ಹನಿ
ಹನಿ
1 min
311
ಮುದ್ದು ಕಂದಾ,
ಚುಮುಚುಮು ಚಳಿಯ
ಮುಂಜಾನೆಯ ನೋಟದಲಿ,
ಚಿಗುರ ಮುತ್ತಿಡುವ
ಇಬ್ಬನಿಯ ಹನಿ ನೀನಾಗಬೇಕು!
ಮೋಡದಿಂದ ಭುವಿಗೆ
ಮಳೆಯಾಗಿ ಇಳಿವ ವೇಳೆಯಲಿ,
ಕಾಮನಬಿಲ್ಲಿಗೆ ಕಾರಣವಾಗುವ
ಮಳೆ ಹನಿ ನೀನಾಗಬೇಕು!
ನೀರಾಗಿ ಭುವಿಯ ಮೈಯ
ತಾಕುವ ಮೊದಲಲಿ,
ದುಂಬಿ ಹೀರುವ ಬಿರಿವಹೂಗಳ
ಜೇನ ಹನಿ ನೀನಾಗಬೇಕು!
ತುಸುಕಾಲ ನಿಲ್ಲುವ
ಕೆರೆ ಕುಂಟೆ ಬಾವಿ ಸರೋವರಗಳಲಿ,
ಪದ್ಮಪತ್ರದ ಮೇಲೆ ಹೊಳೆವ
ಬಿಂದುವಿನ ಹನಿ ನೀನಾಗಬೇಕು!
ಕಡಲು ಸಾಗರ ಸೇರುವ
ಅಪರಿಮಿತ ನೀರ ಹನಿಗಳಲಿ,
ಚಿಪ್ಪೊಳಗೆ ಮುತ್ತಾಗುವ
ಸ್ವಾತಿಯ ಹನಿ ನೀನಾಗಬೇಕು!
ಅಂತೆಯೇ;
ನಿನ್ನದೇ ಪ್ರಪಂಚಕೆ ಕಾವಲಿರುವ
ಈ ಅಮ್ಮನ ಕಣ್ಣುಗಳಲಿ,
ಸದಾ ಆನಂದಭಾಷ್ಪದ
ಕಣ್ಣೀರ ಹನಿಗೆ ಕಾರಣ ನೀನಾಗಬೇಕು!
