ಅಂಗೈಯಲ್ಲಿ ಬಿದ್ದ ನಕ್ಷತ್ರ
ಅಂಗೈಯಲ್ಲಿ ಬಿದ್ದ ನಕ್ಷತ್ರ


ಅಂಗೈಯಲ್ಲಿ ಬಿದ್ದ ನಕ್ಷತ್ರ
ಕ್ಷಣ ಹೊತ್ತು ಕೂತು
ಸುಖವ ಉಣಿಸಿ
ಮತ್ತೆ ಹಾರಿದ್ದು ಬಾನ ಗೂಡಿಗೆ
ಈಗಲೂ ನೋಡುತ್ತೇನೆ ಅಷ್ಟೇ
ಸುಖವ ತಾಗುವ ಅನುಭವ ನನಗಿಲ್ಲ
ಮರೆಯಲಾಗುತ್ತಿಲ್ಲ ಕೂತೆದ್ದ ಜಾಗ
ಕಾಡುತಿದೆ ಅದು ಸಿಹಿ ಕ್ಷಣದ ಹೊತ್ತು !
ಶಬರಿಯಂತೆ ಕಾದೆ
ಆಗಸದತ್ತ ಮುಖ ಮಾಡಿ
ಸುಕ್ಕುಗಟ್ಟಿದ್ದ ವು ಅಂಗೈ ಗೆರೆಗಳು
ಕಂತು ಕಂತು ಲೆಕ್ಕದಲಿ ಮಾಗಿ
ಚುಕ್ಕಿಗೆ ಮಾತ್ರ ಮುಪ್ಪು ಆವರಿಸಿದೆ
ಬೆಳಕು ಹಾಗೇ ಇತ್ತು ಕಣ್ಣಲ್ಲಿ !
ವಯಸ್ಸಾದ ಕಣ್ಣುಗಳಿಗೆ
ಮಂಪರು ಬಂದು ಕೆಂಡವಾಗಿದ್ದು ನಕ್ಷತ್ರ
ಅನಿರೀಕ್ಷಿತ...!
ನನ್ನಲ್ಲೇ ಉಡುಗಿದೆ
ಕೆಂಡದಂತಹ ಅನುಭವಗಳು !
ನಾನೇಕೆ ಅಂಗೈ ಸುಟ್ಟುಕೊಳ್ಳಲಿ ?
ಅಂಗೈಯಲ್ಲಿ ಬಿದ್ದ ನಕ್ಷತ್ರವೇ
ಬರುವುದಾದರೆ ಬರಲಿ
ಸದಾ ಸ್ವಾಗತ !!