದ. ಆ ಪೂರ್ಣ ಚಂದ್ರ ಬಿಂಬವನ್ನು ನೋಡಿದ ಅವಳಿಗೆ
ತಟ್ಟನೆ ಒಂದು ಯೋಜನೆ ಹೊಳೆದು, ಸೀದಾ ಮನೆಯೊಳಗೆ ಹೋಗಿ, ಅಳುತ್ತಿದ್ದ ಪುಟ್ಟ ನನ್ನು ಕಂಕುಳಲ್ಲಿ ಹಾಕಿಕೊಂಡು, ಹೊರಗಡೆ ಬಂದು,
ಮಗುವಿಗೆ "ಚಂದಮಾಮ"ನನ್ನು ತೋರಿಸಿದಳು.
ಶುಭ್ರವಾದ ಆಕಾಶದಲ್ಲಿ ಹುಣ್ಣಿಮೆ ಚಂದಿರನನ್ನು ನೋಡಿದ ಪುಟ್ಟ, ಆಶ್ಚರ್ಯ ದಿಂದ ನೋಡುತ್ತಾ, ಕೈ ಮೇಲೆ ಎತ್ತಿ ಚಂದ್ರನ ಕಡೆ ತೋರಿಸಿ, ಅದು ಮೋಡದಲ್ಲಿ ತೇಲುತ್ತಾ ಹೋಗುವುದನ್ನು ನೋಡಿ, 'ಚಂದ ಮಾಮಾ ಬಾ ಬಾ " ಅಂತ ಚಪ್ಪಾಳೆ ತಟ್ಟಿ, ನಗುತ್ತಿದ್ದ.
ಪುಟ್ಟನ ಅಳು ನಿಂತಿದ್ದನ್ನು ನೋಡಿದ ಅಮ್ಮ, ತನ್ನ ಗಂಡನಿಗೆ ಊಟದ ತಟ್ಟೆ ತಂದುಕೊಡಲು ಹೇಳಿದಳು.
ಗಂಡ ಹೆಂಡತಿ ಇಬ್ಬರೂ ಸೇರಿ, ಪುಟ್ಟ ನಿಗೆ ಬೆಳದಿಂಗಳ ಊಟ ಮಾಡಿ ಮುಗಿಸಿದರು. ಮಗು ಚೆಂದ ಮಾಮನನ್ನು ನೋಡುತ್ತಾ ಹಾಗೆ ನಿದ್ರೆ ಮಾಡಿ ಬಿಟ್ಟಿತು .
ಮಗು ಮಲಗಿದ ನಂತರ ಅಮ್ಮ ಹಾಗೆಯೇ ನಿದ್ದೆ ಹೋದಳು.
ಬೆಳಿಗ್ಗೆ ಸೂರ್ಯನ ಕಿರಣ ರೂಮಿನ ಕಿಟಕಿಯಿಂದ
ಬಂದು ಪುಟ್ಟನ ಮುಖದ ಮೇಲೆ ಬೀಳುತ್ತಿತ್ತು.
ಸೂರ್ಯ ನ ಕಿರಣಗಳಿಗೆ ಎಚ್ಚರ ಗೊಂಡ ಪುಟ್ಟ ಪಕ್ಕದಲ್ಲಿ ಮಲಗಿದ್ದ ಅಮ್ಮ ನನ್ನು ಎಬ್ಬಿಸಿ,
"ಅಮ್ಮ ಚಂದಮಾಮ ಬಂದ. ಏಳಮ್ಮ್ಮಾ" ಎನ್ನುತ್ತಾ
ಅಮ್ಮ ನನ್ನು ಮುಟ್ಟಿ ಎಬ್ಬಿಸಿದಾಗಿ, ಅಮ್ಮನಿಗೆ ನಗು ಉಕ್ಕುಕ್ಕಿ ಬಂತು. ಮಗನನ್ನು ಹತ್ತಿರಕ್ಕೆ ಎಳಕೊಂಡು ಮುದ್ದು ಮಾಡುತ್ತಾ,
"ಪುಟ್ಟ ಇದು ಚಂದ ಮಾಮ ಅಲ್ಲ ಕಣೋ. ಸೂರ್ಯ ಮಾಮ. ಬೆಳಿಗ್ಗೆ ನಮ್ಮ ಜೊತೆಗೆ ಸೂರ್ಯ ಮಾಮ
ರಾತ್ರಿ, ಚಂದಕ್ಕಿ ಮಾಮ ಇರುತ್ತಾರೆ. ಗೊತ್ತಾ? ನಿನ್ನನ್ನೇ ನೋಡುತ್ತಾ ಇರ್ತಾರೆ. ಆದ್ದರಿಂದ ಇನ್ಮೇಲೆ ಗಲಾಟೆ ಮಾಡದೆ ನೀನು ಊಟ ತಿಂಡಿ ಮಾಡಬೇಕು. ಇಲ್ಲದಿದ್ದರೆ ಅವರಿಬ್ಬರೂ ನಿನ್ನ ಜೊತೆ ಟೂ ಟೂ ಟೂ ಬಿಟ್ಟು ಬಿಡುತ್ತಾರೆ" ಎನ್ನುತ್ತಾ, ಮಗನನ್ನು ಎತ್ತಿ ಕೊಂಡು
ರೂಮಿನಿಂದ ಹೊರಗೆ ಬಂದು, ಬಾಲ್ಕನಿಯಲ್ಲಿ ನಿಂತು ಆಗ ತಾನೇ ಉದಯವಾಗಿ ಮೇಲೇರುತ್ತಿದ್ದ
ಸೂರ್ಯನನ್ನು ಪುಟ್ಟನಿಗೆ ತೋರಿಸಿದಳು.
