ಒಡಲೊಳಗಿನ ಕಿಚ್ಚು
ಒಡಲೊಳಗಿನ ಕಿಚ್ಚು
ಕಾಡ್ಗಿಚ್ಚು ಬಿರುಗಾಳಿಯೊಡಗೂಡಿ ಕಾಡಿನ ಜೀವರಾಶಿಯನ್ನ
ಕೆಲವೇ ತಾಸುಗಳೊಳಗೆ ಸುಟ್ಟು ಭಸ್ಮ ಮಾಡುವುದು
ಆದರೂ, ಕಾರ್ಮೋಡಗಳಾವರಿಸಿದ ಆಗಸದಿಂದ ಮಳೆ ಸುರಿಯಲು
ಉರಿವ ಬೆಂಕಿ ನಿಧಾನವಾಗಿಯಾದರೂ ಶಮನವಾಗುವುದು;
ಧರೆಯ ಗರ್ಭದಲಿ ಅಡಗಿರುವಂತೆ ತೋರುವ ರಕ್ಕಸ ಬೆಂಕಿ
ಗರ್ಭವನ್ನೇ ನುಂಗಿ ಹಾಕುತ್ತ ಅವಿನಾಶವಾಗಿತ್ತು
ತಾನಿರುವುದು ಸತ್ಯವೆಂದು ಮನವರಿಕೆ ಮಾಡಲೆಂಬಂತೆ
ನುಂಗಿದ್ದೆಲ್ಲವನ್ನಆಗಾಗ್ಗೆ ಆಕಾಶದೆತ್ತರಕೆ ಹೊರ ಚೆಲ್ಲುತಲಿತ್ತು;
ನುಂಗಿ ಅರಗಿಸಿಕೊಳ್ಳಲಾಗದುದನ್ನ ಎಡೆಬಿಡದೆ ಕಕ್ಕುತಲಿರಲು,
ಊರು ಕೇರಿ, ಕಾಡು ಮೇಡು, ಹಳ್ಳ ಕೊಳ್ಳಗಳನ್ನ ಲೆಕ್ಕಿಸದೆ
ಮನದಿಚ್ಛೆಯಂತೆ ಸರಸರನೆ ಹರಿದು ಹೋಗುತ್ತಲಿರಲು,
ಈ ಬೆಂಕಿಯ ನಂದಿಸಲೆಂದು ಸಾಗರವೇ ಉಕ್ಕಿ ಒಮ್ಮೆ ಬರಲಾಗದೆ?
ಧರೆಯ ಒಡಲೊಳಗಿನಕಿಚ್ಚು ಧರೆಯನ್ನೇ ಸುಡುತ್ತಿರಲು
ಆಗಸವಾಗಲೀ, ಸಾಗರವಾಗಲೀ ನೀರ ಹರಿಬಿಟ್ಟರೇನು ಫಲ?
ನಮ್ಮ ಒಡಲೊಳಗಿನ ಕಿಚ್ಚು ಒಡಲನ್ನೇ ಸುಡುವಾಗ
ಬಾಹ್ಯದಲಿ ತೋರಿಕೆಗೆ ಮಾಡುವ ಶಮನದ ಕೆಲಸವೆಲ್ಲ ನಿಷ್ಪಲ.