STORYMIRROR

Thrineshwara Mysore

Others

3  

Thrineshwara Mysore

Others

ಪುಷ್ಪದೊಡನೆ ನನ್ನ ಸಂಭಾಷಣೆ

ಪುಷ್ಪದೊಡನೆ ನನ್ನ ಸಂಭಾಷಣೆ

2 mins
11.9K

ನೀನೇಕಿಷ್ಟು ಸುಂದರವಾಗಿದ್ದೀಯೆ ಎಂದು ನಾನೊಮ್ಮೆ ಕೇಳಲು

ಹೂವೊಂದು ಮರು ಪ್ರಶ್ನೆ ಹಾಕಿತು:

"ಸುಂದರವಾಗಿರದ ಹೂವನ್ನ ಎಂದಾದರೂ ನೋಡಿದ್ದೀಯಾ?"


ಒಂದಕ್ಕಿಂತ ಒಂದು ಹೂವು ಸುಂದರವಾಗಿಯೇ ಇರುವುದಲ್ಲ ಎಂದರೆ

ಆ ಹೂವು ಮತ್ತೆ ಅದೇ ಪ್ರಶ್ನೆಯನ್ನ ಹಾಕಿತು:

ಎಲ್ಲ ಹೂಗಳೂ ಒಂದಲ್ಲ ಒಂದು ತರ ಸುಂದರವಾಗಿಯೇ ಇವೆ ಎನ್ನಲು

ಹೂವು ನಂತರ ಹೇಳಿತು:

"ಹಾಗಾದರೆ, ಹೂವೆಂದರೆ ಸೌಂದರ್ಯ,

ಸೌಂದರ್ಯ ಎಂದರೆ ಹೂವು ಎಂದಾಯಿತು"


ನೀ ಹೇಳುವುದೇನೋ ಸರಿಯೇ, ಆದರೂ

ಎಲ್ಲ ಹೂಗಳೂ ಒಂದು ರೀತಿ ಸುಂದರವಾಗೇ ಕಾಣುವುದೇಕೆ?


ಅದಕ್ಕೆ ಹೂವು ಹೇಳಿತು:

"ಹೌದು, ಕೆಲವು ಹೂಗಳು ಒಂಟಿಯಾಗೇ ಅಂದವಾಗಿ ಕಂಡರೆ

ಇನ್ನು ಕೆಲವು ಗೊಂಚಲಿನಲ್ಲಿ ಅಂದವಾಗಿ ಕಾಣುತ್ತವೆ,

ಇನ್ನು ಕೆಲವು, ತಮ್ಮ ಮರ ಅಥವಾ ಬಳ್ಳಿಯ ಮೇಲಿರುವಾಗ

ಮತ್ತಷ್ಟು ಸುಂದರವಾಗಿ ಕಾಣುತ್ತವೆ"


ಅಂದರೆ, ನಾವು ನೋಡುವ ರೀತಿಯಲ್ಲಿ ಅವುಗಳ ಅಂದ ಕಾಣುವುದೇ?


"ಇರಬಹುದು, ಕೆಲವರಿಗೆ ಹೂಗಳ ಸುವಾಸನೆ ಇಷ್ಟವಾದರೆ,

ಇನ್ನು ಕೆಲವರಿಗೆ, ಅವುಗಳ ಆಕಾರ, ಬಣ್ಣಗಳು ಇಷ್ಟವಾಗುತ್ತವೆ"


ಹಾಗಾದರೆ, ನಮ್ಮ ನಮ್ಮ ಇಷ್ಟದಲ್ಲಿ ಅವುಗಳ ಸೌಂದರ್ಯ ಅಡಗಿದೆಯೇ?


"ಹೊರ ನೋಟದಲ್ಲಿ ಅದು ಹಾಗೆನಿಸಬಹುದು, ಆದರೆ ಆಗ ಅದೊಂದು

ಆಕರ್ಷಣೆ ಎಂದೆನಿಸುತ್ತದೆ ಅಷ್ಟೇ, ಆಕರ್ಷಣೆ ಇಲ್ಲವಾದಲ್ಲಿ

ಸೌಂದರ್ಯದ ಬದಲಾಗಿ ಹೂವು ಕುರೂಪವಾಗಿಯೂ ಕಾಣಬಹುದಲ್ಲವೇ?"


ಹೌದು, ನಿನ್ನ ಮಾತಿನಲ್ಲಿ ಸತ್ಯವಿರುವಂತಿದೆ,

ಹಾಗಾದರೆ, ನಿಜವಾದ ಸೌಂದರ್ಯ ಎಂದರೇನು?


"ಆಕರ್ಷಣೆಯೇ ನಿಜವಾದ ಸೌಂದರ್ಯ ಆಗಲಾರದು, ಇಲ್ಲವಾದರೆ,

ಸೌಂದರ್ಯಕ್ಕೆ ವಿರುದ್ಧವಾದುದೊಂದು ಇರಬೇಕಾಗುತ್ತದೆ"


ಅಂದರೆ, ಕುರೂಪ ಸೌಂದರ್ಯಕ್ಕೆ ವಿರುದ್ಧವಾದುದೇ?


"ಇಲ್ಲ, ಸೌಂದರ್ಯಕ್ಕೆ ವಿರುದ್ಧ ಇರಲಾರದು, ಅದಕ್ಕೆ ಅಲ್ಲವೇ

ಯಾವುದೇ ಹೂವನ್ನ ಯಾರೂ ಚೆನ್ನಾಗಿಲ್ಲ ಎಂದು ಹೇಳುವುದಿಲ್ಲ?"


ಸರಿ, ನೀನೇಕೆ ನನಗೆ ಸುಂದರವಾಗಿ ಕಾಣುತ್ತಿರುವೆ ಎಂದು ಹೇಳಬಲ್ಲೆಯಾ?


"ನೀನೆ ಆಲೋಚಿಸಿ ನೋಡು, ಈಗಿನ ನನ್ನ ಸೌಂದರ್ಯ

ನಾನು ಬಾಡಿಹೋದ ಮೇಲೆ ಅಥವಾ ನನ್ನ ದಳಗಳು ಒಂದೊಂದಾಗಿ

ಉದುರಿಹೋದ ಮೇಲೆ ಹಾಗೆ ಇರುವುದೆಂದು ನಿನಗನಿಸುತ್ತದೆಯೇ?"


ಇಲ್ಲ, ಆದರೂ ನೀನು ನನಗೆ ಇಷ್ಟವಾಗೇ ಇರುತ್ತೀಯೆಂದು ನನಗನಿಸುತ್ತದೆ.


"ಅಂದರೆ ನನ್ನ ಬಾಹ್ಯ ರೂಪದಲ್ಲಿ ಮಾತ್ರ ನನ್ನ ಸೌಂದರ್ಯ ಇಲ್ಲ

ಎಂಬುದು ನಿನ್ನ ಅನಿಸಿಕೆಯಲ್ಲವೇ?"


ಹೌದು, ಹಾಗೆ ತೋರುತ್ತದೆ


"ಹಾಗಾದರೆ, ಸಲ್ಪ ಆಳವಾಗಿ ನೋಡು, ಇನ್ಯಾವುದರಿಂದ

ನನ್ನ ಸೌಂದರ್ಯ ನಿನಗೆ ಕಾಣುತ್ತಿದೆ ಎಂದು"


ನಿನ್ನ ಕೋಮಲತೆ, ಸುವಾಸನೆ ಮತ್ತು ಏಲ್ಲಕ್ಕಿತ ಹೆಚ್ಚಾಗಿ

ನಿನ್ನ ಈ ಇರುವಿಕೆ ನನಗೆ ತುಂಬಾ ಇಷ್ಟವಾಯಿತು


"ನನ್ನ ಇರುವಿಕೆಯಲ್ಲಿ ಏನೆಲ್ಲಾ ಸುಂದರವಾಗಿ ಕಂಡಿತು ನಿನಗೆ?"


ಒಂದು, ಮಳೆಯಿರಲಿ, ಬಿಸಿಲಿರಲಿ, ಎಲ್ಲ ಕಾಲದಲ್ಲಿಯೂ

ನೀನು ಅರಳುತ್ತಾ, ಸುವಾಸನೆ ಬೀರಿ ನಗುತ್ತ ಇರುವೆ

ಎರಡು, ನಿನ್ನ ಗಿಡದಿಂದ ಬೇರ್ಪಟ್ಟು ನೀನು ಸತ್ತುಹೋದ ಮೇಲೂ

ನಿನ್ನ ಸೌಂದರ್ಯ, ಸುವಾಸನೆ ಹೊರಚೆಲ್ಲುತ್ತಲೇ ಸಾಗುವೆ

ಮೂರು, ಯಾವುದೇ ಪ್ರತಿಫಲ ಅಪೇಕ್ಷಿಸದೆ ನಿನ್ನ

ಸೌಂದರ್ಯ, ಸುವಾಸನೆಯಿಂದ ಎಲ್ಲರನ್ನೂ ಮುದಗೊಳಿಸುವೆ,

ನಿನ್ನ ನೋಡಿ ಇಂತಹ ಚಿಂತೆ, ಭಯ, ವ್ಯಾಕುಲತೆಯಾದರೂ

ಕ್ಷಣ ಕಾಲವಾದರೂ ಮಾಯವಾದಂತೆ ತೋರುತ್ತದೆ

ನಾಲ್ಕು, ನಿನ್ನ ಈ ಮುಗ್ಧ ಚೆಲುವಿನಿಂದ ಯಾರೂ ನಿನ್ನನ್ನ

ನಾಶ ಮಾಡಲು ಇಚ್ಛಿಸುವುದಿಲ್ಲ, ಬದಲಾಗಿ ನಿನ್ನನ್ನ

ಅತೀ ಸುರಕ್ಷತೆಯಿಂದ ಕಾಪಾಡುವರು


"ಇವೆಲ್ಲ ಹೊರ ನೋಟದಲ್ಲಿ ಕಾಣುವಂತವಲ್ಲ, ಆದರೂ

ನೀನು ಅವನ್ನೆಲ್ಲ ನಿನ್ನ ಸಂವೇದನಾ ಶೀಲತೆಯಿಂದ ತಿಳಿದುಕೊಂಡಿರುವೆ"


ಹೌದು, ನೀನು ಹೇಳುವುದು ನಿಜವೆ


"ಕೆಲವರಿಗೆ ಮರ ಗಿಡಗಳು, ಪರ್ವತಗಳು, ನದಿ, ಸಾಗರಗಳು

ಸುಂದರವಾಗಿ ತೋರಿದರೆ, ಕೆಲವರಿಗೆ ಕವನಗಳು, ಕಥೆಗಳು, ಚಿತ್ರಗಳು

ಸುಂದರವಾಗಿ ತೋರುತ್ತವೆ, ಇನ್ನು ಕೆಲವರಿಗೆ ಒಬ್ಬರ ಪ್ರಾಮಾಣಿಕತೆ,

ಮುಗ್ಧತೆ, ಸರಳತೆಗಳಲ್ಲಿ ಸೌಂದರ್ಯ ಕಾಣುತ್ತದೆ. ಇದ್ಯಾವುವೂ

ಎಂದಿಗೂ ನಾಶವಾಗುವಂತವಲ್ಲ, ಅವುಗಳಿಗೆ ವೈರುಧ್ಯಗಳಿರುವುದಿಲ್ಲ,

ಇವೆಲ್ಲ ನಮ್ಮ ಒಳ ಮನಸ್ಸಿಗೆ ಅಂದರೆ ಹೃದಯಕ್ಕೆ ಅರಿವಾಗುವಂತವು,

ಇಂತಹ ಅರಿವಿಗೆ ಬೇಕು ಸಂವೇದನಾಶೀಲತೆ, ಪ್ರೀತಿ."


ನೀ ಹೇಳುವುದೆಲ್ಲ ಸತ್ಯವೇ, ನಿನ್ನ ಈ ಕೋಮಲತೆ

ದುರ್ಬಲವಾಗಿ ತೋರಿದರೂ ಯಾರೂ ನಿನ್ನನ್ನ ನಾಶಮಾಡಲಾರದ

ಕಾರಣ ಆ ದುರ್ಬಲತೆಯೇ ನಿನ್ನ ಅವಿನಾಶವಾಗಿರಿಸಿದೆ.


"ಹೌದು, ಮುಗ್ಧತೆಯ ಮನಸ್ಸಿಗೆ ಎಂದಿಗೂ ನೋವಿನ ಅರಿವಾಗದು ಮತ್ತು

ಇತರರಿಗೆ ನೋವನ್ನ ಉಂಟುಮಾಡದು. ಅಂದರೆ, ನೋವು ಎಂದರೆ

ಏನು ಎಂಬುದೇ ಅದಕ್ಕೆ ತಿಳಿದಿರುವುದಿಲ್ಲ. ಅಂತೆಯೇ, ಯಾರೂ

ಅಂತಹ ಮನಸ್ಸನ್ನ ಹಿಂಸಿಸಲು ಇಷ್ಟಪಡುವುದಿಲ್ಲ.

ಅದೇ,ನಿಜವಾದ ಪ್ರೀತಿ, ಸಂವೇದನಾ ಶೀಲತೆ. "



Rate this content
Log in