STORYMIRROR

Vijaya Bharathi.A.S.

Children Stories Drama Others

4  

Vijaya Bharathi.A.S.

Children Stories Drama Others

ಅಜ್ಜ ಅಜ್ಜಿ ಮೊಮ್ಮಕ್ಕಳು

ಅಜ್ಜ ಅಜ್ಜಿ ಮೊಮ್ಮಕ್ಕಳು

2 mins
515

ನಾನ್ ಸ್ಟಾಪ್ ನವೆಂಬರ್ 3 

ದಿನ 14

ವಿಷಯ :ಮಕ್ಕಳು 


ಅಜ್ಜ ಮತ್ತು ಮೊಮ್ಮಕ್ಕಳು


ಮಕ್ಕಳಿಗೆ ಬೇಸಿಗೆ ರಜ ಬಂದ ಕೂಡಲೇ ಊರಿನಿಂದ ಬರುವ ಅಜ್ಜನ ಪತ್ರಕ್ಕಾಗಿ ಕಾಯುತ್ತಿದ್ದರು

ಬೆಂಗಳೂರಿನಲ್ಲಿದ್ದ ಅವರ ಮೊಮ್ಮಕ್ಕಳು. ರಾಮಚಂದ್ರ ರಾಯರಿಗೆ ಮಕ್ಕಳೆಂದರೆ ತುಂಬಾ ಪ್ರೀತಿ. ಆದರೆ ಈಗ ಮಗನ ಎರಡು ಮಕ್ಕಳು, ಮಗಳ ಎರಡು ಮಕ್ಕಳು ಎಲ್ಲರೂ ಬೆಂಗಳೂರಿನಲ್ಲಿರುವುದರಿಂದ, ಊರಿನಲ್ಲಿ ಅವರು ಮತ್ತು ಅವರ ಹೆಂಡತಿ ಕಮಲಮ್ಮೆ ಇಬ್ಬರೇ ಇದ್ದು ಬೇಸರವಾಗುತ್ತಿತ್ತು. ಹೀಗಾಗಿ ಬೇಸಿಗೆ ರಜೆಯಲ್ಲಿ ತಮ್ಮ ಮೊಮ್ಮಕ್ಕಳನ್ನು ಸುರಪುರಕ್ಕೆ ಕಳುಹಿಸಲೇ ಬೇಕೆಂದು ತಮ್ಮ ಇಬ್ಬರು ಮಕ್ಕಳಿಗೂ ತಾಕೀತು ಮಾಡುತ್ತಿದ್ದರು. 

ಅಜ್ಜನ ಆದೇಶದಂತೆ, ಅವರ ಮೊಮ್ಮಕ್ಕಳು ಬೇಸಿಗೆ ರಜ ಪೂರ್ತಿ ಅಜ್ಜನ ಮನೆಯಲ್ಲಿ ಹಾಜರ್. ಎಲ್ಲರೂ ಸೇರಿ, ಆಡಿ ಕುಣಿದು, ನಲಿದು ಸಂತೋಷವಾಗಿ ಕಾಲ ಕಳೆಯುತ್ತಿದ್ದರು.


ಎಂದಿನಂತೆ ಈ ಬಾರಿಯೂ ನಾಲ್ಕು ಮೊಮ್ಮಕ್ಕಳೂ ಅಜ್ಜನ ಸುರಪುರಕ್ಕೆ ಹೊರಟರು. ಅವರ ಪಾಲಿಗೆ ಅದು ನಿಜವಾಗಿಯೂ ಸುರಪುರವೇ ಆಗಿತ್ತು. ಹಳ್ಳಿಯ ದೊಡ್ಡ ತೊಟ್ಟಿಯ ಮನೆ, ವಿಶಾಲವಾದ ಹಜಾರ, ನಾಲ್ಕು ಹರವೊಲೆ ಇರುವ ದೊಡ್ಡ ಅಡುಗೆ ಮನೆ, ಮನೆಯ ಹಿತ್ತಲಿನಲ್ಲಿರುವ ಮಾವು, ಹಲಸು, ಪೇರಲಮರಗಳು, ಎರಡು ಹಸುಗಳಿರುವ ಕೊಟ್ಟಿಗೆ. ಮಕ್ಕಳಿಗೆ ಎಲ್ಲವೂ ಹೊಸತಾಗಿ ಕಾಣುತ್ತಿದ್ದವು. ಹಳ್ಳಿಯಲ್ಲಿ ಎಲ್ಲಿ ಹೋದರೂ ಭಯವಿಲ್ಲ, ಹೇಗೆ ಆಟ ಆಡಿದರೂ ತಡೆಯುವವರಿಲ್ಲ, ಎಲ್ಲರೂ ಪರಿಚಿತರೆ. ಯಾರ ಮನೆಗೆ ಹೋದರೂ, ಈ ಹುಡುಗರಿಗೆ ರಾಜಾತಿಥ್ಯ. ತುಂಬಾ ಸಂತೋಷದಿಂದ ಅಡ್ಡಾಡುತ್ತ, ಅಜ್ಜಿ ಮಾಡಿಕೊಡುವ ಸಣ್ಣ ಅಕ್ಕಿ ಅನ್ನ, ಕಾಯಿಪಲ್ಲೆಗಳು, ಕಾಳು ಸಾರು, ಉಬ್ಬು ರೊಟ್ಟಿ, ಕೆನೆ ಮೊಸರು, ಘಟ್ಟೀ ತುಪ್ಪ,ಚಕ್ಕುಲಿ ಕೋಡುಬೆಳೆ ಉಂಡೆಗಳು, ನೊರೆಹಾಲು,ಬಗೆಬಗೆ ರುಚಿಯ ಸಿಹಿ ತಿಂಡಿ ತಿನುಸುಗಳು, ತೋಟದಿಂದ ಬರುವ ರಸಪೂರಿ ಮಾವಿನಹಣ್ಣು, ಮನೆಯಲ್ಲಿ ಬಿಡುವ ಹಲಸಿನ ಹಣ್ಣೂ, ಸೀಬೆ ಹಣ್ಣು .....ಹೀಗೆ ಅಜ್ಜನ ಮನೆಯಲ್ಲಿ ಎಲ್ಲವೂ ಚಂದವಿರುತ್ತಿತ್ತು ಮಕ್ಕಳಿಗೆ. 


ಕುಶಲ್ ,ಕುಂತಿ, ಕರನ್, ಕರಿಷ್ಮಾ ಎಲ್ಲ ಮೊಮ್ಮಕ್ಕಳಿಗೂ ಅಜ್ಜನ ಬಳಿ ಕುಳಿತು ಕಥೆ ಕೇಳುವುದೆಂದರೆ ತುಂಬಾ ಪ್ರೀತಿ. ರಾತ್ರಿಯ ಊಟವಾದ ಮೇಲೆ ಮೊಮ್ಮಕ್ಕಳೆಲ್ಲರನ್ನೂ ಕೂರಿಸಿಕೊಂಡು ಪ್ರತಿದಿನವೂ, ಪೌರಾಣಿಕ,ಐತಿಹಾಸಿಕ, ಕಥೆಗಳನ್ನು ಹೇಳಿ, ಅದರಲ್ಲಿ ಬರುವ ನೀತಿಯನ್ನು ವಿವರಿಸುತ್ತಿದ್ದರು. 

ಒಂದು ದಿನ ಐದು ವರ್ಷದ ಕರಿಷ್ಮ, ತಾತನಿಗೆ,


"ತಾತ, ತಾತ, ಚಿಲ್ರನ್ಸ್ ಡೆ ಎಂದರೇನು" ಅಂತ ಮುದ್ದುಮುದ್ದಾಗಿ ಕೇಳಿದಾಗ, ರಾಮಚಂದ್ರ ರಾಯರು ಮೊಮ್ಮಗಳನ್ನು ಎತ್ತಿಕೊಂಡು ಅವಳ ಕೆನ್ನೆಗಳಿಗೆ ಮುತ್ತು ಕೊಟ್ಟು. ಅದಕ್ಕೆ ತಿಳಿಯುವಂತೆ ಚಿಕ್ಕದಾಗಿ ಹೇಳಿದರು. 


"ಪಾಪು, ಚಿಲ್ರನ್ಸ್ ಡೆ ಎಂದರೆ ಮಕ್ಕಳ ದಿನಾಚರಣೆ ಅಂತ. ಈ ದಿನ ನಮ್ಮ ದೇಶದ ಪ್ರಥಮ ಪ್ರಧಾನಿ ಜವಹರ್ಲಾಲ್ ನೆಹರು (ಆ ಫೋಟೊದಲ್ಲಿದ್ದರಲ್ಲ, ಅವರು ಎಂದು ಫೋಟೊ ತೋರಿಸುತ್ತಾ)ಅವರ ಹುಟ್ಟು ಹಬ್ಬ ಅಂದರೆ ಹ್ಯಾಪಿ ಬರ್ತ್ ಡೇ. ಚಿಕ್ಕ ಮಕ್ಕಳೆಂದರೆ ಅವರಿಗೆ ತುಂಬಾ ಪ್ರೀತಿ, ಅದಕ್ಕಾಗಿ ಅವರ ಹುಟ್ಟಿದ ದಿನವನ್ನು ಮಕ್ಕಳ ದಿನಾಚರಣೆ ಯನ್ನಾಗಿ ಆಚರಿಸುತ್ತಿದ್ದರು. ಗೊತ್ತಾಯ್ತಾ ನಮ್ಮ ಪುಟ್ಟು ಪಾಪುಗೆ" 


" ಗೊತ್ತಾಯ್ತು ತಾತ" ಅಂತ ಹೇಳಿ,ಮಗು ನೆಹರು ಫೋಟೊ ಬಳಿ ಓಡಿತು. 


ಹಿಂದಿನಿಂದ ಬಂದ ರಾಮಚಂದ್ರ ರಾಯರು ತಮ್ಮ ಎಲ್ಲ ಮೊಮ್ಮಕ್ಕಳಿಗೂ ಒಂದೊಂದು ಚಾಕ್ಲೇಟ್ ನೀಡಿದರು. 


ರಜ ಮುಗಿಸಿ ಮೊಮ್ಮಕ್ಕಳು ಬೆಂಗಳೂರಿಗೆ ಹೊರಡುವಾಗ, ತಾತ ಅಜ್ಜಿಯರ ಕಣ್ಣುಗಳು ತುಂಬಿಕೊಳ್ಳುತ್ತಿದ್ದವು. ಮೊಮ್ಮಕ್ಕಳು ಸಹ ಮನಸ್ಸಿಲ್ಲದ ಮನಸ್ಸಿನಿಂದ ಹೊರಡುತ್ತಿದ್ದರು. ಮಕ್ಕಳೆಲ್ಲಾ ಹೊರಟು ಹೋದ ಮೇಲೆ ರಾಮಚಂದ್ರರಾಯರು ತಮ್ಮ ಹೆಂಡತಿ ಕಮಲಮ್ಮನ ಹತ್ತಿರ "ಮಕ್ಕಳೇ ಮನೆಗೆ ನಂದಾದೀಪ" ಎಂದು ಹೇಳಿಕೊಳ್ಳುವುದನ್ನು ಮರೆಯಲಿಲ್ಲ.  



Rate this content
Log in