ಚತುರ ಇಲಿ
ಚತುರ ಇಲಿ
ಸೋಮಣ್ಣ ಒಬ್ಬ ರೈತ. ಅವನ ಮನೆಯ ಧಾನ್ಯಗಳ ಕಣಜದಲ್ಲಿ ಇಲಿಗಳು ಸೇರಿಕೊಂಡು ಧಾನ್ಯವನ್ನೆಲ್ಲಾ ತಿಂದು ಲೂಟಿ ಮಾಡುತ್ತಿದ್ದವು. ಇಲಿಗಳ ಕಾಟವನ್ನು ತಾಳಲಾರದೆ, ಅವನು ತನ್ನ ಮನೆಗೆ ಒಂದು ಬೆಕ್ಕನ್ನು
ತಂದನು. ಆ ಬೆಕ್ಕು, ರೈತ ಕೊಡುವ ಹಾಲನ್ನು ಕುಡಿಯುವುದರ ಜೊತೆಗೆ ಇಲಿಗಳನ್ನು ಒಂದೊಂದಾಗಿ ಹಿಡಿದು ತಿನ್ನುತ್ತಾ ಕೊಬ್ಬಿತು. ಇಲಿಗಳ ಕಾಟದಿಂದ ನೆಮ್ಮದಿ ತಾಳಿದ ಸೋಮಣ್ಣ. ಆದರೆ ಇಲಿಗಳಿಗೆ ತಮ್ಮ ಸಂತಾನ ನಾಶವಾಗುತ್ತಿರುವುದು ತಿಳಿದು, ತಮ್ಮ ರಕ್ಷಣೆಗಾಗಿ ಅವುಗಳು ಒಂದು ಉಪಾಯವನ್ನು ಹುಡುಕಿದವು.
ಒಂದು ದಿನ ಒಂದು ಹಿರಿಯ ಇಲಿ ಆ ಬೆಕ್ಕಿನ ಹತ್ತಿರ ಬಂದು, ತಮ್ಮ ಅಹವಾಲನ್ನುಹೇಳಿಕೊಂಡು ,ಇನ್ನು ಮುಂದೆ, ಸರದಿಯಂತೆ ಬೆಕ್ಕಿನ ಬಳಿಗೆ ಆಹಾರವಾಗಿ ಬರುತ್ತೇವೆ ಎಂದಾಗ ,ಆ ಬೆಕ್ಕು ಒಪ್ಪಿಕೊಂಡಿತು.
ಈ ಒಪ್ಪಂದದಂತೆ, ದಿನಕ್ಕೆ ಒಂದು ಇಲಿ ಬೆಕ್ಕಿಗೆ ಆಹಾರವಾಗಿ ಬರುತ್ತಿದ್ದವು.
ಒಂದು ದಿನ ಒಂದು ಪುಟ್ಟ ಇಲಿಯ ಸರದಿ ಬಂದಾಗ, ಅದು ಬೆಕ್ಕಿನ ಬಳಿ ಬಂದು,
" ನಾನು ಇಂದು ನಿನ್ನ ಆಹಾರವಾಗಿ ಬಂದಿದ್ದೇನೆ. ಆದರೆ ನನ್ನದೊಂದು ಕೋರಿಕೆ " ಎಂದಿತು.
"ಏನು ನಿನ್ನ ಕೋರಿಕೆ?" ಬೆಕ್ಕು ಕೇಳಿತು .
"ನಾನು ಆ ಮಾವಿನ ಮರದ ಬುಡದಲ್ಲಿ ನಿನ್ನ ಆಹಾರವಾಗುತ್ತೇನೆ. ಅಲ್ಲಿಗೆ ಹೊಗೋಣ" ಮರಿ ಇಲಿ ಹೇಳಿದಾಗ, ಅದರ ಮನವಿಯಂತೆ, ಬೆಕ್ಕು ಅದರ ಜೊತೆ
ಮಾವಿನಮರದ ಹತ್ತಿರ ಹೋಯಿತು.
ಅಲ್ಲಿಗೆ ಹೋದಾಗ, ಅಲ್ಲಿ ಒಂದು ನಾಯಿ ಮಲಗಿದ್ದು, ಇಲಿಯ ಮರಿ ಆ ನಾಯಿಯ ಬೆನ್ನನ್ನೇರಿ ಕುಳಿತು,
ಬೆಕ್ಕನ್ನು ಕರೆಯಿತು. ಹಸಿದ ನಾಯಿ, ಬೆಕ್ಕನ್ನು ನೋಡಿ ಎದ್ದು ನಿಂತಾಗ, ಪುಟ್ಟ ಇಲಿ ಮರಿ ಮೆಲ್ಲಗೆ ಬಿಲವನ್ನು ಸೇರಿತು. ಇಷ್ಟು ದಿನಗಳು ತನ್ನ ಆಹಾರಕ್ಕಾಗಿ ಇಲಿಗಳನ್ನು ತಿನ್ನುತ್ತಿದ್ದ ಆ ಬೆಕ್ಕು, ಅಂದು ನಾಯಿಗೆ ಆಹಾರವಾಗಿ ಹೋಯಿತು. ಹಸಿದ ನಾಯಿ ಆ ಬೆಕ್ಕನ್ನು ತಿಂದು ಮುಗಿಸಿತು. ಚತುರ ಇಲಿ ತನ್ನ ಪ್ರಾಣವನ್ನು ಉಳಿಸಿಕೊಂಡಿತು.
ನೀತಿ: ಅತ್ಯಂತ ಕಷ್ಟದ ಸಮಯದಲ್ಲೂ ನಮ್ಮ ಬುದ್ಧಿ ನಮ್ಮ ಕೈಯಲ್ಲಿ ಇರಬೇಕು.
