ದೀಪಾವಳಿಯ ಸಿಹಿ ಅನುಭವ
ದೀಪಾವಳಿಯ ಸಿಹಿ ಅನುಭವ
ದೀಪಾವಳಿ ಎಂದಾಕ್ಷಣ ನೆನಪಾಗುವುದು ಪಟಾಕಿಗಳ ಸದ್ದು , ಹೊಸ ಉಡುಪಿನ ಖರೀದಿಯ ಭರಾಟೆ, ಸಿಹಿತಿನಿಸು ತಿನ್ನುವ ಗಮ್ಮತ್ತು, ಎಣ್ಣೆ ಸ್ನಾನದ ಮಜಾ ಇವುಗಳಿಗಿಂತ ತುಸು ಜಾಸ್ತಿ ಎಂಬಂತೆ ಮನೆ ಮುಂದೆ ದಾರಿತೋರಿಸುವ ಆರೋಗ್ಯಸುಖವನ್ನು ಕರುಣಿಸುವ ಲಕ್ಷ್ಮಿಯನ್ನು ಪ್ರೀತಿಯಿಂದ ಮನದಾಳದ ಭಕ್ತಿಯಿಂದ ಸ್ವಾಗತಿಸುವ ದೀಪಗಳ ಸಾಲು.
ದೀಪಾವಳಿ ನಮ್ಮ ಬಾಳಿಗೆ ಹೊಸ ಬೆಳಕನ್ನು ಚೆಲ್ಲುವ ಹಬ್ಬ. ಅದಕ್ಕೆ ಇದನ್ನು ಬೆಳಕಿನ ಹಬ್ಬ ಎಂದು ಸಹ ಕರೆಯುತ್ತಾರೆ.
ಬಾಳಿದಲ್ಲಿ ದೀಪಾವಳಿ ಬಂತೆಂದರೆ ಸಾಕು ಅಮ್ಮನಲ್ಲಿ ಪಟಾಕಿಗಾಗಿ ಹಠ ಹಿಡಿಯುತ್ತಿದ್ದೆ. ಆದರೆ ಅಪ್ಪ ಪಟಾಕಿ ತಂದರೂ ಪೂರ್ತಿ ನನಗೆ ಹೊಡೆಯಲು ಕೊಡುತ್ತಿರಲಿಲ್ಲ. ಕೇವಲ ನಕ್ಷತ್ರ ಕಡ್ಡಿ ,ಚಾಟಿ ಪಟಾಕಿ, ನೆಲ ಚಕ್ರವನ್ನು ಮಾತ್ರ ಕೊಡುತ್ತಿದ್ದರು. ಆದರೆ ನನಗೆ ಆ ಪಟಾಕಿಯ ಮೇಲೆ ಮೋಹ ಕಡಿಮೆ.ಅಪ್ಪ ಕೆಲಸಕ್ಕೆ ಹೋದಾಗ ಅಡಗಿಸಿಟ್ಟ ಪಟಾಕಿಯನ್ನು ಪತ್ತೆಹಚ್ಚಿ ಅದರಿಂದ ಲಕ್ಷ್ಮಿ ಪಟಾಕಿ, ಬಾಂಬ್ ಪಟಾಕಿಯನ್ನು ತೆಗೆದು ಅದನ್ನು ಹೊಡೆಯುತ್ತಿದೆ. ಆ ಸದ್ದಿಗೆ ಪಕ್ಕದ ಮನೆಯವರು ಬರುವುದುಂಟು.
ನಾನು ಮತ್ತು ಗೆಳೆಯರೊಂದಿಗೆ ಸೇರಿ ಪಟಾಕಿಯನ್ನು ಚೆನ್ನಾಗಿ ಹೊಡೆಯುತ್ತಿದ್ದೆವು. ಪಟಾಕಿ ಹೊಡೆಯುವಾಗ ಏನೋ ಒಂತರ ಖುಷಿ ಇನ್ನೊಂದು ಕಡೆಯಲ್ಲಿ ಕಳವಳ. ಅಪ್ಪ ಬಂದರೆ ಏನೆಂದು ಉತ್ತರ ಕೊಡಲಿ ಎಂದು. ಅಪ್ಪ ಪಟಾಕಿಯ ಡಬ್ಬಿ ನೋಡಿದಾಗ ಗೊತ್ತಾಗುತ್ತಿತ್ತು ಈ ನನ್ನ ಮಗ ಪಟಾಕಿ ತೆಗೆದಿದ್ದಾನೆ ಎಂಬ ವಿಚಾರ. ಆದರೂ ಅವರು ಏನೂ ಹೇಳುತ್ತಿರಲಿಲ್ಲ. ಬದಲಾಗಿ ನಾಲ್ಕು ಹೊಡೆಯುತ್ತಿದ್ದರು ಮಾತ್ರ. ಆದರೂ ಆ ಪೆಟ್ಟು ಹೊಡೆಯುವ ಪಟಾಕಿಯ ಸದ್ದಿಗಿಂತ ಕಡಿಮೆಯಿತ್ತು. ಆದರೆ ನೋವು ಮಾತ್ರ ಮೂರು ದಿವಸ ಇರುವಂತಿತ್ತು. ಈಗಲೂ ನಾನು ಪಟಾಕಿ ಹೊಡೆಯುವಾಗ ಅಪ್ಪ ನನಗೆ ಹೊಡೆದ ಪೆಟ್ಟು ನೆನಪಾಗುತ್ತದೆ. ಈಗ ನನಗಿಷ್ಟದ ಪಟಾಕಿ ಮುಂಜಾಗ್ರತಾ ಕ್ರಮವನ್ನು ಕೈಗೊಂಡು ಹೊಡೆಯುತ್ತೇನೆ.
