ಬದುಕಿನ ಬವಣೆ
ಬದುಕಿನ ಬವಣೆ


ಸೀದಿರುವ ಕಾವಲಿಯ ಮೇಲೆ
ಬೊಗಸೆ ನೀರಿನ ಪ್ರೋಕ್ಷಣೆ
ಆ ಸದ್ದಿನಂತೆ ಈ ಬದುಕಾಗಿದೆ
ಮೂರಾಬಟ್ಟೆ, ಸಿಕ್ಕರೆ ತುಂಡು ರೊಟ್ಟಿ
ಅದುವೇ ಮೃಷ್ಟಾನ್ನ ಭೋಜನ!!
ಅಲ್ಲೆಲ್ಲೋ ಬಿರುಕು ಬಿಟ್ಟಿರುವ ಬೀದಿ ನಲ್ಲಿ
ಸೀರ್ಪನಿಯಲ್ಲೇ ಪೋಲಾಗುತ್ತಿರುವ ನೀರು
ಮತ್ತೆ ಬೀದಿ ಬದಿಯ ಕಸದತೊಟ್ಟಿಯಲ್ಲಿ
ಚಿಂದಿ ಆಯುವುದೇ ನಿತ್ಯ ಕಾಯಕ
ಬದುಕು ಇದು ಬದುಕಲ್ಲ ಬವಣೆ!!
ಸಾವಿರ ಕನಸುಗಳ ಕಟ್ಟಿಕೊಂಡು
ಹಾತೊರೆಯುತ್ತಿರುವ ಕಂಗಳು
ಮೂಡಿದೆ ನನಸಾಗುವ ಪ್ರಶ್ನಾರ್ಥಕ
ಹರಿದ ಬಟ್ಟೆಯಲ್ಲೇ ಮೆರವಣಿಗೆ
ಆ ಮುಗುಳು ನಗುವೇ ಈ ಬರವಣಿಗೆ!!
ನೆನೆದು ನೆದೆಗುಂದಿಗೆ ಬಿದ್ದಿದೆ ಬದುಕು
ಇಂದು ಸುಖದ ಕಲ್ಪನೆಯಲ್ಲೇ ಮುಳುಗಿದೆ
ಮನಸಿಗಿಲ್ಲ ಎಂದೂ ಸಮಾಧಾನ
ಎಲ್ಲಿದೆಯೋ ನೆಮ್ಮದಿ ಎಲ್ಲಾ ಸಾವಧಾನ
ಈ ಕನಸಿನ ಸಾಲುಗಳೇ ಕಾವ್ಯದ ಅನಾವರಣ!!
✍️ ಪುಷ್ಪ ಪ್ರಸಾದ್ ಉಡುಪಿ