ಆ ದಿನಗಳು
ಆ ದಿನಗಳು
ಉಳಿಯಬಾರದಿತ್ತೇ ಹಾಗೆ
ಹಿಡಿದ ಮಳೆ ಹನಿ ನೀರು,
ಹರವಿದ ಪುಟ್ಟ ಅಂಗೈನ ಒಳಗೆ
ಜಾರುತಾ ಸೋರಿ ಹೋಗದೆ ಚೂರು!
ಮಹಡಿ ಮೇಲ್ಚಾವಣಿ ಕೆಳಗೆ
ಕೈಚಾಚಲು ಇರಲಿಲ್ಲ ತಕರಾರು,
ಮೋಡವು ಕರಗಿದಾಗ ಬುವಿ ಕರೆಗೆ
ತಪ್ಪದೆ ತಂಪೆರೆಸುವುದೇ ನಮ್ಮ ಕರಾರು!
ಚಿಟಪಟನೆ ಕಿವಿ ಹೊಕ್ಕ ಸದ್ದಿಗೆ
ಜಗಲಿ ಮೇಲೆ ಆಗುತಾ ನಾವು ಹಾಜರು,
ಕಂಬಕ್ಕೊರಗಿ ಬಾಗಿ ನಿಂತ ಭಂಗಿಗೆ
ಸ್ತಬ್ಧ ಚಿತ್ರಗಳಾಗುತ್ತಿದ್ದೆವು ಸರಿಸುಮಾರು!
ನೆನೆವ ಭಯದಲ್ಲಿ ಶಾಲೆಯುಡುಗೆ
ಹಿಡಿದಿಡಲೇ ಬೇಕಿತ್ತು ಅದನ್ನು ಜರೂರು,
ಮೈಮನಸಿಗೆ ಏರಿದ್ದ ಸಂಭ್ರಮ ಧಗೆಗೆ
ಎರಚಲಲಿ ಸಾಂತ್ವನಿಸುವುದಾಗಿತ್ತು ನವಿರು!
ಬೊಗಸೆ ತುಂಬಿ ತುಳುಕಿದ್ದ ನೀರಿಗೆ
ದಾರಿಯಲೋಡುವ ಬಯಕೆ ಜೋರು,
ಕಾಗದ ದೋಣಿ ಮಾಡುವ ಹೊತ್ತಿಗೆ
ಕಾಲ ಉರುಳಿ ಹೋದದ್ದೇ ಈಗ ಬೇಜಾರು!
ಬಂದರೀಗ ಆ ದಿನಗಳು ನೆನಪಿಗೆ
ಸುರಿದಂತೆ ಇಳೆಗೆ ಮತ್ತೊಮ್ಮೆ ಮುಂಗಾರು,
ಪುಟಿದೇಳುವ ಮನದ ಆ ಬಯಕೆಗೆ
ವಯಸ್ಸಿನ ಮಿತಿ ಹಾಕಬಹುದೇ ಎಂದಾದರೂ??
