ಹುಟ್ಟು ಸಾವು
ಹುಟ್ಟು ಸಾವು


ನಮ್ಮ ಜೀವನ ಚರಿತ್ರೆ ಎಂಬ ಗ್ರಂಥದಲ್ಲಿ
ಇದ್ದವು ಕೆಲವು ಓದಿಲ್ಲದ ಪುಟಗಳು
ಓದಲಾಗದುದನ್ನ ಬರೆದುದೇಕೆಂದು ಕೇಳದಿರಿ
ಜೀವನ ನಾವು ಬಯಸಿದಂತೆ ಆಗದಲ್ಲವೇ?.
ಹುಟ್ಟಿನಿಂದಾದ ಸಂಸ್ಕಾರ, ಬೆಳೆದ ಪರಿಸರದ ಸಂಸ್ಕಾರ,
ಕಲಿತ ವಿದ್ಯೆಯಿಂದಾದ ಸಂಸ್ಕಾರ, ಬೆರೆತ ಹೊರ ಪ್ರಪಂಚದ
ಒಡನಾಟದಿಂದಾದ ಸಂಸ್ಕಾರ ಮತ್ತು ಪರಂಪರೆಯ ಸಂಸ್ಕಾರ,
ಇವುಗಳ ಮಂಥನ ಹಾಗೂ ಸಂಘರ್ಷಗಳ ಪರಿಣಾಮ ಈ ಜೀವನ.
ಹುಟ್ಟು ಆಕಸ್ಮಿಕ, ಸಾವು ಖಚಿತವೆಂಬುದು ತಿಳಿದ ವಿಷಯವು,
ಎರಡೂ ನಮ್ಮ ಅರಿವಿಗಾಗಲೀ, ನಿಯಂತ್ರಣಕ್ಕಾಗಲೀ ನಿಲುಕದವು,
ಆದರೆ, ಇವುಗಳ ನಡುವೆ ಬಂಧಿತವಾದ ಜೀವನವೇಕೆ
ನಾವು ಬಯಸಿದಂತೆಲ್ಲ ಸದಾ ಸಾಗದೆಂದು ಅರಿವಾಗಬೇಕಷ್ಟೆ.
ಹಲವು ತರಹದ ಬಯಕೆಗಳು ನಮ್ಮನ್ನ ಕಾಡುವುದೇಕೆ?
ಕಾಡುವುದಾದರೆ ಅವು ಇರಲೇಬಾರದೆಂದು ಹೇಳಲು ಸಾಧ್ಯವೇ?
ಬಯಕೆಗಳು ಸದಾ ಮನಸ್ಸಿಗೆ ಮುದಗೊಳಿಸುವ ಪುಷ್ಪಗಳಿದ್ದಂತೆ
ಸುಖ ದುಃಖಗಳ ಜೀವನ ಉತ್ಸಾಹದಿಂದ ಸಾಗಲು ಅವು ಬೇಕು.
ನಮ್ಮ ನಮ್ಮ ಬಯಕೆಗಳಂತೆ ಹುಟ್ಟು ಸಾವುಗಳು ಆಗದೆಂದು
ಜೀವನವಾದರೂ ನಮ್ಮ ಬಯಕೆಗಳಂತೆ ಸಾಗಲೆಂಬ
ನಿರೀಕ್ಷೆ ನಮ್ಮಲ್ಲಿ ಸದಾ ಇರುವುದು ಸಹಜವೇ,
ನಿರೀಕ್ಷೆಗಳು ಫಲಿಸಲೆಂದು ಸಾಹಸ ಪಡುವುದೂ ಸಹಜವೇ.
ಹುಟ್ಟು ಸಾವುಗಳು ಕ್ಷಣಿಕ ಘಟ್ಟಗಳಾದರೂ
ಅವುಗಳಿಂದ ಭಯ, ಬೇಸರ ಉಂಟಾಗಲು ಕಾರಣವೇನು?
ಕೊನೆಗೊಮ್ಮೆ ನಶಿಸಿಹೋಗುವ ಈ ಭೌತ ಶರೀರವನ್ನ
ಹಿಂಸಿಸದೆ, ದುರುಪಯೋಗಪಡಿಸದೆ ಇರುವುದು ಜೀವನದ ಭಾಗ.
ಪ್ರತೀ ಸಾವಿನಲ್ಲಿ ಹೊಸ ಹುಟ್ಟಿರುವ ಅರಿವು ನಮಗಾಗಬೇಕು,
ಹೊಸತದನ್ನ ಗಳಿಸಲು ಹಳೆಯದರ ಸಾವನ್ನ ಬಯಸಲೇಬೇಕು,
ಯಾವುದು ಸದಾ ಮುಂದುವರೆಯುತ್ತಿರುವುದೋ ಅದರಲ್ಲಿ
ಯಾವ ಹೊಸತನವೂ ಇರುವುದಿಲ್ಲವೆಂದು ತಿಳಿಯಬೇಕು.
ಇಂತಹ ಹುಟ್ಟು ಸಾವುಗಳನ್ನ ಜೀವನದಲ್ಲಿ ಸದಾ ಕಾಣಬೇಕು,
ಹಳೆಯ ಕಹಿ ನೆನಪುಗಳನೆಲ್ಲವ ಒಮ್ಮೆ ಮರೆಯಬೇಕು
ನಿನ್ನೆ ನಾಳೆಗಳು ನಮಗೆ ಎಂದೂ ಎಟುಕದಾಗಿ,
ದಿಟವಾಗಿರುವ ಇಂದಿನ ಕ್ಷಣಗಳನ್ನ ಸದಾ ಗಮನಿಸುತ್ತಿರಬೇಕು.
ಕಹಿ ನೆನಪುಗಳು ಜೀವನದ ಓದಲಾಗದ ಪುಟಗಳಿದ್ದಂತೆ
ನೆನೆಸಿಕೊಂಡರೆ ಮುಜುಗರವಾಗಿ, ಹೇಳಿಕೊಂಡರೆ ಭಯವಾಗಿ,
ಜೀವನ ಪರ್ಯಂತ ಕೊರಗದೆ, ಹರ್ಷ ಚಿತ್ತದಿಂದಿರಲು
ನೆನಪುಗಳ ನಿರಂತರ ಹುಟ್ಟು ಸಾವನ್ನ ಮೌನದಿ ಸ್ವೀಕರಿಸಬೇಕು.