ಇದರ ಮರ್ಮವೇನೆಂದು ಹೇಳಬಲ್ಲಿರಾ?
ಇದರ ಮರ್ಮವೇನೆಂದು ಹೇಳಬಲ್ಲಿರಾ?


ಪಕ್ಷಿಯೊಂದನ್ನ ಕಣ್ಣುಗಳು ದಿಟ್ಟಿಸಿ ನೋಡುವಾಗ
ಮನಸ್ಸಿನೊಳಗೆ ಗಹನವಾದೊಂದು ವಿಷಯ ಆವರಿಸಿರಲು
ಆ ಪಕ್ಷಿಯು ಇರುವಲ್ಲೇ ಮಾಯವಾಗಿತ್ತು.
ತಪ್ಪಿಸಿಕೊಂಡು ಓಡೋಡಿ ಬರುವಾಗ ಭೂತವೊಂದು
ಥಟ್ಟನೆ ಕಣ್ಣೆದುರಿಗೆ ಬಂದು ನಿಂತಾಗ
ಭಯಭೀತವಾದ ಮನಸ್ಸಿಗೆ ಭೂತ ಕಾಣಿಸದಂತಾಯಿತ್ತು.
ಹಸಿದ ಹೆಬ್ಬುಲಿಗೆ ನವಜಾತ ಕರುವೊಂದು ಸಿಲುಕಿಕೊಂಡಾಗ
ಕರುವಿನ ಮುಗ್ಧತೆಯನ್ನ ಕಂಡ ಹೆಬ್ಬುಲಿಗ
ೆ
ತನ್ನ ಹಸಿವಿನ ಅರಿವೇ ಇಲ್ಲದಂತಾಯಿತ್ತು.
ಹಸಿವೆಯಿಂದ ಕಂದಮ್ಮವೊಂದು ಎಡೆಬಿಡದೆ ಅಳುತಿರಲು
ತನ್ನ ಮೊಲೆವಾಲು ಬತ್ತಿಹೋಗಿರುವುದ ಕಂಡ ತಾಯಿಯ
ನಿತ್ಯದ ಜೋಗುಳ ಹಾಡಿಗೆ ಕಂದಮ್ಮನ ಹಸಿವು ಮಾಯವಾಗಿತ್ತು.
ತನ್ನ ಸೌಂದರ್ಯ, ಸುವಾಸನೆಯಿಂದ ಎಲ್ಲರನು ಆಕರ್ಷಿಸುತ್ತಿರಲು
ಪುಷ್ಪವೊಂದು ತನ್ನ ದುರ್ಬಲತೆಯ ಬಗ್ಗೆ ಚಿಂತಿಸುವಾಗ
ಅದರ ದುರ್ಬಲತೆಯೇ ಪುಷ್ಪವನ್ನ ಅವಿನಾಶವಾಗಿಸಿತ್ತು.