ಪ್ರಕೃತಿಯೇ ನೀನೇಕೆ ಮೌನವಾಗಿರುವೆ?
ಪ್ರಕೃತಿಯೇ ನೀನೇಕೆ ಮೌನವಾಗಿರುವೆ?


ಬಾ ಸುಂಟರಗಾಳಿಯೇ ಬಾ ನಾನಿರುವಲ್ಲಿಗೆ
ಅಗಸದೆತ್ತರಕೆ ಕೊಂಡೊಯ್ದರೆ ನೀ ನನ್ನ
ಕಣ್ತುಂಬ ಒಮ್ಮೆ ನೋಡಿ ಆನಂದಿಸುವೆ
ಸುಂದರವಾದ ನನ್ನ ಈ ವಾಸದ ಭೂಮಿಯನ್ನ;
ಬಾ ವೇಗದ ಮೀನೇ ಬಾ ಸಮುದ್ರ ದಡದ ಮೇಲಕೆ
ನೀರೊಳಗೆ ವಿಹರಿಸಲೆಂದು ಕರೆದೊಯ್ದರೆ ನನ್ನ
ಕಣ್ತುಂಬ ಒಮ್ಮೆ ನೋಡಿ ಆನಂದಿಸುವೆ
ನಿಗೂಢವಾದ ಜಲಚರಗಳ ಈ ಭೃಹತ್ ಲೋಕವನ್ನ
ಸುಂಟರಗಾಳಿಯೆ ನಾನಿದ್ದಲ್ಲಿಗೆ ಬಂದಿಳಿಯುವ ಮುನ್ನ
ನನ್ನನ್ನೆಲ್ಲಿಯೋ ಬಿಟ್ಟು ನೀನು ಮಾತ್ರ ಮರೆಯಾಗದಿರು,
ನೀನೋ ವೇಗದ ಮೀನೆ ನನಗೆ ಉಸಿರು ಕಟ್ಟುವ ಮೊದಲೇ
ದಡದ ಮೇಲಕೆ ನನ್ನ ತಂದಿರಿಸದೆ ನೀ ಹೋಗದಿರು;
ನೆಲದ ಮೇಲಿನ ಸುಂದರ ತಾಣಗಳೆಲ್ಲವ ನೋಡುವ ಅಸೆ
ಆದರೇನು ಮಾಡಲಿ, ಹಲವು ಅಡಚಣೆಗಳು, ನಿರ್ಬಂಧಗಳು,
ಕೊಲೆ ಸುಲಿಗೆಗಳು, ಮೋಸ ವಂಚನೆಗಳು ಎಲ್ಲೆಡೆ ತುಂಬ
ಿ
ಸದಾ ಕಟ್ಟಿಹಾಕಿದಂತಾಗಿವೆ ನನ್ನ ಈ ಕಾಲುಗಳು;
ಮನುಷ್ಯನ ಆಲೋಚನೆಗಳು ನಿರ್ಮಿಸಿದ ವಸ್ತುಗಳಲ್ಲಿ
ಅದ್ಭುತ, ಆಕರ್ಷಣೆ, ರಮಣೀಯತೆಗಳೆಲ್ಲವೂ ತುಂಬಿವೆ
ಆದರೂ, ನೈಜ ಪ್ರೀತಿಯ ಕೊರತೆ ಎಲ್ಲೆಡೆ ಕಾಣುತ್ತಿರಲು
ಅಸಹಕಾರ, ಅವ್ಯವಸ್ಥೆ, ಆತಂಕಗಳು ನಮ್ಮ ಕಾಡುತ್ತಿವೆ.
ಸಕಲ ಕಲ್ಮಶಗಳು ಎಡೆಬಿಡದೆ ಸೇರಿಕೊಳ್ಳುತ್ತಿದ್ದರೂ
ತನ್ನನ್ನ ತಾನೇ ನವೀಕರಣಗೊಳ್ಳುತ್ತ ಸಾಗುವ ನದಿಯಂತೆ
ನಿನ್ನ ವಿನಾಶ ಎಡೆಬಿಡದೆ ಆಗುತ್ತಿದ್ದರೂ ಏನೂ ಮಾಡದೆ
ಮೌನವಾಗಿರುವ ಪ್ರಕೃತಿಯೇ ನಿನಗಿಲ್ಲವೇ ಒಂದಿಷ್ಟು ಚಿಂತೆ?
ಸಕಲ ಜೀವರಾಶಿಗೂ ನೀನೊಬ್ಬನೇ ಪ್ರಥಮ ಗುರುವಾಗಿ
ಕಾಲಕಾಲಕ್ಕೆ ನಮ್ಮ ಪ್ರಜ್ಞೆಯನ್ನ ಪರಿಷ್ಕರಿಸುವ ಸಲುವಾಗಿ
ಮಹಾವೀರ, ಬುದ್ಧ, ಬಸವಣ್ಣ, ಕೃಷ್ಣಮೂರ್ತಿಗಳಿಂದ
ಜ್ಞಾನಧಾರೆಯ ಮಾಡುವೆ ನೀನು ನಮ್ಮ ಮೇಲಿನ ಪ್ರೀತಿಗಾಗಿ.