ಮುದ್ದಿನ ಪುಟ್ಟೀ
ಮುದ್ದಿನ ಪುಟ್ಟೀ
ಅಮ್ಮಯ್ಯಾ!!!!!
ದಮ್ಮಯ್ಯಾ ಅಂತೀನಿ ನಿಲ್ಲೇ ಹುಡುಗೀ
ನಿನ್ನೊಟ್ಟಿಗೆ ನಾ ಓಡಲಾರೆ ಕಣೇ ಮುದ್ದೂ..
ಬುಟ್ಟೀ ಹೂಗಳ್ನೆಲ್ಲಾ ಕದ್ದೊಯ್ಯಬಾರ್ದೆ
ದೇವರಿಗೆ ಹಿಂಗ್ ಪೂಜೆ ಮಾಡುದ್ತಪ್ಪು
ಅಂತಾ, ನಿಂಗೆ ಹ್ಯಾಂಗ್ ಹೇಳೂದ್ನಾನು
ಬಳ್ಳೀತುಂಬಾ ಹೂಬಿಟ್ಟಿದ್ದು ಬಿಡಿಸಿದ್ದು
ನೀ ನೋಡ್ತಿದ್ದೇಂತ ಕಾಣ್ತು ಓಡಿಬಂದ್ಯಾ?
ಚಂದಕ್ಕಿತ್ತು ಹೂ ಅಂತ ಕದ್ದೋಡ್ತಿದ್ಯಾ
ನಿನ್ನ ರೇಷ್ಮೇಲಂಗ ಕಾಲಿಗ್ತೊಡರೀತು
ಮೆಲ್ಲಗೆ ಓಡ್ಬಾರ್ದಾ ಪುಟ್ಟೂ ಬಿದ್ರೇನ್ಗತಿ
ನಿನ್ನಪ್ಪ ಬಂದ್ಕೇಳುದ್ರೆ ನಾ ಎಂತ ಹೇಳ್ಲಿ?
ಪಕ್ಕದ್ಮನೇ ಪದ್ದಿ, ಮಗೂನಟ್ಟಿಸ್ಕೊಂಡು
ಬಂದ್ಳಂತಾ ಪುಕಾರಾದೀತು ಕಣೇ ಸುಬ್ಬೀ, ನಿಂತ್ಕೋಳ್ಳೇ ನಾನೂ ಬರ್ತೀನಿ
ಇವತ್ತೇನಿತ್ತು ಅವಸ್ರಾ, ಹಬ್ಬಾ ಅಂತ್ಲೇ?
ಗಮ್ಮಂತಾಯಿತ್ತು ಮಲ್ಗೆ, ಮಾಲೆಮಾಡ್ದೆ
ನೀನಷ್ಟ್ರಲ್ಲಿ ಎತ್ತಾಕ್ಕೊಂಡ್ ಓಡೋದಾ?<
/p>
ಮನೇ ದೇವರಿಗೊಂದಿಷ್ಟು ಬಿಟ್ಹೋಗೇ
ಕೊನೇಪಕ್ಷಾ ನನ್ನ ಮುಡೀಗೊಂದಿಷ್ಟು.
ಅಂತ ಹೇಳ್ತಿದ್ದರೂ ಓಡಿದಳವಳು..
ಪದ್ದಕ್ಕಾ!!!! ನಾ ಓಡ್ತೇ, ಹಿಡಿದ್ನೋಡು
ಚಂದಕ್ ಕಟ್ಟಿದ್ ಹೂಗ್ಳು ನಂಗಿಷ್ಟಾ
ನೀಮತ್ತೊಂದು ಮಾಲೆ ಕಟ್ಕೋ ಅಕ್ಕಾ
ನಮ್ ರಾಮನ್ಗೆ ನೀ ಕಟ್ಟಿದ್ ಹೂವಿಷ್ಟಾ
ಪೂಜೆಗ್ ನಂದೇ ಆರ್ತಿ ಅಂತ ಗೊತ್ತಾ
ಬ್ಯಾಗ ಬಂದ್ಬುಡು ಪ್ರಸಾದಾ ಕೊಡ್ತೀನಿ
ಹೌದೇನೇ ಚಿನ್ನೀ, ರಾಮಂಗೆ ಇಷ್ಟಾನೇ?
ಹಂಗಾದ್ರೆ ಸರಿಬುಡು, ಮತ್ತೆ ಕಟ್ತೀನಿ
ಪಾರಿಜಾತದ್ಮಾಲೆ, ಮಲ್ಗೇ ಮಾಲೆಗಳ್ನಾ
ದಿನಾ ಬಾರೆ ಪುಟ್ಟೂ ನಿಂಗೇಂತಾನೇ
ಇಟ್ಟಿರ್ತೀನಿ ಗಮಗಮಿಸೋ ಮಾಲೆ
ರಾಮ ಸೀತೆಗಾದ್ರೂ ಮುಡಿಸ್ಲೀ ಅಂತ.
ನಿನ್ನ ಭಕ್ತಿಗ್ಮೆಚ್ಚಿ ನನ್ಬದುಕೂ ಚಂದಾಗ್ಲಿ
ಅಂತ ವರಾನಾದ್ರೂ ಕೊಟ್ಟಾನು ರಾಮ
ಇದ್ನೆಲ್ಲಾ ನೀ ಹೇಳ್ದೇನೆ ಗೊತ್ತವನ್ನಿಗೆ...