ಅಜ್ಜಿ ಮನೆ ದೋಸೆ
ಅಜ್ಜಿ ಮನೆ ದೋಸೆ
ಒಂದಾನೊಂದು ಊರಿನಲ್ಲಿ ಸೀತಮ್ಮ ಎಂಬ ಹಣ್ಣು ಹಣ್ಣು ಮುದುಕಿ ವಾಸವಾಗಿದ್ದಳು. ಅವಳಿಗೆ ಒಂದು ಚಿಕ್ಕದಾದ ಡಾಬ ಇತ್ತು. ಅವಳು ದಿನಾಲು ರುಚಿರುಚಿಯ ತಿನಿಸುಗಳನ್ನು ಸಿದ್ಧಪಡಿಸುತ್ತಿದ್ದಳು . ಅವಳು ಮಾಡಿದ ದೋಸೆಯನ್ನು ಸವಿಯಲು ಹತ್ತೂರಿನ ಜನ ಬರುತ್ತಿದ್ದರು.
ಹೀಗೇ ದಿನಗಳು ಕಳೆದಂತೆ ಮೊಮ್ಮಗನ ನೋಡುವ ಬಯಕೆ ಸೀತಮ್ಮನಿಗೆ ಅತಿಯಾಯ್ತು. ಮೊಮ್ಮಗನ ನೋಡುವ ಸಲುವಾಗಿ ಸಿಟಿಬಸ್ ಹತ್ತಿಯೇ ಬಿಟ್ಟಳು. ಸಿಟಿ ತುಂಬಾ ಸುತ್ತಿ ಸುತ್ತಿ ಕೊನೆಗೆ ಹರಸಾಹಸಪಟ್ಟು ಮಗನ ಮನೆಗೆ ಹೋದಳು. ಅಲ್ಲಿ ತನ್ನ ಮೊಮ್ಮಗ ರಾಮುವನ್ನು ಕಂಡು ಸಂತಸವೋ ಸಂತಸ. ಮಗನು ಓಡೋಡಿ ಬಂದು ತಾಯಿಯ ಕಾಲಿಗೆ ಬಿದ್ದು ನಮಸ್ಕರಿಸಿದನು. ಆ ರಾಮು ಅಜ್ಜಿಯೊಂದಿಗೆ ಬೇಗನೆ ಬೇರೆತ. ಅದುವರೆಗೂ ಪಿಜ್ಜಾ ಬರ್ಗರ್ ಅಂತ ಸವಿದ ಅವನ ನಾಲಿಗೆ ಏನೋ ಹೊಸ ರುಚಿಯನ್ನು ಹುಡುಕುತ್ತಿತ್ತು. ಅಜ್ಜಿಯಲ್ಲಿ ಈ ಕೋರಿಕೆ ಕೇಳಿಕೊಂಡಾಗ ಅಜ್ಜಿ ಬಿಸಿಬಿಸಿಯಾದ ದೋಸೆ ಮಾಡಿಕೊಟ್ಟಳು. ಅಜ್ಜಿ ಮಾಡಿದ ದೋಸೆಯನ್ನು ರಾಮು ಗಬಗಬನೆ ತಿಂದನು. ಅಜ್ಜಿಯ ಕೈ ರುಚಿಗೆ ಮೊಮ್ಮಗ ಸೋತುಹೋದನು. ಅಜ್ಜಿಯ ದೋಸೆ ಸವಿದ ಅವನು ಇದು ಪಿಜ್ಜಾ ಬರ್ಗರ್ ಗಿಂತ ಎಷ್ಟು ರುಚಿಕರ ಅಜ್ಜಿ ಎಂದು ಅಜ್ಜಿಯ ಕೈರುಚಿಯನ್ನು ಕೊಂಡಾಡಿದನು. ನೀನು ಇನ್ನು ಮುಂದೆ ನನ್ನ ಜೊತೆ ಇರು ಎಂದು ಒತ್ತಾಯಿಸಿದ. ಅಜ್ಜಿ ಮೊಮ್ಮಗನ ಆಟ-ಪಾಠ ನೋಡುತ್ತಾ ಸಂತಸದಿಂದ ಅಲ್ಲೇ ಸ್ವಲ್ಪ ಕಾಲ ಕಳೆದಳು ಸ್ವಲ್ಪ ದಿನದ ಬಳಿಕ ಹಳ್ಳಿಗೆ ಹಿಂತಿರುಗಿದಳು.
