Vijaya Bharathi

Children Stories Classics Others

4  

Vijaya Bharathi

Children Stories Classics Others

ಹಕ್ಕಿ ಹಾರಿತು

ಹಕ್ಕಿ ಹಾರಿತು

2 mins
180



ಅಂದು ಶಾಲೆಯಿಂದ ಮನೆಗೆ ಬಂದ ಹತ್ತು ವರ್ಷದ ಪುನೀತ್, ಶಾಲೆಯ ಬ್ಯಾಗ್ ಅನ್ನು ಒಂದು ಕಡೆ ಇಟ್ಟು ಶೂಸ್'ಗಳನ್ನೂ ಬಿಚ್ಚದೆ ,ಮನೆಯ ಹಿತ್ತಲ ಕಡೆ ಓಡಿದ. ಮಾವಿನ ಮರಕ್ಕೆ ತೂಗು ಹಾಕಿದ್ದ ಪಂಜರದ ಹತ್ತಿರ ಹೋಗಿ ನೋಡಿದಾಗ, ಅವನಿಗೆ ಗಾಬರಿಯಾಯಿತು. ಪಂಜರದಲ್ಲಿಟ್ಟಿದ್ಧ ಅವನ ಗಿಣಿಮರಿ ರಾಮ ಪಂಜರದಲ್ಲಿರಲಿಲ್ಲ. ಪಂಜರದ ಬಾಗಿಲು ತೆಗೆದಿರುವುದನ್ನು ನೋಡಿ, ಪುನೀತ್ ತನ್ನ ಅಮ್ಮನನ್ನು ಅಲ್ಲಿಂದಲೇ ಜೋರಾಗಿ ಕೂಗಿ ಕರೆದ..  


ಮಗ ಕೂಗಿದ ಅಬ್ಬರಕ್ಕೆ ಹೆದರಿ ಓಡಿ ಬಂದ ಅವನು ತಾಯಿ ಕುಸುಮ ಏನಾಯಿತೆಂದು ಕೇಳಿದಾಗ ಪಂಜರದ ಗಿಣಿ ರಾಮ ಕಾಣಿಸುತ್ತಿಲ್ಲವೆಂದು ಹೇಳಿದ ಪುನೀತ್ ಜೋರಾಗಿ ಅಳಲು ಪ್ರಾರಂಭಿಸಿದ. ಆಗ ಕುಸುಮ ಮಗನನ್ನು ಸಮಾಧಾನ ಮಾಡುತ್ತಾ ಅವನ ಕೈ ಹಿಡಿದುಕೊಂಡು ಹಿತ್ತಲೆಲ್ಲಾ ಸುತ್ತಾಡುತ್ತಾ ಗಿಣಿ ಎಲ್ಲಿಯಾದರೂ ಇದೆಯಾ ಎಂದು ಹುಡುಕಾಡಿದಳು. ತಾಯಿ ಮತ್ತು ಮಗನ ಕಣ್ಣಿಗೆ, ಕಳೆದು ಹೋದ ಗಿಣಿ ಕಾಣಲೇ ಇಲ್ಲ.


ತನ್ನ ಮುದ್ದಿನ ಗಿಣಿ ಮರಿಯನ್ನು ಕಾಣದೆ ತುಂಬಾ ಬೇಸರಗೊಂಡ ಪುನೀತ್ ಪಕ್ಕದ ಮನೆಯ ತನ್ನ ಗೆಳೆಯ ಚಿಂಟುವಿನ ಮನೆ ಗೆ ಓಡಿದ.

"ಚಿಂಟು,ಚಿಂಟು ನಮ್ಮ ಮನೆಯ ಗಿಣಿರಾಮ ನಿಮ್ಮ ಮನೆಗೇನಾದರೂ ಬಂದಿದ್ಯಾ? ಅದು ನಮ್ಮ ಮನೆಯ ಪಂಜರದಿಂದ ಹಾರಿ ಹೋಗಿದೆ. ಬಾ ನಿಮ್ಮ ಹಿತ್ತಲಿಗೆ ಹೋಗೋಣ", ಎಂದು ಹೇಳುತ್ತಾ ಚಿಂಟುವಿನ ಕೈ ಹಿಡಿದು ಎಳೆದುಕೊಂಡು ಅವನ ಮನೆ ಹಿತ್ತಲಲ್ಲಿ ಇದ್ದ ಪಂಜರದ ಕಡೆ ಓಡಿದ.


ಗೆಳೆಯರಿಬ್ಬರೂ ಚಿಂಟುವಿನ‌ ಮನೆಯ ಹಿತ್ತಲಿನಲ್ಲಿ ಕಟ್ಟಿದ್ದ ಪಂಜರದ ಬಳಿ ಹೋಗಿ ನೋಡಿದಾಗ ಅಲ್ಲಿ ಸೋಮು ಗಿಣಿಯೂ ಕಾಣದಿದ್ದಾಗ , ಇಬ್ಬರೂ ಪೆಚ್ಚಾಗಿ ನಿಂತು ತಮ್ಮ ತಮ್ಮ ಗಿಣಿ ಮರಿಗಳ ಬಗ್ಗೆಯೇ ಮಾತನಾಡುತ್ತಾ ಬೇಸರದಿಂದ ಸುತ್ತಲೂ ನೋಡುತ್ತಾ ನಿಂತಿದ್ದಾಗ, ಚಿಂಟುವಿನ ತಂದೆ ಇವರಿಬ್ಬರ ಬಳಿ ಬಂದು ಏನಾಯಿತೆಂದು ವಿಚಾರಿಸಿದರು. ಮಕ್ಕಳಿಬ್ಬರೂ ಒಕ್ಕೊರಲಿನಿಂದ ತಮ್ಮ ತಮ್ಮ ಗಿಣಿ ಮರಿಗಳು ಪಂಜರದಿಂದ ಹಾರಿ ಹೋಗಿರುವ ವಿಷಯವನ್ನು ತಿಳಿಸಿದಾಗ, ಚಿಂಟು ವಿನ ತಂದೆ ಇಬ್ಬರಿಗೂ ಸಮಾಧಾನ ಹೇಳಿದರು.

"ಮಕ್ಕಳೇ ಮನುಷ್ಯ ರಂತೇ ಪ್ರಾಣಿಗಳಿಗೂ ಬಂಧನದಲ್ಲಿರುವುದು ಇಷ್ಟವಾಗುವುದಿಲ್ಲ. ಹಾರುವ ಶಕ್ತಿ ಹೊಂದಿರುವ ಪಕ್ಷಿಗಳಿಗೆ ಸ್ವತಂತ್ರ ವಾಗಿ ಆಕಾಶದಲ್ಲಿ ಹಾರಾಡಿಕೊಂಡಿರುವುದು ಅವುಗಳ ಆಜನ್ಮ ಸಿದ್ಧ ಹಕ್ಕು. ಮನುಷ್ಯ ರಿಗಾಗಲೀ ಅಥವಾ ಪ್ರಾಣಿಗಳಿಗಾಗಲೀ ಸ್ವಾತಂತ್ರ್ಯ ತುಂಬಾ ಮುಖ್ಯ. ಹೀಗಾಗಿ ಅವಕಾಶ ಸಿಕ್ಕಾಗ ಪಕ್ಷಿಗಳೂ ಸಹ ಪಂಜರದಿಂದ ಹಾರಿ ಹೋಗಲು ಕಾಯುತ್ತಿರುತ್ತವೆ. ನಿಮ್ಮ ಗಿಣಿ ಮರಿಗಳು ಎಂದಾದರೊಂದು ದಿನ ಮತ್ತೆ ತಮ್ಮ ಈ ಗೂಡನ್ನು ಹುಡುಕಿಕೊಂಡು ಬರಲೂಬಹುದು. ನೀವಿಬ್ಬರೂ ಹೆಚ್ಚು ಬೇಜಾರು ಮಾಡಿಕೊಳ್ಳದೇ ನಿಮ್ಮ ನಿಮ್ಮ ಪಾಠಗಳ ಕಡೆ ಗಮನ ನೀಡಿ. ಈಗ ಸಧ್ಯಕ್ಕೆ ಕೈಕಾಲು ಮುಖ ತೊಳೆದು ಕೊಂಡು ತಿಂಡಿ ತಿನ್ನಿ. ಬನ್ನಿ ಮಕ್ಕಳೇ ಒಳಗೆ ಹೋಗೋಣ. "


ಇವರ ಮಾತುಗಳಿಂದ ಇಬ್ಬರಿಗೂ ಅಷ್ಟೊಂದು ಸಮಾಧಾನವಾಗಲಿಲ್ಲ, ಏಕೆಂದರೆ ಅವರ ಪ್ರೀತಿಯ ಗಿಣಿ ಮರಿಗಳು ಪಂಜರದಿಂದ ಹಾರಿ ಹೋಗಿದ್ದವು.


ಚಿಂಟುವಿನ ತಂದೆ ಇಬ್ಬರನ್ನೂ ಒಳಕ್ಕೆ ಕರೆದುಕೊಂಡು ಹೋದರು.

ಮಕ್ಕಳಿಬ್ಬರೂ ತಮ್ಮ ಪ್ರೀತಿಯ ಗಿಣಿಗಳ ಬಗ್ಗೆಯೇ

ಮಾತನಾಡಿಕೊಳ್ಳುತ್ತಾ ಪೇಚಾಡಿಕೊಳ್ಳುತ್ತಿರುವುದನ್ನು ದೂರದಿಂದಲೇ ಗಮನಿಸುತ್ತಾ ಇದ್ದ ಚಿಂಟುವಿನ ತಂದೆ, ತಮ್ಮ ಮನಸ್ಸಿನೊಳಗೇ "ಈ ಮಕ್ಕಳಿಗೇನು ಗೊತ್ತು ಸ್ವಾತಂತ್ರ್ಯ ದ ಬೆಲೆ" ಎಂದುಕೊಂಡರು.





Rate this content
Log in