ಅಪ್ಪ -ಅಮ್ಮ
ಅಪ್ಪ -ಅಮ್ಮ
ಅಮ್ಮ ಕರುಣಿಸುವಳು ಉಸಿರು
ಅಪ್ಪ ಇಡುವನು ಬೆರೆಸಿ ಹೆಸರು
ಅಮ್ಮ ತರುಲತೆಯ ಸ್ವಚ್ಛ ಹಸಿರು
ಅಪ್ಪ ನೀನೆಂದೂ ಬದುಕಿಗೆ ಬೇರು!!
ಅಮ್ಮ ಮಮತೆಯ ಸಂಕೋಲೆ
ಅಪ್ಪ ಬಾಳಿನ ಸೂತ್ರದಾರನು
ಅಮ್ಮ ಕನಸು ನನಸಾಗಿಸುವ ಮಾತೆ
ಅಪ್ಪ ಕೇಳಿದ್ದು ಕೊಡುವ ಜಾದೂಗಾರನು!!
ಅಮ್ಮ ಸಾಧನೆಯ ಮಹಾ ಮೆಟ್ಟಿಲು
ಅಪ್ಪ ಈ ಜಗದ ಶ್ರಮ ಜೀವಿಯು
ಅಮ್ಮ ಪ್ರೀತಿಸುವ ಮಹಾಮಾಯಿ
ಅಪ್ಪ ಕಟುಂಬಕ್ಕಾಗಿ ಬೆವರು ಹರಿಸುವವನು!!
ಅಮ್ಮ ಮುದ್ದಾಡಿ ಪ್ರೀತಿ ತೋರುವಳು
ಅಪ್ಪ ಗದರುತಲೇ ಪ್ರೀತಿಸುವನು
ಅಮ್ಮ ನೋವ ಅನುಭವಿಸುವಳು ಮಕ್ಕಳಿಗಾಗಿ
ಅಪ್ಪ ಕೊನೆವರೆಗೂ ದುಡಿವ ಕಾರ್ಮಿಕನಾಗಿ!!
ನಂಬಿಕೆಗೆ ಮತ್ತೊಂದು ಹೆಸರು ಅಮ್ಮ
ಭದ್ರತೆಗೆ ಭದ್ರ ತೋಳು ಅಪ್ಪ
ನೊಂದು ಬೆಂದು ಉಣಿಸುವ ಅಮ್ಮ
ಮನದಲ್ಲೇ ಅತ್ತು ಪ್ರೀತಿಸುವ ಅಪ್ಪ!!
ಅಮ್ಮ ಒಲವ ತುಂಬುವ ಸ್ಫೂರ್ತಿ
ಅಪ್ಪ ಭವಿಷ್ಯದ ಭದ್ರ ಬುನಾದಿ
ಅಮ್ಮ ಬದುಕಿನ ವಾತ್ಸಲ್ಯದ ಕೀರ್ತಿ
ಅಪ್ಪ ಖುಷಿಯ ತ್ಯಾಗದ ಪರಿಧಿ!!
ಅಮ್ಮ ಭವಿಷ್ಯದ ಗುರಿಯ ಪುಟ
ಅಪ್ಪ ಬಾಳಿಗೆ ಸ್ಫೂರ್ತಿ ನೀಡುವ ದಿಟ
ಅಮ್ಮ ಮಡಿಲೆನಗೆ ಬಂಗಾರದ ನಿಧಿ
ಅಪ್ಪನ ಪಾದವೆನಗೆ ದಿವ್ಯ ಸನ್ನಿಧಿ!!
✍️ ಪುಷ್ಪ ಪ್ರಸಾದ್ ಉಡುಪಿ
